ಬೆಂಗಳೂರು(ಫೆ.26):  ಮಿನಿಸ್ಟರ್ ಅಂದರೆ ದೇವಲೋಕದಿಂದ ಇಳಿದು ಬಂದವರಾ?, ನಾವೇನು ಬಿಟ್ಟಿ ಬಿದ್ದಿದ್ದೀವಾ?, ಕೆಲವು ಸಚಿವರು ಕೈಗೇನೇ ಸಿಗಲ್ಲ. ಅವರ ಪಿಎಗಳು ಪಿ.ಎಸ್ ಗಳು ಫೋನೇ ರಿಸೀವ್ ಮಾಡಲ್ಲ. ಕಾಂಗ್ರೆಸ್, ಜೆಡಿಎಸ್‌ನಿಂದ ಬಂದ ಎಲ್ಲ ಸಚಿವರು ಅಂತ ನಾನು ಹೇಳಲ್ಲ. ಕೆಲವರು ಮಾತ್ರ ನಮಗೆ ಕೈಗೆ ಸಿಗಲ್ಲ ಹೇಳುವ ಮೂಲಕ ಎಂದು ಸಚಿವ ಕೆ.ಸುಧಾಕರ್‌ ವಿರುದ್ಧ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. 

ಇಂದು(ಶುಕ್ರವಾರ) ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಹತ್ತಾರು ಭಾರಿ ಭೇಟಿ ಆಗಿದ್ದೇನೆ, ಪತ್ರ ಬರೆದಿದ್ದೇನೆ, ಏನೂ ಪ್ರಯೋಜನ ಆಗಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಾನು ರಾಜೀ ಆಗುವ ಮಾತೇ ಇಲ್ಲ. ನಾನು ಧರಣಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ. ನಿನ್ನೆ ಅವರ ಪಿ.ಎಸ್ ಫೋನ್ ಮಾಡಿದ್ರು, ಕೆಲವು ಕೆಲಸ ಆಗಿದೆ. ನನ್ನ ಕೆಲಸ ಆದ ಮಾತ್ರಕ್ಕೆ ನಾನು ಸುಮ್ಮನಿರಲ್ಲ ಎಂದು ಕಿಡಿ ಕಾರಿದ್ದಾರೆ. 

'ಸಚಿವರಿಗೆ ನನ್ನ ಫೋನ್‌ ರಿಸೀವ್‌ ಮಾಡೋಕೆ ಪುರುಸೊತ್ತಿಲ್ಲ: ಸುಧಾಕರ್‌ ವಿರುದ್ಧ ಬಿಜೆಪಿ ನಾಯಕ ಗರಂ

ಪಾಪ ಅನೇಕ ನಮ್ಮ ಶಾಸಕರು ಬಾಯಿ ಇಲ್ಲದ ಶಾಸಕರಿದ್ದಾರೆ. ಅವರ ಕೆಲಸಗಳೂ ಆಗಬೇಕು. ಐದಾರು ಸಚಿವರು ಕೈಗೆ ಸಿಗಲ್ಲ. ನಾನು ಮೂರು ಬಾರಿ ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ಆಯ್ಕೆ ಆಗಿದ್ದೇನೆ. ನಾವೇನು ಬಿಟ್ಟಿ ಬಿದ್ದಿದ್ದೀವಾ? ಎಂದು ಸಚಿವ ಸುಧಾಕರ್ ವಿರುದ್ಧ ಶಾಸಕ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.