ನಾನು ಯಾರ ಹೆಸರನ್ನು ಹೇಳುವುದಿಲ್ಲ ಎನ್ನುತ್ತಲೇ ರಾಜಕೀಯ ಎದುರಾಳಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ ರಮೇಶ ಜಿಗಜಿಣಗಿ| ಯಾವನಾದರೂ ನನ್ನ ಮನಸು ನೋಯಿಸಿದರೆ ಅವನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೆಸರು ಹೇಳದೆ ಪರೋಕ್ಷವಾಗಿ ಖಡಕ್‌ ಎಚ್ಚರಿಕೆ ನೀಡಿದ ಸಂಸದ| 

ವಿಜಯಪುರ(ಮಾ.03): ನಾನು ಯಾರ ತಂಟೆಗೂ ಹೋಗಲ್ಲ. ನನ್ನ ತಂಟೆಗೆ ಬಂದರೆ ಸುಮ್ಮನೆ ಬಿಡಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಪರೋಕ್ಷವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಗುಡುಗಿದ್ದಾರೆ. 

ಮಂಗಳವಾರ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಾನು ಯಾರ ಹೆಸರನ್ನು ಹೇಳುವುದಿಲ್ಲ ಎನ್ನುತ್ತಲೇ ರಾಜಕೀಯ ಎದುರಾಳಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. 

ನನ್ನನ್ನು ವಿರೋಧಿಸುವವರು ಏನನ್ನಾದರೂ ಮಾಡಿಕೊಂಡು ಹೋಗಲಿ. 45 ವರ್ಷಗಳಿಂದ ನಾನು ಯಾರನ್ನೂ ಕೆಣಕಿಲ್ಲ. ಹಾಗಾಗಿ ನನ್ನನ್ನು ಕೆಣಕಲು ಬಿಡುವುದಿಲ್ಲ. ನನ್ನ ತಂಟೆಗೆ ಯಾರೂ ಬರಬೇಡಿ ಎಂದು ಮೊದಲು ನಾನು ಕೈ ಮುಗಿದು ಹೇಳುತ್ತೇನೆ. ಒಂದು ವೇಳೆ ಬಂದರೆ ನಾವು ಸುಮ್ಮನಿರಲ್ಲ ಎಂದು ಗುಡುಗಿದರು.

'ಬಿಜೆಪಿ ಸರ್ಕಾರದಿಂದ ದಲಿತ ವಿರೋಧಿ ನೀತಿ'

ನನ್ನ ವಿರುದ್ಧ ಯಾರು ಏನು ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರಿವರ ಹೆಸರು ಹೇಳುವಷ್ಟು ಸಣ್ಣ ಮನುಷ್ಯ ನಾನಲ್ಲ. ನಾನು ಎಲ್ಲರಿಗಿಂತಲೂ ಹಿರಿಯನಿದ್ದೇನೆ. ವಿಜಯಪುರದಲ್ಲಿ ಈಗ ರಾಜಕಾರಣ ಮಾಡುತ್ತಿರುವ ಎಲ್ಲರಿಗಿಂತಲೂ ನಾನು ಹಿರಿಯನಾಗಿದ್ದೇನೆ. ನನಗೆ 45 ವರ್ಷಗಳ ರಾಜಕೀಯ ಅನುಭವವಿದೆ ಎಂದರು.

ನಾನು ರಾಮಕೃಷ್ಣ ಹೆಗಡೆ, ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಮುಖಂಡ ದಿ.ಬಿ.ಎಂ. ಪಾಟೀಲ ಅವರ ಶಿಷ್ಯನೂ ಆಗಿದ್ದೆ. ಎಂದೂ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಯಾರ ಮನಸ್ಸೂ ನೋಯಿಸುವುದಿಲ್ಲ. ಯಾವನಾದರೂ ನನ್ನ ಮನಸು ನೋಯಿಸಿದರೆ ಅವನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೆಸರು ಹೇಳದೆ ಪರೋಕ್ಷವಾಗಿ ಖಡಕ್‌ ಎಚ್ಚರಿಕೆ ನೀಡಿದರು.

ಹಿಂದೆ ರಾಮಕೃಷ್ಣ ಹೆಗಡೆ, ಜೆ.ಎಚ್‌.ಪಟೇಲ್‌ ಅವರ ಆಶಯದಂತೆ ನಡೆಯುತ್ತಿತ್ತು. ಅಂದು ಜನತಾದಳ ರಾಜ್ಯಕ್ಕೆ ಮಾತ್ರ ಸೀಮಿತವಾಗಿತ್ತು. ನಂತರ ಬೆಳೆದದ್ದು ಬೇರೆ. ಸಂಪೂರ್ಣ ಜನತಾದಳ ಇದ್ದಾಗ ಈ ಜಿಲ್ಲೆಯಲ್ಲಿ ನಮ್ಮದೇ ನಡೆಯುತ್ತಿತ್ತು ಎಂದರು. ಒಳ್ಳೆಯ ಕೆಲಸ ಮಾಡಿದ್ದೇನೆ. ಬಿಜೆಪಿ ರಾಷ್ಟ್ರೀಯ ಪಕ್ಷ. ಈಗ ಎಲ್ಲವೂ ನಾನು ಅಂದುಕೊಂಡಂತೆ ನಡೆಯಬೇಕು ಎಂಬುವುದು ತಪ್ಪು ಎಂದು ಜಿಗಜಿಣಗಿ ಹೇಳಿದರು.