ತಾಲೂಕಿನಾದ್ಯಂತ ಪ್ರಮುಖರು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಮುಂಬರುವ ಚುನಾವಣೆ ಫಲಿತಾಂಶದ ದಿಕ್ಸೂಚಿಯಾಗಿದೆ ಎಂದು ಮಾಜಿ ಸಚಿವ ಸಿ. ಎಚ್‌. ವಿಜಯಶಂರ್ಕ ಹೇಳಿದರು.

ಪಿರಿಯಾಪಟ್ಟಣ : ತಾಲೂಕಿನಾದ್ಯಂತ ಪ್ರಮುಖರು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಮುಂಬರುವ ಚುನಾವಣೆ ಫಲಿತಾಂಶದ ದಿಕ್ಸೂಚಿಯಾಗಿದೆ ಎಂದು ಮಾಜಿ ಸಚಿವ ಸಿ. ಎಚ್‌. ವಿಜಯಶಂರ್ಕ ಹೇಳಿದರು.

ತಾಲೂಕಿನ ಬೋರೆಹೊಸಹಳ್ಳಿ ಗ್ರಾಮದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಬಿಜೆಪಿ ಸಂಘಟನೆ ಹಿಂದಿನಿಂದ ಉತ್ತಮವಾಗಿದ್ದು, ಹಲವು ಕಾರಣಗಳಿಂದ ಕಾರ್ಯಕರ್ತರು ಅನ್ಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಮತ್ತೆ ಗೆಲ್ಲಿಸುವ ನಿಟ್ಟಿನಿಂದ ಎಲ್ಲರೂ ಮರಳಿ ಪಕ್ಷ ಸೇರ್ಪಡೆಯಾಗುತ್ತಿದ್ದು, ಇವರ ಜತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತ್ಯಜಿಸಿ ಹಲವು ಮುಖಂಡರು ಪಕ್ಕ ಸೇರ್ಪಡೆಯಾಗುತ್ತಿರುವುದು ಸಂತಸದ ಬೆಳವಣಿಗೆಯಾಗಿದೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎಂ. ರಾಜೇಗೌಡ ಮಾತನಾಡಿದರು.

ಪಕ್ಷ ಸೇರ್ಪಡೆಯಾದ ಕುಮಾರನಾಯಕ, ಕುಮಾರ, ವಿಜಯ…, ಶ್ರೀನಿವಾಸ, ನರಸಿಂಹ, ಹೇಮಂತ್‌ ನಾಯಕ, ಎಚ್‌.ಎಸ್‌. ಕರಿಯಯ್ಯ, ಪುನೀತ್‌ ನಾಯಕ, ಎಚ್‌.ಆರ್‌. ಬೋರ, ರಮೇಶ್‌, ಮಹದೇವ, ಶ್ರೀನಿವಾಸ, ವಿ.ಕೆ. ಕರಿಯಯ್ಯ, ಮನೋಜ…, ಸುರೇಶ್‌, ಶಿವಯ್ಯ, ಗೋವಿಂದಯ್ಯ, ಮನುಕುಮಾರ್‌, ಮುತ್ತುರಾಜು, ಪ್ರಸನ್ನ, ಅಮಾವಾಸೆ, ಸೃಜನ್‌, ಸಣ್ಣಯ್ಯ, ಪ್ರಕಾಶ್‌, ಪ್ರದೀಪ್‌ ಅವರಿಗೆ ಪಕ್ಷದ ಶಲ್ಯ ