ದೊಡ್ಡಬಳ್ಳಾಪುರ (ಜ.30): ಮಿಣಿ ಮಿಣಿ ಪೌಡರ್‌ ಟ್ರೋಲ್‌ ಮಾಡಿದ್ದು ಬಿಜೆಪಿಯವರೇ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ‍್ಯದರ್ಶಿ ಬಿ.ವೈ.ವಿಜಯೇಂದ್ರ, ಕುಮಾರಸ್ವಾಮಿಯವರು ತಾವಾಗಿಯೇ ನೀಡಿದ ಹೇಳಿಕೆ ಮೂಲಕ ಮಿಣಿ ಮಿಣಿ ಕುಮಾರಸ್ವಾಮಿಯಾಗಿ ಸ್ವಯಂ ಪ್ರಸಿದ್ಧಿಯಾಗಿದ್ದಾರೆ ಎಂದು ತಿರುಗೇಟು ನೀಡಿದರು.

ದೊಡ್ಡಬಳ್ಳಾಪುರದಲ್ಲಿ ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತಂದ ಮೊದಲ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಏಕೆಂದರೆ ಕಳೆದ ಒಂದು ವರ್ಷದಲ್ಲಿ ಅವರು ನಡೆಸಿದ ಆಡಳಿತದಿಂದ ಬೇಸತ್ತು ಅವರ ಪಕ್ಷದ ಶಾಸಕರು ರಾಜೀನಾಮೆ ಕೊಟ್ಟು, ಬಿಜೆಪಿ ಪಕ್ಷಕ್ಕೆ ಬಂದು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಅವರೆಲ್ಲರ ಸಹಕಾರದಿಂದ ಸರ್ಕಾರ ರಚನೆಯಾಗಿದೆ ಎಂದರು.

ಎಚ್‌ಡಿಕೆ ಮಿಣಿಮಿಣಿ ಪೌಡರ್‌ಗೆ ಯತ್ನಾಳ್‌ ಲೇವಡಿ ಮಾಡಿದ್ದು ಹೀಗೆ.....

ಸಚಿವ ಸಂಪುಟ ಶೀಘ್ರ ವಿಸ್ತರಣೆ:

ಬರುವ ದಿನಗಳಲ್ಲಿ ಮಂತ್ರಿಮಂಡಲ ವಿಸ್ತರಣೆ ಮಾಡುವ ಮೂಲಕ ಉತ್ತಮ ಆಡಳಿತ ನೀಡುತ್ತೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎರಡು ಮೂರು ದಿನಗಳಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲಿದ್ದಾರೆ. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೆ ಸದ್ಯದಲ್ಲೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಸೋತವರಿಗೆ ಸಚಿವ ಸ್ಥಾನ ನೀಡುವುದನ್ನು ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು, ರಾಷ್ಟ್ರೀಯ ನಾಯಕರು ಚರ್ಚಿಸಿ ತಿರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.