ರಂಗು ಪಡೆದ ಚುನಾವಣೆ : ಕಾಂಗ್ರೆಸ್- ಜೆಡಿಎಸ್ ಪೈಪೋಟಿ
- ನಗರ ಪಾಲಿಕೆಯ 36ನೇ ವಾರ್ಡ್‌ನ ಉಪ ಚುನಾವಣೆ ರಂಗೇರುತ್ತಿದೆ
- ಕಾಂಗ್ರೆಸ್‌ನ ರಜಿನಿ ಅಣ್ಣಯ್ಯ ಮತ್ತು ಜೆಡಿಎಸ್‌ನ ಲೀಲಾವತಿ ನಡುವೆ ಪೈಪೋಟಿ
ಮೈಸೂರು (ಆ.21): ನಗರ ಪಾಲಿಕೆಯ 36ನೇ ವಾರ್ಡ್‌ನ ಉಪ ಚುನಾವಣೆ ರಂಗೇರುತ್ತಿದ್ದು, ಕಾಂಗ್ರೆಸ್‌ನ ರಜಿನಿ ಅಣ್ಣಯ್ಯ ಮತ್ತು ಜೆಡಿಎಸ್‌ನ ಲೀಲಾವತಿ ನಡುವೆ ಪೈಪೋಟಿ ನಡೆಯಲಿದೆ.
ಕಳೆದ ಬಾರಿ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದರು. ಆದರೆ ಅವರ ಸದಸ್ಯತ್ವವನ್ನು ಹೈ ಕೋರ್ಟ್ ಅನರ್ಹಗೊಳಿಸಿದ್ದರಿಂದ ಆ. 25ಕ್ಕೆ ಉಪ ಚುನಾವಣೆ ಎದುರಾಗಿದ್ದು, ಕಾಂಗ್ರೆಸ್‌ನಿಂದ ರಜಿನಿ ಅಣ್ಣಯ್ಯ ಅವರಿಗೆ ಬಿ ಫಾರಂ ನೀಡಲಾಗಿದೆ. ಅಂತೆಯೇ ಜೆಡಿಎಸ್‌ನಿಂದ ಲೀಲಾವತಿ ಅವರು ಕಣಕ್ಕಿಳಿಯುವರು.
ನಿರೀಕ್ಷಿತ ಬಹುಮತವಿಲ್ಲದ ಬಿಜೆಪಿಯ ಸ್ಥಳೀಯರಾದ ಮೂರ್ನಾಲ್ಕು ಮಂದಿ ಟಿಕೆಟ್ ನೀಡುವಂತೆ ಕೋರಿದ್ದಾರೆ. ಶನಿವಾರ ಅಥವಾ ಭಾನುವಾರ ಉಸ್ತುವಾರಿ ಸಚಿವರು ಮೈಸೂರಿಗೆ ಆಗಮಿಸಿ ಹೆಸರು ಅಂತಿಮಗೊಳಿಸುವರು.
ಸಹಕಾರ ನೀಡುವಂತೆ ಕೋರಿ ಜೆಡಿಎಸ್ ಮುಖಂಡರ ಭೇಟಿಯಾದ ಬಿಜೆಪಿ ಮುಖಂಡರು
ಮೇಯರ್ ಚುನಾವಣೆ: ಮೈಸೂರು ಮೇಯರ್ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಯಾರು, ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ರಾಜ್ಯ ನಾಯಕರು ಮಾತುಕತೆ ನಡೆಸಿದ್ದಾರೆ. ಮೇಯರ್ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವುದಾದರೆ ಈ ಬಾರಿಯು ಬಿಜೆಪಿಯಿಂದ ಸುನಂದ ಪಾಲನೇತ್ರ ಕಣಕ್ಕಿಳಿಯುವರು. ಇನ್ನು ಕಾಂಗ್ರೆಸ್‌ನಿಂದ ಶಾಂತಕುಮಾರಿ ಮೇಯರ್ ಆಕಾಂಕ್ಷಿಯಾಗಿದ್ದರೆ, ಜೆಡಿಎಸ್‌ನಿಂದ ಅಶ್ವಿನಿ ಅನಂತು ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿದೆ. ಮೂರು ಪಕ್ಷಗಳು ವರಿಷ್ಠರ ಸೂಚನೆಗಾಗಿ ಕಾದಿವೆ.