ಕಾಂಗ್ರೆಸ್‌ಗೆ ಕಗ್ಗಂಟು : ಬಿಜೆಪಿ - ಜೆಡಿಎಸ್ ನಡುವೆ ಮೈತ್ರಿ?
ರಾಷ್ಟ್ರೀಯ ಪಕ್ಷ ಕಾಂಗ್ರೆಸಿಗೆ ಕಗ್ಗಂಟು ಎದುರಾಗಿದ್ದು, ಇದೀಗ ಇದೇ ನಿಟ್ಟಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿಯಾಗುವ ಸಾಧ್ಯತೆ ಹೆಚ್ಚಿದೆ.
ಎಸ್. ಉದಯಶಂಕರ್
ಟಿ. ನರಸೀಪುರ [ಮಾ.16]: ಟಿ. ನರಸೀಪುರ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗಧಿಯಾಗಿದ್ದು, ಪುರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟಬಹುಮತ ಇಲ್ಲದಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ಗೆ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿದೆ.
ರಾಜ್ಯದ ಆಡಳಿತರೂಢ ಪಕ್ಷವಾದ ಬಿಜೆಪಿ ಪಕ್ಷೇತರ ಸದಸ್ಯರ ಬೆಂಬಲ ಜೆಡಿಎಸ್ ಜೊತೆ ಸೇರಿಕೊಂಡು ಅಧಿಕಾರ ಹಿಡಿಯಲು ಕಾತರವಾಗಿದೆ. ಕಾದು ನೋಡುವ ತಂತ್ರಕ್ಕೆ ಜೆಡಿಎಸ್ ಮೊರೆ ಹೋಗಿದೆ. ಮೇಲ್ದರ್ಜೆಗೊಂಡಿರುವ ಪಟ್ಟಣದ ಪುರಸಭೆಯ ಸಾರ್ವತ್ರಿಕ ಚುನಾವಣೆ ನಡೆದ ವರ್ಷದ ಬಳಿಕ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿಗೆ ನಿಗದಿಯಾಗಿ ಮೀಸಲಾತಿ ಅಂತಿಮಗೊಂಡಿದೆ.
23 ಸದಸ್ಯರ ಬಲವಿರುವ ಪುರಸಭೆಯಲ್ಲಿ ಕ್ರಮವಾಗಿ ಕಾಂಗ್ರೆಸ್ 10, ಬಿಜೆಪಿ 4, ಜೆಡಿಎಸ್ 3 ಹಾಗೂ ಪಕ್ಷೇತರರು 6 ಮಂದಿ ಆಯ್ಕೆಗೊಂಡಿದ್ದಾರೆ.
ಹೆಚ್ಚಿನ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಜೆಡಿಎಸ್ ಜೊತೆ ಮೈತ್ರಿ ಅಥವಾ ಪಕ್ಷೇತರರ ಬೆಂಬಲದಿಂದ ಅಧಿಕಾರ ಹಿಡಿಯಬೇಕಿದ್ದು, ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆಯಾದರೂ ಪಕ್ಷೇತರರೂ ಕೂಡ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದರೆ ಅಧ್ಯಕ್ಷರ ಆಯ್ಕೆಗೆ ಸಮಸ್ಯೆಯಾಗಲಿದೆ.
ಬಿಎಸ್‌ವೈ ವಿರುದ್ಧ ನಾನು ಪತ್ರ ಬರೆದಿಲ್ಲ: ಸಂತೋಷ್ ಆಣೆ...
ನಾಲ್ವರು ಸದಸ್ಯರನ್ನು ಹೊಂದಿರುವ ಬಿಜೆಪಿಯೂ ಕೂಡ ಪಕ್ಷೇತರರು ಹಾಗೂ ಜೆಡಿಎಸ… ಸದಸ್ಯರ ಮನವೊಲಿಸಿ ಪುರಸಭೆಯಲ್ಲಿ ಕಮಲ ಅರಳಿಸುವ ಕಸರತ್ತನ್ನು ನಡೆಸುತ್ತಿದೆ. ಮೂವರು ಜೆಡಿಎಸ್ ಸದಸ್ಯರು ಇದುವರೆವಿಗೂ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಮಯ ನಿಗಧಿಯಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಾಗಲಿ ಅಥವಾ ಬಿಜೆಪಿಯಲ್ಲಾಗಲಿ ಈ ಬಗ್ಗೆ ಯಾವೊಂದು ಸಭೆಯನ್ನು ವರಿಷ್ಠರು ನಡೆಸಿಲ್ಲ. ಸ್ಥಾನಗಳ ಮೇಲೆ ಅಪೇಕ್ಷಿತ ಸದಸ್ಯರಷ್ಟೇ ಸದಸ್ಯರು ಹಾಗೂ ಸ್ಥಳೀಯ ಮುಖಂಡರ ಜೊತೆಗೂಡಿ ಲೆಕ್ಕಚಾರ ಮಾಡುತ್ತಿದ್ದಾರೆ.
