ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಶಾಸಕ ಬಿ.ಸುರೇಶ್‌ ಗೌಡ ಬಿ.ಸುರೇಶ್‌ ಗೌಡ ಈಗ ಸ್ವಪಕ್ಷದ ಸಚಿವರ ವಿರುದ್ಧವೇ ಸಿಡಿದೆದ್ದಿದ್ದಾರೆ

 ತುಮಕೂರು (ಅ.19): ತುಮಕೂರು (Tumakur) ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿದ್ದ ಮಾಜಿ ಶಾಸಕ ಬಿ.ಸುರೇಶ್‌ ಗೌಡ (B Suresh Gowda) ಈಗ ಸ್ವಪಕ್ಷದ ಸಚಿವರ ವಿರುದ್ಧವೇ ಸಿಡಿದೆದ್ದಿದ್ದಾರೆ. ಕಾನೂನು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ (JC Madhuswamy) ಅವರು ನೀಡಿದ್ದ ಹೇಳಿಕೆಯೊಂದಕ್ಕೆ ತೀವ್ರ ಅಸಮಾಧಾನಗೊಂಡಿರುವ ಸುರೇಶ್‌ಗೌಡ, ಮೂಲ ಬಿಜೆಪಿಗರಿಗೆ (BJP) ನೋವಾಗಿದೆ. ಇದನ್ನು ಸರಿಪಡಿಸಿ ಎಂದು ಹೇಳುವ ಮೂಲಕ ಬಂಡಾಯದ ಬಾವುಟವನ್ನು ಪ್ರದರ್ಶಿಸಿದ್ದಾರೆ.

ಇತ್ತೀಚೆಗೆ ಸಚಿವ ಮಾಧುಸ್ವಾಮಿ ‘ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆ (Irrigation Project) ಅವೈಜ್ಞಾನಿಕ’ ಎಂದಿದ್ದರು. ಇದರಿಂದ ಕೆರಳಿರುವ ಶಾಸಕ ಸುರೇಶಗೌಡ, ಮಾಧುಸ್ವಾಮಿ ವಿರುದ್ಧ ಹೈಕಮಾಂಡ್‌ಗೆ ದೂರು (Complaint) ನೀಡಲು ನಿರ್ಧರಿಸಿದ್ದಾರೆ.

ರಾಜೀನಾಮೆ ಬಳಿಕ ಕಟೀಲ್ ವಿರುದ್ಧ ಅಸಮಾಧಾನ, ಬಿಎಸ್‌ವೈ ಭೇಟಿಯಾದ ಸುರೇಶ್ ಗೌಡ

ಮಾಧುಸ್ವಾಮಿ ವಿರುದ್ಧ ಪ್ರಧಾನಿ ಮೋದಿ (Narendra Modi), ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ (JP Nadda) ಹಾಗೂ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ಗೆ (Nalin Kumar Kateel) ಪತ್ರ ಬರೆಯುವುದಾಗಿ ಬಿ.ಸುರೇಶಗೌಡ ಹೇಳಿದ್ದಾರೆ.

‘ನೀರು ಬೇಕಿದ್ದರೆ ಸುರೇಶ ಗೌಡರು ನನ್ನನ್ನೇ ಕೇಳಬೇಕಿತ್ತು’ ಎಂಬ ಮಾತಿಗೆ ಸುರೇಶ್‌ಗೌಡ ಸಿಟ್ಟಾಗಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಹೊಟ್ಟೆಹಸಿದಾಗ ಊಟ ಹಾಕಿ ಎಂದು ಕೇಳುವುದು ನನ್ನ ಧರ್ಮ. ಕ್ಷೇತ್ರದ ನನ್ನ ಜನ ಕಷ್ಟದಲ್ಲಿರುವಾಗ ಕೆರೆಗಳನ್ನು ತುಂಬಿಸಿ ಎಂದು ಸಚಿವರಿಗೆ ವಿನಂತಿ ಮಾಡಿದ್ದೆ ವಿನಃ ಯೋಜನೆ ವೈಜ್ಞಾನಿಕವಾಗಿದೆಯೋ ಅಥವಾ ಅಲ್ಲವೋ ಎಂದು ಹೇಳಿಕೆ ನೀಡಿ ಎಂದಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಯೋಜನೆ ನನ್ನದಲ್ಲ. 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಯೋಜನೆಗೆ ಚಾಲನೆ ನೀಡಿದ್ದರು. ಯೋಜನೆ ಅವೈಜ್ಞಾನಿಕವಾಗಿದ್ದರೆ ತನಿಖೆ ಮಾಡಿಸಿ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ತುಮಕೂರು ಗ್ರಾಮಾಂತರಕ್ಕೆ 0.4 ಟಿಎಂಸಿ (TMC) ನೀರು ಹಂಚಿಕೆಯಾಗಿದೆ. ಆ ನೀರನ್ನು ಬಿಟ್ಟಿದ್ದೀರಾ ಎಂದು ಮಾಧುಸ್ವಾಮಿ ಅವರನ್ನು ಸುರೇಶಗೌಡ ಪ್ರಶ್ನಿಸಿದರು.

ಏಕೆ ಅಸಮಾಧಾನ?

2008ರಲ್ಲಿ ಯಡಿಯೂರಪ್ಪ (BS Yediyurapp) ಸಿಎಂ, ಬಸವರಾಜ ಬೊಮ್ಮಾಯಿ (Basavaraja Bommai) ನೀರಾವರಿ ಮಂತ್ರಿಯಾಗಿದ್ದಾಗ ಕೆರೆಗಳಿಗೆ ನೀರು ತುಂಬಿಸಲು ತುಮಕೂರಿನಲ್ಲಿ ಹೆಬ್ಬೂರು- ಗೂಳೂರು ಏತ ನೀರಾವರಿ ಅನುಷ್ಠಾನಗೊಳಿಸಿದ್ದರು. ಈ ಯೋಜನೆಯಡಿ ನೀರು ಹರಿಸಿ ಎಂದಿದ್ದಕ್ಕೆ ಯೋಜನೆಯೇ ಅವೈಜ್ಞಾನಿಕ ಎಂದು ಹೇಳಿದ್ದ ಮಾಧುಸ್ವಾಮಿ. ಹೀಗಾಗಿ ಸಚಿವರ ವಿರುದ್ಧ ಸುರೇಶಗೌಡ ಆಕ್ರೋಶ.