ಹುಬ್ಬಳ್ಳಿ[ಮೇ. 16] ರೆಸಾರ್ಟ್‌ನಲ್ಲಿ‌ ಕೂತು ಡಿಕೆಶಿ ಹಣ ಹಂಚಿಕೆ ಮಾಡುತ್ತಿದ್ದಾರೆ. ಕುಂದಗೋಳ ಮೆಣಸಿನಕಾಯಿಗೆ ಫೇಮಸ್. ನಮ್ಮ ಜನರು ಡಿಕೆಶಿಗೆ ಮೆಣಸಿನಕಾಯಿ ರುಚಿ ತೋರಿಸಬೇಕು ಎಂದು ಮಾಜಿ ಸಚಿವ, ಬಿಜೆಪಿ ನಾಯಕ  ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಹಣದಿಂದ ಕುಂದಗೋಳ ಜನರನ್ನು ಖರೀದಿ ಮಾಡಲು ಬಂದವರಿಗೆ ತಕ್ಕಪಾಠ‌ ಕಲಿಸಬೇಕು. ನೀವು ಕೇವಲ ಶಾಸಕನ ಆಯ್ಕೆ ಮಾಡುತ್ತಿಲ್ಲ, ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಯ್ಕೆ ಮಾಡುತ್ತಿದ್ದೀರಿ. ಮೈತ್ರಿ ಸರ್ಕಾರ ಉತ್ತರ ಕರ್ನಾಟಕ ಜನರ ಪಾಲಿಗೆ ಸತ್ತು ಹೋಗಿದೆ. ಸಿದ್ದರಾಮಯ್ಯ ಯಾವ ಮುಖ‌ ಇಟ್ಕೊಂಡು ಕ್ಷೇತ್ರಕ್ಕೆ ಬರ್ತೀರಿ? ಎಂದು ಪ್ರಶ್ನೆ ಮಾಡಿದರು.

ಲೋಕ ಫಲಿತಾಂಶಕ್ಕೂ ಮುನ್ನ ಸಣ್ಣ ಫ್ಲಾಶ್ ಬ್ಯಾಕ್... ಕರ್ನಾಟಕದಲ್ಲೇನಾಗಿತ್ತು?

ನೀವು‌ ಸಿಎಮ್ ಆಗಿದ್ದಾಗ‌ ಕುಂದಗೋಳಕ್ಕೆ‌ ಒಮ್ಮೆಯೂ ಬಂದಿಲ್ಲ, ಅಭಿವೃದ್ಧಿ ಕೆಲಸ ಮಾಡಿಲ್ಲ. ಬಿಜೆಪಿಗೆ ಓಟ್ ಹಾಕಿ ಯಡಿಯೂರಪ್ಪನವರು ಮುಂದಿನ ಮುಖ್ಯಮಂತ್ರಿಯಾಗ್ತಾರೆ. ಮೈತ್ರಿ ನಾಯಕರು ಕಚ್ಚಾಟ ಆರಂಭಿಸಿದ್ದಾರೆ. ಸಿದ್ದರಾಮಯ್ಯನವರು ರೇವಣ್ಣನ ಹೆಸರಲ್ಲಿ ಈಗಾಗಲೆ ಪಿನ್ ಇಟ್ಟಿದ್ದಾರೆ. ಪಿನ್, ಡಬ್ಬಣ ಇಟ್ಕೊಂಡು ಅವರೇ ಪಂಕ್ಚರ್ ಆಗುತ್ತಾರೆ ಎಂದು ಲೇವಡಿ ಮಾಡಿದರು.

ಮೇ‌ 23ರಂದು ನರೇಂದ್ರ ಮೋದಿ ಪ್ರಧಾನಿಯಾಗ್ತಾರೆ. ನಂತರ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗ್ತಾರೆ ಎಂದು ಬಸವರಾಜ್ ಬೊಮ್ಮಾಯಿ ಭವಿಷ್ಯ ನುಡಿದರು.