ಸುಳ್ಯ: ಹೊಳೆಯಲ್ಲಿ ಮುಳುಗಿ ಬಿಜೆಪಿ ಮುಖಂಡ ನವೀನ್ ರೈ ಮೇನಾಲ ದುರ್ಮರಣ
ಬಿಜೆಪಿ ಮುಖಂಡ, ಜಿ.ಪಂ. ಮಾಜಿ ಸದಸ್ಯ ನವೀನ್ ರೈ ಮೇನಾಲ ಪಯಸ್ವಿನಿ ಹೊಳೆಯಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದಾರೆ.
ಸುಳ್ಯ (ಮೇ.19): ಬಿಜೆಪಿ ಮುಖಂಡ, ಜಿ.ಪಂ. ಮಾಜಿ ಸದಸ್ಯ ನವೀನ್ ರೈ (52)ಮೇನಾಲ ಗುರುವಾರ ಪಯಸ್ವಿನಿ ಹೊಳೆಯಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದಾರೆ.
ನವೀನ್ ರೈ(Naveen rai menala bjp leader)ಯವರ ಮನೆ ಮೇನಾಲದಲ್ಲಿದ್ದು, ಪಕ್ಕದಲ್ಲಿಯೇ ಕೃಷಿ ತೋಟವಿದೆ. ಅದರ ಇನ್ನೊಂದು ಪಾಶ್ರ್ವದಲ್ಲಿ ಪಯಸ್ವಿನಿ ಹೊಳೆಗೆ ನೀರಿನ ಪಂಪ್ ಅಳವಡಿಲಾಗಿದ್ದು, ಅಲ್ಲಿಗೆ ತುದಿಯಡ್ಕ ಮೂಲಕ ಸಾಗಬೇಕಾಗಿದೆ. ನವೀನ್ ರೈಯವರು ಆಗಾಗ ಇಲ್ಲಿಗೆ ಬಂದು ಹೋಗುತ್ತಿರುತ್ತಾರೆ. ಇಂದು ಬೆಳಗ್ಗೆ 10.30ರ ವೇಳೆಗೆ ಗಿರಿಜಾಶಂಕರ್ ತುದಿಯಡ್ಕ ಅವರ ಮನೆಯ ಬಳಿ ಬೈಕ್ ನಿಲ್ಲಿಸಿ ಪುಟ್‌ವಾಲ್‌ನಲ್ಲಿರುವ ಕಸ ತೆಗೆಯಲೆಂದು ಅಲ್ಲಿಗೆ ಹೋಗಿದ್ದರು. ನದಿಯ ದಡದಲ್ಲಿ ಮೊಬೈಲ್, ವಾಚ್ ಮತ್ತಿತರ ಸಾಮಾನುಗಳನ್ನಿರಿಸಿ ನದಿಗಿಳಿದಿದ್ದರು.
ತುಂಗಭದ್ರಾ ನದಿ ಕೆಸರಲ್ಲಿ ಸಿಲುಕಿ ಸಹೋದರರ ಸಾವು: ಈಜಲು ಹೋದವರು ನೀರು ಪಾಲಾದರು
ಬಹಳ ಹೊತ್ತಾದರೂ ನವೀನ್ ರೈಯವರು ಮರಳಿ ಬಾರದ್ದರಿಂದ ಪರಿಸರದಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ಗಿರಿಜಾಶಂಕರ್ ಅವರ ಪತ್ನಿಗೆ ವಿಷಯ ತಿಳಿಸಿದರು. ಸುಳ್ಯದ ಸಭೆಯೊಂದರಲ್ಲಿದ್ದ ಗಿರಿಜಾಶಂಕರ್‌ರವರಿಗೆ ಪತ್ನಿ ಕೂಡಲೇ ಬರುವಂತೆ ಫೋನಾಯಿಸಿದರು. ಅದಾಗಲೇ ನವೀನ್ ರೈ ನಾಪತ್ತೆಯಾಗಿರುವ ವಿಚಾರ ಪ್ರಚಾರಗೊಂಡಿತು. ಪೈಚಾರಿನ ಮುಳುಗು ತಜ್ಞರಿಗೂ ಮಾಹಿತಿ ಹೋಗಿ ಅವರು ಧಾವಿಸಿ ಬಂದರು. ಅಗ್ನಿಶಾಮಕ ದಳದವರು ಕೂಡಾ ಸ್ಥಳಕ್ಕೆ ಬಂದರು. ಸ್ಥಳಕ್ಕೆ ಬಂದ ಮುಳುಗು ತಜ್ಞರಾದ ಆರ್.ಬಿ.ಬಶೀರ್, ಶರೀಫ್ ಟಿ.ಎ., ಅಬ್ಬಾಸ್ ಶಾಂತಿನಗರ, ಲತೀಫ್ ಬೊಳುಬೈಲು, ಲತೀಫ್ ಟಿ.ಎ. ಮೊದಲಾದವರು ಹೊಳೆಗಿಳಿದು ಅರ್ಧ ಗಂಟೆ ಶೋಧ ನಡೆಸಿದಾಗ ಸ್ವಲ್ಪ ದೂರದ ಆಳದಲ್ಲಿ ನವೀನ್ ರೈಯವರ ಮೃತದೇಹ ಪತ್ತೆಯಾಯಿತು. ಅದನ್ನು ದಡಕ್ಕೆ ತಂದು ಗಿರಿಜಾಶಂಕರ್‌ರವರ ಮನೆಯ ಬಳಿಯಿಂದ ಆಂಬುಲೆನ್ಸ್‌ನಲ್ಲಿ ಮರಣೋತ್ತರ ಪರೀಕ್ಷೆಗೆ ತರಲಾಯಿತು.
ಜಾನುವಾರು ಉಳಿಸಲು ಹೋಗಿ ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರ ಸಾವು..!
ಪ್ರಭಾವಿ ಬಿಜೆಪಿ ಮುಖಂಡರಾಗಿರುವ ನವೀನ್ ರೈ ಮೇನಾಲ ಜಾಲ್ಸೂರು ಜಿ.ಪಂ. ಕ್ಷೇತ್ರದ ಮಾಜಿ ಸದಸ್ಯರು. ಅಜ್ಜಾವರ ಗ್ರಾ.ಪಂ.ನ ಮಾಜಿ ಸದಸ್ಯರು. ಕಲ್ಲಿನ ಕೋರೆಯನ್ನು ಕೂಡಾ ಹೊಂದಿದ್ದು, ಉದ್ಯಮಿಯಾಗಿಯೂ ಪ್ರಸಿದ್ಧರಾಗಿದ್ದರು. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿದ್ದರು.