ಬೆಂಗಳೂರು [ಜು.27]:   ರಾಜ್ಯ ಸರ್ಕಾರ ಪತನದ ಬೆನ್ನಲ್ಲೇ ಬಿಬಿಎಂಪಿ ದೋಸ್ತಿಯೂ ಖತಂ ಆಗುವ ಸಾಧ್ಯತೆ ಕಂಡು ಬಂದಿದೆ. ಬಿಎಂಪಿಯಲ್ಲಿರುವ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಆಡಳಿತವು ಕೊನೆಗೊಳ್ಳೋ ಸಾಧ್ಯತೆ ಹೆಚ್ಚಾಗಿದೆ. 

ಬಿಬಿಎಂಪಿಯಲ್ಲಿ 198 ಬಿಬಿಎಂಪಿ ಸದಸ್ಯರ ಜೊತೆಗೆ ಶಾಸಕರು - ಸಂಸದರು ಸೇರಿ ಒಟ್ಟು 265 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ 133 ಮತಗಳನ್ನು ಪಡೆಯುವವರು ಬಿಬಿಎಂಪಿ ಅಧಿಕಾರ ಹಿಡಿಯಬಹುದಾಗಿಗೆ. ಸದ್ಯ, ಕಾಂಗ್ರೆಸ್ - ಜೆಡಿಎಸ್ ಮೈತ್ರಿಗೆ 137 ಮತಗಳ ಬೆಂಬಲ ಇದೆ. 

ರಾಜೀನಾಮೆ ನೀಡಿರುವ 13 ಶಾಸಕರ ಪೈಕಿ ಆರು ಶಾಸಕರು ಬೆಂಗಳೂರಿನವರಾಗಿದ್ದು, ಇದರಿಂದ ಬಿಬಿಎಂಪಿಯಲ್ಲಿ ಮೈತ್ರಿ ಬಲ 131ಕ್ಕೆ ಕುಸಿಯಲಿದೆ.  ಶಾಸಕರ ಬೆಂಬಲಿಗರು ಚುನಾವಣೆಯಲ್ಲಿ ಉಲ್ಟಾ ಹೊಡೆಯೋ ಸಾಧ್ಯತೆ ಹೆಚ್ಚಾಗಿದ್ದು,  ಹೀಗಾಗಿ ಮುಂದಿನ ಮೇಯರ್ ಆಯ್ಕೆಯಲ್ಲಿ 126 ಮತಗಳ ಬಲ ಇರುವ ಬಿಜೆಪಿ ಬಲ ಹೆಚ್ಚಬಹುದು. 

HDK ನೇತೃತ್ವದಲ್ಲಿ ಸಭೆ, ಬಿಜೆಪಿಗೆ ಜೆಡಿಎಸ್‌ ಬಾಹ್ಯ ಬೆಂಬಲ?

ಮೈತ್ರಿ ಆಡಳಿತಕ್ಕೆ ಕಾರಣರಾದ ಬೆಂಗಳೂರಿನ ಶಾಸಕರೇ ಈಗ ಮುಳುವಾಗಿದ್ದು, ಬಿಬಿಎಂಪಿ ಈ ಅವಧಿಯ ಮುಂದಿನ ಮೇಯರ್ ಬಿಜೆಪಿಯವರಾಗುವ ಸಾಧ್ಯತೆ ಹೆಚ್ಚು ಕಾಣುತ್ತಿದೆ.  

RR ನಗರ ಶಾಸಕ  ಶಾಸಕ ಮುನಿರತ್ನ, ಯಶವಂತಪುರ ಶಾಸಕ ಸೋಮಶೇಖರ್,  KR ಪುರ ಶಾಸಕ ಭೈರತಿ ಬಸವರಾಜ್ ಈ ಮೈತ್ರಿಗೆ ಮೂಲ ಕಾರಣವಾಗಿದ್ದು, ಈಗ ಅದೇ ಮೂರು ಶಾಸಕರು ರಾಜ್ಯ ಸರ್ಕಾರ ಪತನ ಮಾತ್ರವಲ್ಲ ಬಿಬಿಎಂಪಿ ದೋಸ್ತಿಗೂ ಬ್ರೇಕ್ ಹಾಕುತ್ತಿದ್ದಾರೆ.