ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ ರೇಣುಕಾಚಾರ್ಯ/ ಕಾಂಗ್ರೆಸ್ ನಾಯಕರೇ ಡಿಕೆಶಿ ಇಡಿ ವಶವಾಗಲು ಕಾರಣ/  ಬಿಜೆಪಿ ಸರ್ಕಾರ ಪೂರ್ಣಾವಧಿ ಮುಗಿಸಿ ಮುಂದೆಯೂ ಅಧಿಕಾರಕ್ಕೆ

ದಾವಣಗೆರೆ[ಸೆ. 09]  ಡಿಕೆ ಶಿವಕುಮಾರ್ ಅವರನ್ನು ಮಾರಿ ಮುಂದೆ ಕೋಣ ಕಡಿಯುವ ರೀತಿಯಲ್ಲಿ ಕಡಿಯುತ್ತಾರೆ. ಬಲಿಪಶು ಮಾಡುತ್ತಾರೆ ಎಂದು ಈ ಹಿಂದೆ ಕುಂದಗೋಳ ಚುನಾವಣಾ ಸಂದರ್ಭದಲ್ಲಿಯೇ ಹೇಳಿದ್ದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ದಾವಣಗೆರೆಯಲ್ಲಿ ಹೇಳಿದ್ದಾರೆ.

ಡಿ. ಕೆ ಶಿವಕುಮಾರ್ ಮಹಾನ್ ರಾಜಕಾರಣಿ, ಕಾಂಗ್ರೆಸ್ ‌ನಲ್ಲಿ ಇರುವ ಉತ್ತಮ‌ ನಾಯಕನೆಂದರೆ ಡಿಕೆಶಿ. ಅವರು ಪಕ್ಷದಲ್ಲಿ ಬೆಳೆಯುತ್ತಾರೆ ಎಂದು ಅವರನ್ನು ತುಳಿಯುವ ಕೆಲಸ ನಡೆದಿದೆ. ಕಾಂಗ್ರೆಸ್ ನವರೇ ಡಿಕೆ ಶಿವಕುಮಾರ್ ಜೈಲಿಗೆ ಹೋಗಲು ಕಾರಣ ಬಿಜೆಪಿಯವರಲ್ಲ ಎಂದು ರೇಣುಕಾಚಾರ್ಯ ಪ್ರತಿಪಾದನೆ ಮಾಡಿದರು.

ಇಬ್ಬರು ಮಾಜಿ ಸಿಎಂಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಹತಾಶರಾಗಿ ಸರ್ಕಾರ ನಾಲ್ಕು ತಿಂಗಳಲ್ಲಿ ಬೀಳುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಈ ಸರ್ಕಾರ ಯಡಿಯೂರಪ್ಪನವರ ನೇತೃತ್ವದಲ್ಲಿ ಪೂರ್ಣಾವಧಿ ಮುಗಿಸಿ 2023 ಕ್ಕೆ ಮತ್ತೆ ಅಧಿಕಾರ ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನ್ನಭಾಗ್ಯ ಕೃಷಿ ಭಾಗ್ಯ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಅದೇ ಕಾರಣಕ್ಕೆ ತನಿಖೆಗೆ ಯಡಿಯೂರಪ್ಪ ಆದೇಶಿಸಿದ್ದಾರೆ. ಭ್ರಷ್ಟಾಚಾರ ಮಾಡಿದ್ರು ಕೈ ಕಟ್ಟಿ ಕುಳಿತುಕೊಳ್ಳಬೇಕಾ? ಎಂದು ಪ್ರಶ್ನೆ ಮಾಡಿದರು.