ನವದೆಹಲಿ: 2004 ಮತ್ತು 2009ರ ಲೋಕಸಭಾ ಚುನಾವಣೆ ವೇಳೆ ಯುಪಿಎ ಮೈತ್ರಿಕೂಟವನ್ನು ಯಶಸ್ವಿಯಾಗಿದ್ದ ಮುನ್ನಡೆಸಿದ್ದ ಅಂದಿನ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, 2019ರ ಲೋಕಸಭಾ ಚುನಾವಣೆಯಲ್ಲೂ ಕೈಚಳಕ ತೋರಿಸಲು ನಿರ್ಧರಿಸಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭವಾದಾಗಿನಿಂದಲೂ ಪಕ್ಷದ ಹೋರಾಟದ ಮುಂಚೂಣಿ ನೆಲೆಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಸೋನಿಯಾ ಗಾಂಧಿ, ಲೋಕಸಭೆಯ ಕಡೆಯ ಹಂತದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಅಖಾಡಕ್ಕೆ ಇಳಿದಿರುವುದು ಸಾಕಷ್ಟುಅಚ್ಚರಿಗೆ ಕಾರಣವಾಗಿದೆ.

ಲೋಕಸಭಾ ಚುನಾವಣೆಯ ಫಲಿತಾಂಶವು, ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಬಹುಮತ ನೀಡುವ ಸಾಧ್ಯತೆ ಕಡಿಮೆ ಎಂಬ ವಿವಿಧ ಸಮೀಕ್ಷಾ ವರದಿಗಳ ಹಿನ್ನೆಲೆಯಲ್ಲಿ, ಯುಪಿಎ ನೇತೃತ್ವದ ಮೈತ್ರಿಕೂಟದಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆಯೊಂದಕ್ಕೆ ಸೋನಿಯಾ ಗಾಂಧಿ ಚಾಲನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿವಿಧ ಪ್ರಾದೇಶಿಕ ಪಕ್ಷಗಳ ಜೊತೆ ಚುನಾವಣಾ ಪೂರ್ವ ಮೈತ್ರಿ ಸಾಧ್ಯವಾಗದೇ ಹೋದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸೋನಿಯಾ ಗಾಂಧಿ, ಒಂದು ವೇಳೆ ಸರ್ಕಾರ ರಚನೆಯ ಸಣ್ಣ ಅವಕಾಶ ಸಿಕ್ಕಿದರೂ ಅದು ಕೈತಪ್ಪಬಾರದು ಎಂಬ ಕಾರಣಕ್ಕೆ, ಫಲಿತಾಂಶ ಪ್ರಕಟಕ್ಕೂ ಮುನ್ನವೇ ವಿವಿಧ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ನಡೆಸಿದ್ದಾರೆ. ಇದರ ಭಾಗವಾಗಿ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿರುವ ಮೇ 23ರಂದು ದೆಹಲಿಯಲ್ಲಿ ಸಭೆಯೊಂದನ್ನು ಆಯೋಜಿಸಿದ್ದು, ಸಭೆಗೆ ಆಗಮಿಸುವಂತೆ ಯುಪಿಎ ಮಿತ್ರಪಕ್ಷಗಳ ನಾಯಕರ ಜೊತೆಗೆ, ಎನ್‌ಡಿಎಯೇತರ ಪಕ್ಷಗಳ ವಿವಿಧ ನಾಯಕರನ್ನು ಸೋನಿಯಾ ಆಹ್ವಾನಿಸಿದ್ದಾರೆ.

ಅದರಲ್ಲೂ ಮುಖ್ಯವಾಗಿ ಟಿಡಿಪಿ, ಬಿಜೆಡಿ, ಟಿಆರ್‌ಎಸ್‌, ವೈಎಸ್‌ಆರ್‌ ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ವಿವಿಧ ಪಕ್ಷಗಳ ನಾಯಕರಿಗೆ ಸ್ವತಃ ಪತ್ರ ಬರೆದಿರುವ ಸೋನಿಯಾ ಗಾಂಧಿ, ಅವರೆಲ್ಲರನ್ನೂ ಸಭೆಗೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಡಿ, ಟಿಆರ್‌ಎಸ್‌ ಮತ್ತು ವೈಎಸ್‌ಆರ್‌ಪಿ ಒಟ್ಟಾಗಿ 39 ಸ್ಥಾನ ಗೆದ್ದಿದ್ದವು. ಇದು ಬಿಜೆಪಿ ಮತ್ತು ಕಾಂಗ್ರೆಸ್‌ ಹೊರತುಪಡಿಸಿ ಇತರೆ ಯಾವುದೇ ಪಕ್ಷಗಳಿಗೆ ಸಿಕ್ಕ ದೊಡ್ಡ ಮಟ್ಟದ ಸ್ಥಾನವಾಗಿದೆ. ಹೀಗಾಗಿಯೇ ಈ ಪಕ್ಷಗಳನ್ನು ಸೋನಿಯಾ ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಫೋನಿ ಚಂಡಮಾರುತ ನಿರ್ವಹಣೆ ಮಾಡಿದ ಬಗ್ಗೆ ನವೀನ್‌ ಪಟ್ನಾಯಕ್‌ರನ್ನು ಪ್ರಧಾನಿ ಮೋದಿ ಹೊಗಳಿದ್ದು, ಮತ್ತು ಇತ್ತೀಚೆಗೆ ಚಂಡಮಾರುತದ ವೇಳೆ ಮೋದಿ ನೆರವು ನೀಡಿದ್ದಕ್ಕೆ ಪಟ್ನಾಯಕ್‌ ಹೊಗಳಿದ್ದು ಕಾಂಗ್ರೆಸ್‌ ನಾಯಕರು ದಿಢೀರ್‌ ಎಚ್ಚೆತ್ತುಕೊಳ್ಳುವಂತೆ ಮಾಡಿದೆ ಎನ್ನಲಾಗಿದೆ.