ದಾವಣಗೆರೆ(ಜ.13):  ಸಚಿವ ಸ್ಥಾನವೆಂದರೆ ಬರೀ ಬೆಂಗಳೂರು, ಬೆಳಗಾವಿಗಷ್ಟೇ ಸೀಮಿತವಾ? ರಾಜ್ಯದಲ್ಲಿ ಇವೇ ಎರಡು ಊರು ಇರುವುದಾ? ಭೌಗೋಳಿಕವಾಗಿ ಮಧ್ಯ ಕರ್ನಾಟಕದ ದಾವಣಗೆರೆ ಕಡೆಗಣಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವರಿಷ್ಠರ ವಿರುದ್ಧ ಬುಸುಗುಟ್ಟಿದ್ದಾರೆ. 

ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆಯಲ್ಲಿ 6 ಬಿಜೆಪಿ ಶಾಸಕರಿದ್ದೇವೆ. ನಮ್ಮನ್ನೆಲ್ಲಾ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಭೌಗೋಳಿಕವಾಗಿ, ಸಾಮಾಜಿಕವಾಗಿ ನಮ್ಮ ಜಿಲ್ಲೆಯನ್ನೇ ಮೂಲೆಗುಂಪು ಮಾಡಲಾಗಿದೆ. ನಾನು ರೆಬೆಲ್‌ ಅಲ್ಲ, ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನವನ್ನೇ ಕೈಗೊಳ್ಳುತ್ತೇನೆ. ಕಾದು ನೋಡಿ ಅಷ್ಟೇ ಎಂದು ರೇಣುಕಾಚಾರ್ಯ ಪಕ್ಷದ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

ಮತ್ತೆ ಸುದ್ದಿಯಾದ ರೇಣುಕಾಚಾರ್ಯ, ಏನ್ಮಾಡಿದ್ರೂ ಅಂತ ಫೋಟೋಗಳನ್ನ ನೋಡಿ..!

ನಗು ಮುಖ ಸಿಟ್ಟಾಯ್ತು: 

ನ್ಯಾಮತಿ ತಾಲೂಕಲ್ಲಿ ಕಂಚಿಕೊಪ್ಪ ಗ್ರಾಮದಲ್ಲಿ ರೈತರೊಂದಿಗೆ ಒಂದು ದಿನದ ಕಾರ್ಯಕ್ರಮದ ವೇದಿಕೆಯಲ್ಲಿದ್ದ ಶಾಸಕ ರೇಣುಕಾಚಾರ್ಯ ಮೊಗದಲ್ಲಿ ಬೆಳಗ್ಗೆಯಿಂದಲೂ ಮಂದಹಾಸ ಮೂಡಿತ್ತು. ಆದರೆ, ಅತ್ತ ಸಂಭಾವ್ಯ ಸಚಿವರ ಪಟ್ಟಿ ಹಿಡಿದು ಸಿಎಂ ರಾಜ್ಯಪಾಲರ ಭೇಟಿಗೆ ತೆರಳಿದ್ದು, ಅದರಲ್ಲಿ ತಮ್ಮ ಹೆಸರಿಲ್ಲದ ವಿಚಾರ ಗೊತ್ತಾಗುತ್ತಿದ್ದಂತೆಯೇ ರೇಣುಕಾಚಾರ್ಯರ ಮಂದಹಾಸವೆಲ್ಲಾ ಮಡುವುಗಟ್ಟಿತ್ತು.