'ಇನ್ನೂ 10 ವರ್ಷ ಕಾಂಗ್ರೆಸ್ ಅಧಿಕಾರ ಹಿಡಿಯಲ್ಲ'
ರಾಜ್ಯದಲ್ಲಿ ಕಾಂಗ್ರೆಸ್ ಇನ್ನೂ 10 ವರ್ಷ ಅಧಿಕಾರ ಹಿಡಿಯುವುದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಭ್ರಮ ಕಳಚಲಿದೆ. ಗೆಲ್ಲುವ ಸ್ಥಿತಿಯಲ್ಲಿ ಪಕ್ಷವಿಲ್ಲ ಎಂದು ಮುಖಂಡರೀರ್ವರು ಹೇಳಿದ್ದಾರೆ.
ಬೆಳಗಾವಿ (ಏ.08): ಕಾಂಗ್ರೆಸ್ ಪಕ್ಷ ಮುಳುಗುವ ಹಡಗು ಎಂದು ಹೋಲಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಇನ್ನೂ ಹತ್ತು ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಾನು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರವಾಗಿ ಬುಧವಾರ ರಾಮದುರ್ಗ ತಾಲೂಕಿನ ಸಾಲಹಳ್ಳಿ, ಯರಗಟ್ಟಿಮತ್ತು ಸವದತ್ತಿ ತಾಲೂಕಿನ ಮುರಗೋಡಗಳಲ್ಲಿ ನಡೆದ ಸಮಾರಂಭಗಳಲ್ಲಿ ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ತೋಳ್ಬಲ, ಹಣಬಲ, ಅಧಿಕಾರದ ಬಲದಿಂದ ಜಾತಿ ವಿಷ ಬೀಜ ಬಿತ್ತಿ ಕಾಂಗ್ರೆಸ್ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುವ ಸ್ಥಿತಿಯಲ್ಲಿಲ್ಲ. ಅದು ಮುಳುಗುವ ಹಡಗಿನಂತಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ನೆಲಕಚ್ಚಿದ್ದು ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಆಗುವುದಕ್ಕೆ ಬಡಿದಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ಹೊರದೇಶಕ್ಕೂ ಸಾಲ ಕೊಡುವ ಏಕೈಕಿ ಪ್ರಧಾನಿ ಎಂದರೆ ನರೇಂದ್ರ ಮೋದಿ ಅವರು ಎಂದು ಹೇಳಿದರು.
ಕಾಂಗ್ರೆಸ್ ಸೇರಿದ ಜೆಡಿಎಸ್ ಪ್ರಭಾವಿ ನಾಯಕ: ದಳಪತಿಗಳಿಗೆ ಮರ್ಮಾಘಾತ ..
ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಕೊಡಗೆ ರಾಜ್ಯ ಮತ್ತು ರಾಷ್ಟ್ರಕ್ಕೆ ಬಹಳ ದೊಡ್ಡದಿದ್ದು ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿಯವರನ್ನು ಗೆಲ್ಲಿಸುವ ಮೂಲಕ ಅವರ ಋುಣವನ್ನು ತೀರಿಸಬೇಕಿದೆ ಎಂದರು. ಇದೇವೇಳೆ ಮಂಗಲ ಅಂಗಡಿ 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಸರ್ವಧರ್ಮಗಳ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ. ಈಗಾಗಲೇ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ .50 ಕೋಟಿ ಅನುದಾನ ಘೋಷಣೆ ಮಾಡಿದ್ದು, ಈ ಪೈಕಿ 25 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದ ಅವರು, ನೇಕಾರರ ಕುಟುಂಬಕ್ಕೆ ಸಹಾಯಧನ ನೀಡಲಾಗುವುದು ಎಂದು ಭರವಸೆ ನೀಡಿದರು. ರಾಜ್ಯದ ಮತದಾರ ಪ್ರಭು ನನ್ನ ಜೊತೆ ಕೈಜೋಡಿಸಿದಲ್ಲಿ ರೈತರಿಗಾಗಿ ಕೆರೆ ಕಟ್ಟೆಗಳನ್ನು ತುಂಬಿಸುವ ಕಾರ್ಯವನ್ನು ಪ್ರಾರಂಭಿಸಿ ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ನಿನ್ನೆ ಬಿಡುವಿಲ್ಲದೆ ಪ್ರಚಾರ ಕಾರ್ಯ: ಮುಖ್ಯಮಂತ್ರಿ ಯಡಿಯೂಪ್ಪನವರು ಗುರುವಾರ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ದಿನವಿಡೀ ಬಿಡುವಿಲ್ಲದೆ ಪ್ರಚಾರ ಕಾರ್ಯ ನಡೆಸಿದರು. ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ಬೆಳಗ್ಗೆ 11ಕ್ಕೆ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನಂತರ ಯರಗಟ್ಟಿಗೆ ಮಧ್ಯಾಹ್ನ 1.30ರ ಕಾರ್ಯಕ್ರಮ, ಸವದತ್ತಿ ತಾಲೂಕಿನ ಮುರಗೋಡಕ್ಕೆ ಸಂಜೆ 4.30ಕ್ಕೆ ಹಾಗೂ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಸಂಜೆ 6.30ಕ್ಕೆ ಸಿಎಂ ಯಡಿಯೂರಪ್ಪ ಪ್ರಚಾರ ಕಾರ್ಯ ನಿಮಿತ್ತ ಸಭೆ ನಡೆಸಿದರು. ನಂತರ ರಾತ್ರಿ ಬೆಳಗಾವಿಯಲ್ಲಿಯೇ ವಾಸ್ತವ್ಯ ಮಾಡಿದರು. ಮುಖ್ಯಮಂತ್ರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಜಗದೀಶ ಶೆಟ್ಟರ್, ಉಮೇಶ ಕತ್ತಿ ಮತ್ತಿತರರು ಸಾಥ್ ನೀಡಿದರು.