'ಚುನಾವಣೆ ಬಗ್ಗೆ ನನ್ನ ಬಳಿ ಚರ್ಚೆ ಮಾಡಿಲ್ಲ : ಹೇಳಿದವರಿಗೆ ಓಟು ಹಾಕುವೆ'
- ದಶಪಥ ಯೋಜನೆ ಯಾರಿಗೂ ಸೇರಿದ ಕ್ರೆಡಿಟ್ ಅಲ್ಲ. ಇದು ಭಾರತ ಮಾತೆಗೆ, ದೇಶಕ್ಕೆ ಸೇರಿದ ಕ್ರೆಡಿಟ್
- ಮೈಸೂರು ಮೇಯರ್ ಚುನಾವಣೆ ಬಗ್ಗೆಯೂ ಪ್ರತಿಕ್ರಿಯಿಸಿದ ಶಾಸಕ ರಾಮದಾಸ್
ಮೈಸೂರು (ಆ.24): ದಶಪಥ ಯೋಜನೆ ಯಾರಿಗೂ ಸೇರಿದ ಕ್ರೆಡಿಟ್ ಅಲ್ಲ. ಇದು ಭಾರತ ಮಾತೆಗೆ, ದೇಶಕ್ಕೆ ಸೇರಿದ ಕ್ರೆಡಿಟ್ ಎಂದು ಮೈಸೂರಿನ ಕೆ.ಆರ್. ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್.ಎ. ರಾಮದಾಸ್ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ತೆರಿಗೆ ಹಣದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಇದು. ಇದು ನಾನು ಮಾಡಿದ್ದು, ನಾನು ಮಾಡಿದ್ದು ಎನ್ನುವುದು ಸರಿಯಲ್ಲ. ಇದು ಎಲ್ಲರಿಗೂ ಸೇರಿದ ಅಭಿವೃದ್ಧಿ ಕಾರ್ಯ. ನನ್ನ ಕ್ಷೇತ್ರದಲ್ಲು ನಾನು ರಸ್ತೆ ನಿರ್ಮಾಣ ಮಾಡುತ್ತಿದ್ದೇನೆ. ಆದರೆ, ಅದರ ಕ್ರೆಡಿಟ್ ನನ್ನದಲ್ಲ, ಎಲ್ಲಾ ಇಲಾಖೆ ವ್ಯವಸ್ಥೆಗೆ ಸೇರಿದ್ದು. ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲೂ ಅದು ಎಲ್ಲರಿಗೂ ಸೇರಿದ್ದು ಎಂದು ಹೇಳಿದರು.
ರಂಗು ಪಡೆದ ಚುನಾವಣೆ : ಕಾಂಗ್ರೆಸ್- ಜೆಡಿಎಸ್ ಪೈಪೋಟಿ
ಸ್ವಪಕ್ಷದ ವಿರುದ್ಧವೇ ವಿಶ್ವನಾಥ್ ಟೀಕೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಸ್. ಎ. ರಾಮದಾಸ್ ಅವರು, ಅವರಿಗೆ ಹೇಳುವಷ್ಟುದೊಡ್ಡವನು ನಾನಲ್ಲ. ಪಕ್ಷದ ಅಧ್ಯಕ್ಷರು ಅದನ್ನ ಗಮನಿಸುತ್ತಾರೆ. ಅವರು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ಅವರ ಆತ್ಮಸಾಕ್ಷಿಗೆ ಗೊತ್ತು.
ಈ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಯಾತ್ರೆ ಬಗ್ಗೆ ಎಚ್ಚರಿಕೆ ವಹಿಸಬೇಕು: ನಮ್ಮ ಜನಾಶೀರ್ವಾದ ಯಾತ್ರೆಯಿಂದ ಮತ್ತಷ್ಟುಕೊರೋನಾ ಹರಡದಂತೆ ಎಚ್ಚರಿಕೆ ವಹಿಸಬೇಕು. ಅದರಿಂದ ಕೊರೋನಾ ಬಂದರೆ ಅದಕ್ಕಿಂತ ದೊಡ್ಡ ಪಾಪಾದ ಕೆಲಸ ಮತ್ತೊಂದಿಲ್ಲ. ಕೋವಿಡ್ ನಿಯಮಗಳು ರಾಜಕಾರಣಿ, ಜನಸಾಮಾನ್ಯರು ಎಲ್ಲರಿಗೂ ಒಂದೇ. ನಮ್ಮ ಯಾತ್ರೆಯಿಂದ ಜನರಿಗೆ ತೊಂದರೆ ಆಗಬಾರದು ಎಂದರು.
ನಾವು ನಮ್ಮ ವಾರ್ಡಿನಲ್ಲಿ ಯಾತ್ರೆ ಮಾಡಿದ್ದೇವೆ. ಕೋವಿಡ್ ನಿಯಮಗಳನ್ನ ಪಾಲಿಸಿಕೊಂಡು ಯಾತ್ರೆ ಮಾಡಿದ್ದೇವೆ. ಜನರ ಬಳಿ ಹೋಗುವುದು ಸರಿ ಆದರೆ, ಹೋಗುವ ಹೆಸರಿನಲ್ಲಿ ನಿಯಮಗಳ ಉಲ್ಲಂಘನೆ ತಪ್ಪು ಎಂದು ಅವರು ತಿಳಿಸಿದರು.
ಮೇಯರ್ ಚುನಾವಣೆ ಉಸ್ತುವಾರಿ ಸಚಿವರು ನೋಡಿಕೊಳ್ಳುತ್ತಿದ್ದಾರೆ: ರಾಮದಾಸ್
ಮೈಸೂರು ಮೇಯರ್ ಚುನಾವಣೆ: ಇನ್ನು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಅದನ್ನ ನೋಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ರಾಮದಾಸ್ ತಿಳಿಸಿದರು.
ಸಚಿವರು ಯಾರ ಜೊತೆ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ. ನನ್ನ ಜೊತೆ ಏನು ಚರ್ಚೆ ಮಾಡಿಲ್ಲ ಎಂದರು. ಸಚಿವರು ಮತ್ತು ಪಕ್ಷದವರು ಯಾರನ್ನ ಅಭ್ಯರ್ಥಿ ಮಾಡ್ತಾರೋ ಅವರಿಗೆ ನಾನು ಸೇರಿ ನಮ್ಮ ಪಾಲಿಕೆ ಸದಸ್ಯರು ಮತ ಹಾಕುತ್ತೇವೆ. ನಮ್ಮ ಕೆ.ಆರ್. ಕ್ಷೇತ್ರದಲ್ಲೇ 12 ಜನ ನಾನು ಸೇರಿ 13 ಮತಗಳಿವೆ. ಪಕ್ಷ ಸೂಚಿಸಿದವರಿಗೆ ನಮ್ಮ ಮತ ಇರುತ್ತದೆ. ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ ಎಂದು ಅವರು ಹೇಳಿದರು.