ಕಾಂಗ್ರೆಸ್ಸಿನಲ್ಲಿ 21ನೇ ವಾರ್ಡ್‌ನ ನಾಗರತ್ನ ಮಾದೇಶ್, 10ನೇ ವಾರ್ಡ್‌ನ ಮಹದೇವಮ್ಮ, ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿರುವ ಪಕ್ಷೇತರರಾದ 12ನೇ ವಾರ್ಡ್‌ನ ಬಿ. ವಸಂತ ಶ್ರೀಕಂಠ ಹಾಗೂ ಬಿಜೆಪಿಯಿಂದ 8ನೇ ವಾರ್ಡ್‌ನ ರೂಪಶ್ರೀ ಪರಮೇಶ್ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನದ ಮೇಲೆ ಕಾಂಗ್ರೆಸ್ ಪಕ್ಷದ 3ನೇ ವಾರ್ಡಿನ ಪ್ರೇಮ ಮರಯ್ಯ. 6ನೇ ವಾರ್ಡಿನ ಬಿ. ಬೇಬಿ ಹೇಮಂತ್, ಜೆಡಿಎಸ್‌ನ 7ನೇ ವಾರ್ಡಿನ ಸಿ. ಪ್ರಕಾಶ್, ಬಿಜೆಪಿಯ 14ನೇ ವಾರ್ಡಿನ ಆರ್. ಅರ್ಜುನ್ ಹಾಗೂ 4ನೇ ವಾರ್ಡಿನ ಪಕ್ಷೇತರ ಸದಸ್ಯ ಎಲ್ ಮಂಜುನಾಥ್ ಅವರು ಉಪಾಧ್ಯಕ್ಷರಾಗಲು ಪ್ರಬಲ ಆಕಾಂಕ್ಷೆಯನ್ನು ಹೊಂದಿದ್ದಾರೆ.
ಸಾಮಾನ್ಯ ಮಹಿಳೆಗೆ ಮೀಸಲಿರುವ ಅಧ್ಯಕ್ಷ ಸ್ಥಾನದ ಮೇಲೆ ಮೂರನೇ ವಾರ್ಡಿನ ಸಾಮಾನ್ಯ ಮಹಿಳೆ ಮೀಸಲಿಡಿ ಕಾಂಗ್ರೆಸ್‌ನಿಂದ ಆಯ್ಕೆಗೊಂಡಿರುವ ಪ್ರೇಮ ಮರಯ್ಯ ಅವರು ಕೂಡ ಪ್ರಬಲ ಆಕಾಂಕ್ಷೆಯನ್ನು ಹೊಂದಿದ್ದು, ಹಿರಿಯ ರಾಜಕಾರಣಿ ಮೊಳ್ಳೆ ಮಾದೇಗೌಡರ ಮೊಮ್ಮಗಳು ಮತ್ತು ಶ್ರೀ ಗುಂಜಾನರಸಿಂಹಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಆರ್. ಮಹದೇವು(ಪುಳ್ಳಾರಿಗೌಡ) ಯಾಗಿರುವ ನಾಗರತ್ನ ಮಾದೇಶ್ ಹಾಗೂ ಪಕ್ಷೇತರ ಸದಸ್ಯ ಬಿ. ವಸಂತ ಅವರು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಹಾಗೂ ಸದಸ್ಯರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೊ ಎಂಬುದನ್ನು ಕಾದುನೋಡಬೇಕು.
ಪುರಸಭೆಗೆ ಅಧ್ಯಕ್ಷರನ್ನಾಗಿ ಆಯ್ಕೆಗೊಳ್ಳಲು ಅಪೇಕ್ಷೆ ಇದೆಯಾದರೂ ಅಂತಿಮ ನಿರ್ಧಾರ ಹೈಕಮಾಂಡ್ಗೆ ಬಿಟ್ಟದ್ದು, ಕಾಂಗ್ರೆಸ್ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಮಗೆ ಸಂಪೂರ್ಣವಾದ ನಂಬಿಕೆಯಿದೆ.
ನಾಗರತ್ನ ಮಾದೇಶ್, 21ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ
ಪಕ್ಷೇತರ ಸದಸ್ಯರಾಗಿ ಯೂ ಕಾಂಗ್ರೆಸ್ನಲ್ಲಿ ಸಂಪೂರ್ಣವಾಗಿ ಗುರುತಿಸಿಕೊಂಡಿದ್ದೇನೆ. ಅಧ್ಯಕ್ಷರ ಆಯ್ಕೆ ಸಂಬಂಧ ಕಾಂಗ್ರೆಸ್ ನಾಯಕರು ಹಾಗೂ ಸ್ಥಳೀಯ ಮುಖಂಡರು ನಮ್ಮನ್ನ ಕೈಹಿಡಿಯುವ ವಿಶ್ವಾಸವಿದೆ. ಬಿ ಫಾಮ್‌ರ್ ಹಂಚಿಕೆ ವೇಳೆ ಆದ ಅನ್ಯಾಯ ಈ ಬಾರಿ ಆಗಲ್ಲ ಎಂಬ ನಂಬಿಕೆ ಇದೆ.
ಬಿ. ವಸಂತ, 12 ವಾರ್ಡಿನ ಪಕ್ಷೇತರ ಸದಸ್ಯೆ
ಹಿಂದುಳಿದ ವರ್ಗ ಮಹಿಳಾ ಮೀಸಲು ನಿಗದಿಯಾಗಿದ್ದರೂ ನಾವ್ಯಾರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಗಳಲ್ಲ. ಹಾಗಾಗಿ ಸದಸ್ಯರ ಬಳಿ ಸಾಮಾಜಿಕ ನ್ಯಾಯದಂತೆ ಪುರಸಭೆಯಲ್ಲಿ ಅಧ್ಯಕ್ಷರಾಗಲು ನಮಗೆ ಅವಕಾಶ ನೀಡುವಂತೆ ಕೋರುತ್ತೇವೆ.
ರೂಪಶ್ರೀ ಪರಮೇಶ್, 8ನೇ ವಾರ್ಡಿನ ಬಿಜೆಪಿ ಸದಸ್ಯೆ