ಮುಖ್ಯಮಂತ್ರಿ ಕಾರ್ಯಕ್ರಮಗಳಿಗೆ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಎ. ರಾಮದಾಸ್‌  ಗೈರು  ಗೈರು ಹಾಜರಾಗುವ ಮೂಲಕ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿದ್ದಕ್ಕೆ ಅಸಮಾಧಾನ

ಮೈಸೂರು (ಆ.10): ಮುಖ್ಯಮಂತ್ರಿ ಕಾರ್ಯಕ್ರಮಗಳಿಗೆ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಎ. ರಾಮದಾಸ್‌ ಅವರು ಗೈರು ಹಾಜರಾಗುವ ಮೂಲಕ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿದ್ದಕ್ಕೆ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ರಾಮದಾಸ್‌, ನನ್ನನ್ನು ಕೆ.ಆರ್‌. ಕ್ಷೇತ್ರಕ್ಕೆ ಸೀಮಿತಗೊಳಿಸಿರುವುದರಿಂದ ಇದೇ ನನ್ನ ದೇಶ ಮತ್ತು ರಾಜ್ಯ. ನಾನು ಕೆ.ಆರ್‌. ಕ್ಷೇತ್ರದಲ್ಲಿಯೇ ಇದ್ದು ಕೆಲಸ ಮಾಡುತ್ತೇನೆ. ಒಬ್ಬ ವ್ಯಕ್ತಿಯ ಕರೆಯಿಂದ ನನಗೆ ಸಚಿವ ಸ್ಥಾನ ಕೈ ತಪ್ಪಿದೆ. ಯಾಕೆ ಈ ರೀತಿ ಮಾಡಿದ್ದೀರಿ ಎಂದು ನಾನೇ ಅವರನ್ನು ಕೇಳಿದ್ದೇನೆ. ಆದರೆ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದರು.

ಸಿಎಂ ಬೊಮ್ಮಾಯಿಗೆ ಹೊಸ ತಲೆಬಿಸಿ : ಅತೃಪ್ತರಿಂದ ಹೊಸ ವರಸೆ

ಮೈಸೂರಿನಲ್ಲಿ 25 ವರ್ಷದಿಂದ ಪಕ್ಷ ಸಂಘಟಿಸಿದ್ದೇನೆ. ಮೈಸೂರು ಭಾಗದಲ್ಲಿ 25 ಮಂದಿ ಶಾಸಕರು ಬಿಜೆಪಿಯಿಂದ ಗೆದ್ದಿದ್ದಾರೆ. ಈ ಪೈಕಿ 11 ಮಂದಿ ಪಕ್ಷ ಬಿಟ್ಟು ಹೋದರೂ ನಾನೊಬ್ಬ ಮಾತ್ರ ಪಕ್ಷದಲ್ಲಿಯೇ ಉಳಿದುಕೊಂಡು ಬಂದಿದ್ದೇನೆ. ಇದು ಗೊತ್ತಿದ್ದೇ ತಮಗೆ ಸಚಿವ ಸ್ಥಾನ ನೀಡಲು ತೀರ್ಮಾನಿಸಿರುವುದಾಗಿ ದೆಹಲಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಹೇಳಿದ್ದರು. ನಾನು ಒಬ್ಬ ಸ್ವಯಂ ಸೇವಕನಾದ್ದರಿಂದ ಸಂಘದ ಪಟ್ಟಿಯಲ್ಲಿಯೂ ನನ್ನ ಹೆಸರಿತ್ತು. ನನ್ನ ತಂದೆಯ ಸಮಾನರಾದ ಯಡಿಯೂರಪ್ಪ ಅವರು ಕರೆದು ಪಟ್ಟಿಯಲ್ಲಿ ನಿನ್ನ ಹೆಸರಿದೆ ಒಳ್ಳೆಯ ಕೆಲಸ ಮಾಡು ಎಂದಿದ್ದರು. 18 ಮಂದಿ ಶಾಸಕರು ಮತ್ತು ಒಬ್ಬ ಮಾಜಿ ಸಚಿವರ ಮುಂದೆ ರಾಮದಾಸ್‌ಗೆ ಎಲ್ಲಾ ರೀತಿಯ ಅನುಭವವಿದೆ ಎಂದಿದ್ದರು.

ಆದರೆ ಯಾರೋ ಒಬ್ಬರ ಫೋನ್‌ನಿಂದ ದೆಹಲಿಯಲ್ಲಿ ನನ್ನ ಸಚಿವ ಸ್ಥಾನ ಕೈತಪ್ಪಿದೆ ಅಂತ ಗೊತ್ತಿದೆ. ಎರಡೇ ಗಂಟೆಯಲ್ಲಿ ಆ ವ್ಯಕ್ತಿಗೆ ಫೋನ್‌ ಮಾಡಿ ಯಾಕೆ ಈ ರೀತಿ ಮಾಡಿದಿರಿ ಅಂತ ಕೇಳಿದ್ದೇನೆ. ಸಚಿವನನ್ನಾಗಿ ಮಾಡಿದ್ದರೆ ರಾಜ್ಯ ಪೂರ ಓಡುತ್ತಿದ್ದೆ. ಜಿಲ್ಲಾ ಮಂತ್ರಿ ಮಾಡಿದ್ದರೆ ಜಿಲ್ಲೆ ಪೂರಾ ಓಡುತ್ತಿದ್ದೆ. ಈಗ ಕೆ.ಆರ್‌. ಕ್ಷೇತ್ರದಲ್ಲಿ ಓಡಾಡುತ್ತೇನೆ ಎಂದು ಅಸಮಾಧಾನ ಹೊರಹಾಕಿದರು.