'ಸಿಡಿ ಮಾಡಿ ಬ್ಲಾಕ್‌ಮೇಲ್ ಮಾಡೋದು ಕಾಂಗ್ರೆಸ್ ಸಂಸ್ಕೃತಿ'
ಮಮತಾ ಬ್ಯಾನರ್ಜಿ ಅನುಕಂಪ ಗಿಟ್ಟಿಸಿಕೊಳ್ಳಲು ನಾಟಕ ಮಾಡುತ್ತಿದ್ದಾರೆ| ಮಮತಾ ಬ್ಯಾನರ್ಜಿ ಒಂದು ನಾಟಕ ಕಂಪನಿ| ಮಮತಾಗೆ ಈಗ ಹಿಂದೂಗಳ ಶಕ್ತಿ ಬಗ್ಗೆ ಅರಿವಾಗಿದೆ. ಹೀಗಾಗಿ ಹಿಂದೂ ದೇವಾಲಯಗಳಿಗೆ ಅಲೆದಾಡುವ ನಾಟಕವಾಡುತ್ತಿದ್ದಾರೆ| ಸಿದ್ದರಾಮಯ್ಯನವರಿಗೂ ಹಿಂದೂಗಳ ಶಕ್ತಿ ಬಗ್ಗೆ ಅರಿವಾಗಿದೆ. ಅದಕ್ಕಾಗಿಯೇ ಅವರೂ ದೇವಸ್ಥಾನಗಳಿಗೆ ಅಲೆದಾಡುತ್ತಿದ್ದಾರೆ: ಯತ್ನಾಳ|
ವಿಜಯಪುರ(ಮಾ.13): ಮಾಜಿ ಸಚಿವರೊಬ್ಬರಿಗೆ ಸಂಬಂಧಿಸಿದಂತೆ ರಾಸಲೀಲೆ ಸೀಡಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಎಸ್‌ಐಟಿಗೆ ವಹಿಸಿರುವುದು ಸರಿಯಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಎಸ್‌ಐಟಿ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದರೆ ಸಿಬಿಐ ಮೇಲೆ ಯಾರೂ ಪ್ರಭಾವ ಬೀರಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ವಂಚಕ ಯುವರಾಜ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಿದ ಅವರು, ಕೆಲವು ನಾಯಕರ ಜೊತೆಗಿನ ಫೋಟೋ ಇಟ್ಟುಕೊಂಡು ವಂಚನೆ ಮಾಡುತ್ತಿದ್ದಾರೆ. ಕೆಲವರು ಮಂತ್ರಿ ಸ್ಥಾನ ಪಡೆಯಲು ಸಿನೆಮಾ ತಾರೆಯರನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದರು. ಅಂಥವರೆಲ್ಲ ಈಗ ಮಂತ್ರಿಯಾಗಿದ್ದಾರೆ ಎಂದು ಟೀಕಿಸಿದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲಿನ ಹಲ್ಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ, ಮಮತಾ ಬ್ಯಾನರ್ಜಿ ಅನುಕಂಪ ಗಿಟ್ಟಿಸಿಕೊಳ್ಳಲು ನಾಟಕ ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ಒಂದು ನಾಟಕ ಕಂಪನಿ. ಮಮತಾಗೆ ಈಗ ಹಿಂದೂಗಳ ಶಕ್ತಿ ಬಗ್ಗೆ ಅರಿವಾಗಿದೆ. ಹೀಗಾಗಿ ಹಿಂದೂ ದೇವಾಲಯಗಳಿಗೆ ಅಲೆದಾಡುವ ನಾಟಕವಾಡುತ್ತಿದ್ದಾರೆ ಎಂದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಹಿಂದೂಗಳ ಶಕ್ತಿ ಬಗ್ಗೆ ಅರಿವಾಗಿದೆ. ಅದಕ್ಕಾಗಿಯೇ ಅವರೂ ದೇವಸ್ಥಾನಗಳಿಗೆ ಅಲೆದಾಡುತ್ತಿದ್ದಾರೆ ಎಂದು ಹೇಳಿದರು.
