ಮಂಡ್ಯ(ಮಾ.04): ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ವೇಳೆ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಿ.ಟಿ.ಮಹೇಂದ್ರ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಪರ ಮತ ಚಲಾಯಿಸಿದ ಕಾರಣಕ್ಕೆ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಜರುಗಿದೆ.

ಹಲ್ಲೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನೆಲೆಸಿತ್ತು. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಸಿ.ಟಿ.ಮಹೇಂದ್ರನ ಮೇಲೆ ಮನ್ಮುಲ್ ಸ್ವಾಮಿ, ಎಸ್‌.ಪಿ.ಸ್ವಾಮಿ ಬೆಂಬಲಿಗರ ಗುಂಪು ದಾಳಿ ನಡೆಸಿ ಹಿಗ್ಗಾಮುಗ್ಗಾ ಥಳಿಸಿದರಲ್ಲದೆ, ಸಹಕಾರ ಸಂಘದ ಕಚೇರಿಯ ಕುರ್ಚಿಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಸಹಕಾರ ಸಂಘದಲ್ಲಿ ಬಿಜೆಪಿ ಬೆಂಬಲಿಗರಿಂದ ದಿಗ್ಬಂಧನಕ್ಕೆ ಒಳಗಾಗಿದ್ದ ಅಧ್ಯಕ್ಷ ಸಿ.ಟಿ.ಮಹೇಂದ್ರನನ್ನು ಗುಂಪಿನ ವಿರೋಧದ ನಡುವೆಯೂ ಸಹ ಪೊಲೀಸ್‌ ಬಂದೋಬಸ್ತ್‌ನಲ್ಲಿ ಠಾಣೆಗೆ ಕರೆದೊಯ್ದರು.

ಘಟನೆಯ ವಿವರ:

ಚಾಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಟ್ಟು 11 ನಿರ್ದೇಶಕ ಸ್ಥಾನಗಳ ಪೈಕಿ 6 ಬಿಜೆಪಿ, 3 ಕಾಂಗ್ರೆಸ… ಹಾಗೂ 2 ಜೆಡಿಎಸ… ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದರು. ಆನಂತರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಫೆ.2 ಮತ್ತು 7ರಂದು ಚುನಾವಣೆ ನಿಗದಿ ಮಾಡಲಾಗಿತ್ತು. ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ವಶಕ್ಕೆ ಪಡೆಯುವ ಉದ್ದೇಶದಿಂದ ಬಿಜೆಪಿ ಮುಖಂಡ ಎಸ್‌.ಪಿ.ಸ್ವಾಮಿ ತಂತ್ರಗಾರಿಕೆ ರೂಪಿಸಿದ್ದರು.

ಸೂಪರ್‌ ಸೀಡ್‌ ಆತಂಕ ಚುನಾವಣೆಗೆ ಹಾಜರು:

ಅದರಂತೆ ಫೆ.2 ಹಾಗೂ 7ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಬಿಜೆಪಿ ಬೆಂಬಲಿತ ಸದಸ್ಯರು ಗೈರು ಹಾಜರಾಗಿದ್ದರು. ಹೀಗಾಗಿ ಚುನಾವಣೆ ಮುಂದೂಡಿಕೆಯಾಗಿತ್ತು. ಮಂಗಳವಾರ (ಮಾ.3) ಮೂರನೇ ಬಾರಿಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಿಗದಿ ಮಾಡಿತ್ತು. ಚುನಾವಣೆಗೆ ಗೈರು ಹಾಜರಾದರೆ ಸಹಕಾರ ಸಂಘವನ್ನು ಸಹಕಾರ ಸಂಘಗಳ ಉಪನಿಬಂಧಕರು ಸೂಪರ್‌ ಸೀಡ… ಮಾಡಬಹುದು ಎಂಬ ಆತಂಕದಿಂದ ಬಿಜೆಪಿ ಬೆಂಬಲಿತ ನಿರ್ದೇಶಕರು ಸ್ವಯಂಪ್ರೇರಿತರಾಗಿ ಹಾಜರಾದರು.

ಕೊರೋನಾ: ಮಾಸ್ಕ್‌ನಷ್ಟೇ ಮುಖ್ಯವಂತೆ ಹೆಲ್ಮೆಟ್, ಡಿಜಿಪಿ ಏನ್ ಹೇಳಿದ್ರು ಕೇಳಿ.

ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸಿ.ಟಿ.ಮಹೇಂದ್ರ, ಕಾಂಗ್ರೆಸ… ಬೆಂಬಲಿತರಾಗಿ ಸಿ.ಪಿ.ನಾಗರಾಜು, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಿ.ಎಂ.ಮಹದೇವಯ್ಯ, ಜೆಡಿಎಸ್‌ ನಿಂದ ಸಿ.ಎಂ.ರಾಮು ನಾಮಪತ್ರ ಸಲ್ಲಿಸಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹೇಂದ್ರ 7 ಮತಗಳೊಂದಿಗೆ ವಿಜಯಿಯಾದರೆ, ಸಿ.ಪಿ.ನಾಗರಾಜು 5 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸಿ.ಎಂ.ಮಹದೇವಯ್ಯ 6 ಮತ ಹಾಗೂ ಜೆಡಿಎಸ್‌ ನ ಸಿ.ಎಂ.ರಾಮು ಅವರಿಗೆ 6 ಮತಗಳು ಲಭಿಸಿದವು. ಅಂತಿಮವಾಗಿ ಚುನಾವಣಾಧಿಕಾರಿ ಅಂಕೇಗೌಡ ಲಾಟರಿ ಮೊರೆ ಹೋದ ಸಿ.ಎಂ.ರಾಮು ಅವರು ಆಯ್ಕೆಯಾದರು.

ನೂತನ ಅಧ್ಯಕ್ಷನಿಗೆ ಹಿಗ್ಗಾಮುಗ್ಗಾ ಥಳಿತ

ಸಂಘದಿಂದ ಹೊರಬಂದ ಬಳಿಕ ಎಸ್‌.ಪಿ.ಸ್ವಾಮಿ ಬೆಂಬಲಿಗರ ಬಳಿ ಬಂದು ಗೊತ್ತಿಲ್ಲದೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿ.ಎಂ.ರಾಮು ಪರ ಮತ ಹಾಕಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ಎಸ್‌.ಪಿ.ಸ್ವಾಮಿ ಬೆಂಬಲಿಗರ ಗುಂಪು ಸಿ.ಟಿ.ಮಹೇಂದ್ರನ ಮೇಲೆ ಹಲ್ಲೆ ನಡೆಸಿ ಟವಲ… ಕಿತ್ತೆಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ತರಾಟೆ ತೆಗೆದುಕೊಂಡರು. ಇದರಿಂದ ಆತಂಕಗೊಂಡ ಮಹೇಂದ್ರ ಸಂಘದ ಕಚೇರಿಯೊಳಗೆ ತೆರಳಿದ್ದಾರೆ. ರೊಚ್ಚಿಗೆದ್ದ ಬೆಂಬಲಿಗರ ಗುಂಪು ಕಚೇರಿಯೊಳಗೆ ನುಗ್ಗಿ ಸಿ.ಟಿ.ಮಹೇಂದ್ರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಅಲ್ಲದೇ, ಕುರ್ಚಿಗಳನ್ನೆಲ್ಲಾ ಒಡೆದುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅಭಿನಂದನೆ ಸಲ್ಲಿಸಲು ತಂದಿದ್ದ ಹಾರಗಳನ್ನು ಕಿತ್ತಸೆದು ಎರಚಾಡಿದರು. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಟ್ಟುಹಿಡಿದರು. ಕೊನೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿ.ಟಿ.ಮಹೇಂದ್ರ ಒಪ್ಪಿಕೊಂಡಿದ್ದಾರೆ. ಚುನಾವಣಾಧಿಕಾರಿ ಹೊರ ಹೋಗುವಂತೆ ಸೂಚನೆ ನೀಡಿದ ಬಳಿಕ ಸಂಘದ ಆವರಣದಲ್ಲಿ ನೆರೆದಿದ್ದ ಬಿಜೆಪಿ ಬೆಂಬಲಿಗರ ಗುಂಪು ಮತ್ತೆ ಕುರ್ಚಿಗಳನ್ನು ಎಸೆದು ದಾಂಧಲೆ ನಡೆಸಿತು. ಆನಂತರ ಸ್ಥಳಕ್ಕೆ ಧಾವಿಸಿದ ಸಬ್‌ಇನ್ಸ್‌ಪೆಕ್ಟರ್‌ ಮಂಜೇಗೌಡ ಹಾಗೂ ಸಿಬ್ಬಂದಿ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ರಾಜೀನಾಮೆಗೆ ಮುಂದಾದ ನೂತನ ಅಧ್ಯಕ್ಷ:

ಕಾರ್ಯಕರ್ತರ ಹಲ್ಲೆಯಿಂದ ಹೆದರಿದ ನೂತನ ಅಧ್ಯಕ್ಷ ಮಹೇಂದ್ರ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿಗೆ ರಾಜೀನಾಮೆ ಪತ್ರ ಬರೆದುಕೊಡಲು ಮುಂದಾದರು. ಆಗ ಚುನಾವಣಾಧಿಕಾರಿಗಳು ಚುನಾವಣೆ ಇಂದು ನಡೆದಿರುವುದರಿಂದ ರಾಜೀನಾಮೆ ನೀಡಲು ಅವಕಾಶವಿಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟರು. ಕಾರ್ಯಕರ್ತರು ಮತ್ತೆ ಹಲ್ಲೆ ನಡೆಸಬಹುದೆಂಬ ಕಾರಣದಿಂದ ಸಿ.ಟಿ.ಮಹೇಂದ್ರರನ್ನು ಪೊಲೀಸರು ಠಾಣೆಗೆ ಕರೆದೊಯ್ದರು.