ಆಪರೇಶನ್ ಕಮಲ ನಡೆಸುವ ಪ್ರಶ್ನೆಯೇ ಇಲ್ಲ : ಬಿಜೆಪಿಗೆ ಅಧಿಕಾರ
- ತಮ್ಮ ತಾಟಿನಲ್ಲಿ ಹೆಗ್ಗಣ ಬಿದ್ದಿದ್ದರೂ ಇನ್ನೊಬ್ಬರ ತಾಟಲ್ಲಿನ ನೊಣ ಹುಡುಕುವ ಕೆಲಸ
- ಪಾಲಿಕೆ ಚುನಾವಣೆಯಲ್ಲಿ ತಮ್ಮ ಪಕ್ಷದ ಸ್ಥಿತಿ ಏನಾಗಿದೆ ಎಂಬುದನ್ನು ಡಿ.ಕೆ. ಶಿವಕುಮಾರ್ ನೋಡಿಕೊಳ್ಳಲಿ
ಹುಬ್ಬಳ್ಳಿ (ಸೆ.13): ತಮ್ಮ ತಾಟಿನಲ್ಲಿ ಹೆಗ್ಗಣ ಬಿದ್ದಿದ್ದರೂ ಇನ್ನೊಬ್ಬರ ತಾಟಲ್ಲಿನ ನೊಣ ಹುಡುಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತದೆ. ಪಾಲಿಕೆ ಚುನಾವಣೆಯಲ್ಲಿ ತಮ್ಮ ಪಕ್ಷದ ಸ್ಥಿತಿ ಏನಾಗಿದೆ ಎಂಬುದನ್ನು ಡಿ.ಕೆ. ಶಿವಕುಮಾರ್ ನೋಡಿಕೊಳ್ಳಲಿ ಎಂದು ಮಾಜಿ ಸಿಎಂ, ಶಾಸಕ ಜಗದೀಶ ಶೆಟ್ಟರ್ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಎಲ್ಲೆಡೆ ಅಧಿಕಾರ ಸ್ಥಾಪಿಸಲಿದ್ದು, ನಮ್ಮದೆ ಪಕ್ಷದವರು ಮೇಯರ್, ಉಪಮೇಯರ್ ಆಗಲಿದ್ದಾರೆ. ರಾಜ್ಯದಲ್ಲಿ ಅಧಿಕಾರ ಸಿಗುವುದಕ್ಕೆ ಮುನ್ನವೆ ಸಿಎಂ ಗಾದಿಗೆ ಕಚ್ಚಾಟ ನಡೆಯುತ್ತಿದೆ. ಕಾಂಗ್ರೆಸ್ ಆಂತರಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ಡಿಕೆಶಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.
ಅರುಣ್ ಸಿಂಗ್ ಭೇಟಿಯಾದ ಜಗದೀಶ್ ಶೆಟ್ಟರ್: ಕಾರಣ?
ಕಲಬುರ್ಗಿಯಲ್ಲಿ ಅಧಿಕಾರ ಹಿಡಿಯಲು ಆಪರೇಶನ್ ಕಮಲ ಮಾಡುವ ಪ್ರಶ್ನೆ ಇಲ್ಲ. ಅಲ್ಲಿ ಜೆಡಿಎಸ್ ಬೆಂಬಲ ಪಡೆದುಕೊಳ್ಳುವ ಪ್ರಯತ್ನ ನಡೆದಿದೆ. ಆರ್. ಅಶೋಕ ಅವರು ಕುಮಾರಸ್ವಾಮಿ ಅವರ ಜತೆಗೆ ಚರ್ಚಿಸಿದ್ದಾರೆ. ಹೀಗಿರುವಾಗ ಡಿ.ಕೆ. ಶಿವಕುಮಾರ್ ಆಪರೇಶನ್ ಕಮಲ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಹರಿಹಾಯ್ದರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಆಯೋಗದ ಮೇಲೆ ಒತ್ತಡ ಹಾಕಿದೆ, ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಎಂಬ ಡಿಕೆಶಿ ಹೇಳಿಕೆಯನ್ನು ಶೆಟ್ಟರ್ ಅಲ್ಲಗಳೆದರು.
ಇನ್ನು, ಶ್ರೀಮಂತ ಪಾಟೀಲ್ ಯಾವ ಅರ್ಥದಲ್ಲಿ ಬಿಜೆಪಿಯವರು ನನಗೆ ಹಣ ಕೊಟ್ಟು ಪಕ್ಷಕ್ಕೆ ಸೇರ್ಪಡೆಯಾಗು ಎಂದು ಹೇಳಿದ್ದರು ಎಂಬಂತ ಹೇಳಿಕೆ ಕೊಟ್ಟಿದ್ದಾರೊ ಗೊತ್ತಿಲ್ಲ. ಹಣ ನೀಡಿ ಪಕ್ಷಕ್ಕೆ ಕರೆದುಕೊಳ್ಳುವ ಪರಿಸ್ಥಿತಿ ಇಲ್ಲ ಎಂದರು.