ರೋಹಿಣಿ ಸಿಂಧೂರಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ : ಬಿಜೆಪಿ ಮುಖಂಡ
- ಕೋವಿಡ್ ಆಸ್ಪತ್ರೆಯಲ್ಲಿ ಅಕ್ಸಿಜನ್ ಕೊರತೆಯಿಂದ 24 ಮಂದಿ ಸಾವು
- ರೋಹಿಣಿ ಸಿಂಧೂರಿ ವಿರುದ್ಧ ಬಿಜೆಪಿ ಮುಖಂಡ ಆಕ್ರೋಶ
- ಕೊಲೆ ಮೊಕದ್ದಮೆ ದಾಖಲಿಸಬೇಕೆಂದ ಬಿಜೆಪಿ ಮುಖಂಡ
ಚಾಮರಾಜನಗರ (ಜೂ.07): ಕೋವಿಡ್ ಆಸ್ಪತ್ರೆಯಲ್ಲಿ ಅಕ್ಸಿಜನ್ ಕೊರತೆಯಿಂದ 24 ಮಂದಿ ಮೃತಪಟ್ಟಿರುವ ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಮುಖ ಕಾರಣಕರ್ತರಾಗಿದ್ದು, ಅವರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಬೇಕೆಂದು ಬಿಜೆಪಿ ರೈತ ಮುಖಂಡ ಮಲ್ಲೇಶ್ ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿಮಂದಿರದಲ್ಲಿ ರೋಹಿಣಿ ಸಿಂಧೂರಿ ಹಾಗೂ ಡಗ್ಸ್ ಕಂಟ್ರೋಲ್ ಅರುಣ್ ಅವರೊಂದಿಗೆ ಮಾತನಾಡಿರುವ ಆಡಿಯೋ ಕ್ಲಿಪಿಂಗ್‌ಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಚಾಮರಾಜನಗರಕ್ಕೆ ಅಕ್ಸಿಜನ್ ಪೂರೈಕೆ ಮಾಡಬೇಡಿ ಎಂದು ರೋಹಿಣಿ ಧಮ್ಕಿ ಹಾಕಿದ್ದು ಮತ್ತು ರೋಹಿಣಿ ಸಿಂಧೂರಿ ಅನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ಚಾಮರಾಜನಗರಕ್ಕೆ ಆಕ್ಸಿಜನ್ ಕೊಡಲಾಗುವುದಿಲ್ಲ ಎಂದು ಆಮ್ಲಜನಕ ಸರಬರಾಜು ಕೇಂದ್ರದ ಅಧಿಕಾರಿ ತಿಳಿಸಿರುವುದು ಆಡಿಯೋ ಕ್ಲಿಪ್ಪಿಂಗ್‌ನಲ್ಲಿ ಬಹಿರಂಗಗೊಂಡಿದೆ.
ಟ್ರಾನ್ಸ್‌ಫರ್ ಆದ್ರೂ ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಕಿಡಿಕಾರಿದ ಶಿಲ್ಪಾನಾಗ್ ..
ಇಂತಹ ಗುರುತರ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಿದರೆ ಸಾಕಾಗುವುದಿಲ್ಲ. ಆಕೆಯ ಮೇಲೆ ಕೊಲೆ ಮೊಕದ್ದಮೆ ದಾಖಲಿಸಿ ಕರ್ತವ್ಯದಿಂದ ಅಮಾನತುಪಡಿಸಿದರೆ, ಜಿಲ್ಲೆಯ ಜನರಿಗೆ ನ್ಯಾಯ ದೊರಕುತ್ತದೆ ಎಂದರು.
ಒಂದು ವೇಳೆ ರಾಜ್ಯ ಸರ್ಕಾರ ಈಕೆಯ ಮೇಲೆ ಕೊಲೆ ಮೊಕದ್ದಮೆ ದಾಖಲು ಮಾಡದಿದ್ದರೆ ಜಿಲ್ಲೆಯ ಜನತೆ ಪರ ನಾನೇ ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡುತ್ತೇನೆ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡುತ್ತೇನೆ ಎಂದು ಮಲ್ಲೇಶ್ ಹೇಳಿದರು. ರಾಜ್ಯ ಸರ್ಕಾರ ಈಗ ನೀಡಿರುವ .2 ಲಕ್ಷ ಪರಿಹಾರ ಕಡಿಮೆಯಾಗಿದ್ದು, ಕನಿಷ್ಠ ಪಕ್ಷ ಈ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಬೇಕೆಂದು ಮಲ್ಲೇಶ್ ಸರ್ಕಾರವನ್ನು ಒತ್ತಾಯಿಸಿದರು.