ದಾವಣಗೆರೆ(ಜ.14): ಕಾಂಗ್ರೆಸ್‌ ಪಕ್ಷದ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ನೋಡಿಕೊಳ್ಳಿ. ನಂತರ ಮತ್ತೊಬ್ಬರ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ಮಾತನಾಡಿ ಎಂದು ಬಿಜೆಪಿ ನಿಕಟಪೂರ್ವ ಅಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್‌ ಜಾಧವ್‌ ಹೇಳಿದ್ದಾರೆ. 

ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿಆರೋಪಕ್ಕೆ ತಿರುಗೇಟು ನೀಡಿರುವ ಅವರು, ಬಿಜೆಪಿ ಜಿಲ್ಲಾ ಘಟಕದಲ್ಲಿ 15 ಸದಸ್ಯರನ್ನು ಒಳಗೊಂಡ ಕೋರ್‌ ಕಮಿಟಿ ಇದ್ದು, ಪ್ರತಿ ತಿಂಗಳು 2ನೇ ಶನಿವಾರ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರ ಉಪಸ್ಥಿತಿಯಲ್ಲಿ ಸಭೆ ನಡೆಸುತ್ತದೆ. ಯಾರು ಎಷ್ಟೇ ಉನ್ನತ ಸ್ಥಾನ ಅಲಂಕರಿಸಿದ್ದರೂ, ಎಷ್ಟೇ ಪ್ರಭಾವಿಯಾಗಿದ್ದರೂ, ಎಷ್ಟೇ ಶ್ರೀಮಂತರಾಗಿದ್ದರೂ ಕೋರ್‌ ಕಮಿಟಿ ನಿರ್ಧಾರಕ್ಕೆ ತಲೆಬಾಗಿ, ಸೂಚನೆಗೆ ಬದ್ಧರಾಗಿರಬೇಕಾದ್ದು ನಮ್ಮ ಪಕ್ಷದಲ್ಲಿ ಪದ್ಧತಿ ಇದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಿಗದ ಸಚಿವ ಸ್ಥಾನ: ಬಿಜೆಪಿ ವರಿಷ್ಠರ ವಿರುದ್ಧ ಬುಸುಗುಟ್ಟಿದ ರೇಣುಕಾಚಾರ್ಯ

ಅದೇ ಕಾಂಗ್ರೆಸ್‌ ಪಕ್ಷದಲ್ಲಿ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹೇಳಿದಂತೆ ಪಕ್ಷದ ಜಿಲ್ಲಾ ಸಮಿತಿ ಕೇಳಬೇಕು. ಕಾಂಗ್ರೆಸ್‌ ಪಕ್ಷವನ್ನೇ ಹರಾಜಿನಲ್ಲಿ ಖರೀದಿ ಮಾಡಿಕೊಂಡಂತೆ ತಮ್ಮ ಮನೆಯಲ್ಲಿಟ್ಟುಕೊಂಡವರಂತೆ ವರ್ತಿಸುವ ನಾಯಕರು ಕಾಂಗ್ರೆಸ್ಸಿನಲ್ಲಿದ್ದಾರೆ. ಆ ನಾಯಕರು ಹೇಳಿದ್ದಕ್ಕೆಲ್ಲಾ ತಲೆಯಾಡಿಸಿಕೊಂಡು, ಅಂತಹವರ ಮನೆಯಲ್ಲಿ ಹೇಳಿದ್ದಕ್ಕೆಲ್ಲಾ ತಲೆಯಾಡಿಸಿಕೊಂಡು, ಗುಲಾಮಗಿರಿ ಮಾಡಿಕೊಂಡು, ಚಮಚಾಗಿರಿ ಮಾಡಿಕೊಂಡು ಇರಬೇಕಾದ ಸ್ಥಿತಿ ನಿಮ್ಮ ಪಕ್ಷದ್ದೇ ಹೊರತು, ಬಿಜೆಪಿಯಲ್ಲಲ್ಲ ಎಂದು ಅವರು ಟಾಂಗ್‌ ನೀಡಿದ್ದಾರೆ.

ಇದ್ದರೆ ಇರು, ಇಲ್ಲವಾದರೆ ಮನೆಗೆ ನಡೀ ಎಂತೆಲ್ಲಾ ಅನಿಸಿಕೊಂಡರೂ ಮಾನ ಮರ್ಯಾದೆ ಇಲ್ಲದಂತೆ ಬಾಳುತ್ತಿರುವ ಕಾಂಗ್ರೆಸ್ಸಿನ ಕೆಲವರಲ್ಲಿ ಅದರ ವಿರುದ್ಧ ಮಾತನಾಡುವ ಧೈರ್ಯವೂ ಇಲ್ಲ. ಇಂತಹ ಪಕ್ಷದ ನಿಮಗೆ ಬಿಜೆಪಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯೂ ಇಲ್ಲ. ಯಾವುದೇ ಹಕ್ಕೂ ಇಲ್ಲ. ನಿಮ್ಮ ಪಕ್ಷದ ಯೋಗ್ಯತೆಗೆ ಎಂದಾದರೂ ನಿಮ್ಮ ಪಕ್ಷದ ಜಿಲ್ಲಾಧ್ಯಕ್ಷರ ಉಪಸ್ಥಿತಿಯಲ್ಲಿ ಯಾವುದಾದರೂ ಒಂದೇ ಒಂದು ಮುಖ್ಯ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ನಡೆಸಿದ್ದರೆ ತಿಳಿಸಿ ಎಂದು ದಿನೇಶ ಶೆಟ್ಟಿಗೆ ಯಶವಂತ ರಾವ್‌ ಸವಾಲು ಹಾಕಿದ್ದಾರೆ.