ನನ್ನ ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಯತ್ನಾಳ್ ವಿರುದ್ಧ ಬಿಜೆಪಿ ನಾಯಕ ಗರಂ
ಸೀಡಿ ಮಾಡಿ ಬ್ಲಾಕ್‌ಮೇಲ್ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಅದು ತನ್ನ ಚಾಳಿಯನ್ನು ಈಗಲೂ ಮುಂದುವರಿಸಿದೆ. ಎಸ್.ಟಿ. ಸೋಮಶೇಖರ ಅವರು ಈ ಬಗ್ಗೆ ಹೇಳಿರುವುದು ಸತ್ಯವಾಗಿದೆ. ಏಕೆಂದರೆ ಸೋಮಶೇಖರ ಅವರು ಕಾಂಗ್ರೆಸ್‌ನಲ್ಲಿ ಇದ್ದಾಗ ಆಗಿರುವ ಅನುಭವದಿಂದ ಇಂಥ ಮಾತುಗಳನ್ನು ಹೇಳಿದ್ದಾರೆ ಎಂದರು.
ರಾಜ್ಯದಲ್ಲಿ ಯತ್ನಾಳ ಏಕಾಂಗಿಯಾಗಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿ, ಧರ್ಮ ಯುದ್ಧದಲ್ಲಿ ಗೆದ್ದದ್ದು ಪಾಂಡವರು ಹೊರತು ಕೌರವರಲ್ಲ. ರಾಮ ಒಬ್ಬನೇ ಇದ್ದರೂ ರಾವಣನಂತಹ ದೊಡ್ಡ ರಾಕ್ಷಸನನ್ನು ಸಂಹಾರ ಮಾಡಿದ. ಕೊನೆಗೆ ಗೆದ್ದಿದ್ದು ರಾಮ. ಹಾಗೇ ಯತ್ನಾಳ ಗೆಲ್ಲುತ್ತಾನೆ ಎಂದರು.
ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು ಸರಿಯಲ್ಲ. ಇದನ್ನು ನಾನು ಒಪ್ಪುವುದಿಲ್ಲ. ಸರ್ಕಾರ ನೇಮಿಸಿದ ಸಮಿತಿಗೆ ಗಡುವು ನೀಡಿಲ್ಲ. ಅದಕ್ಕೆ ಗಡುವು ನಿಗದಿಪಡಿಸಬೇಕು. ಪಂಚಮಸಾಲಿ ಸಹಿತ ಇತರೆ ಎಲ್ಲ ಸಮಾಜದವರಿಗೂ ಮೀಸಲಾತಿ ಸಿಗಬೇಕು ಎಂದು ಒತ್ತಾಯಿಸಿದರು.
BSY ಕುಟುಂಬದ ವಿರುದ್ಧ ಆರೋಪಿಸಿದ್ರೂ ಯತ್ನಾಳ್ ಮೇಲೆ ಅಪಾರ ಪ್ರೀತಿ ಇದೆ: ವಿಜಯೇಂದ್ರ
ಈ ಸಮಿತಿ ಕೇವಲ ರಾಜಕೀಯ ಸ್ಟಂಟ್ ಆಗಬಾರದು. ಬ್ರಾಹ್ಮಣ ಸಮಾಜದವರಿಗೆ ಕೇಂದ್ರ ಸರ್ಕಾರ ಶೇ.10ರಷ್ಟು ಮೀಸಲಾತಿ ಘೋಷಣೆ ಮಾಡಿದೆ. ಆದರೆ ಅದು ಇನ್ನೂ ಕರ್ನಾಟಕದಲ್ಲಿ ಜಾರಿಯಾಗಿಲ್ಲ ಎಂದು ಆರೋಪಿಸಿದರು.
ಎಸ್‌ಸಿ, ಎಸ್‌ಟಿ ಸಮಾಜದವರಿಗೆ ಮೀಸಲಾತಿ ಹೆಚ್ಚಳ ಕುರಿತು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಇಂತಹ ಪ್ರಕ್ರಿಯೆಗಳು ಕಾಲಮಿತಿಯಲ್ಲಿಯೇ ನಡೆಯಬೇಕು ಎಂದರು.
ಕಾಲಮಿತಿ ಕುರಿತು ಮುಖ್ಯಮಂತ್ರಿ ಸ್ಪಷ್ಟನೆ ನೀಡುವುದಾಗಿ ಹೇಳಿದ್ದರು. ಅವರ ಬದಲಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಸರ್ಕಾರ ನೇಮಿಸಿದ ಸಮಿತಿಗೆ ನಮ್ಮ ಒಪ್ಪಿಗೆ ಇಲ್ಲ. ಮೀಸಲಾತಿ ಕುರಿತು ಸೋಮವಾರ ಸಿಎಂ ಜೊತೆಗೆ ಮಾತನಾಡುತ್ತೇನೆ. ಈ ವಿಚಾರವಾಗಿ ಸಿಎಂ ಸ್ಪಷ್ಟ ಉತ್ತರ ನೀಡದಿದ್ದರೆ ಸೋಮವಾರ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.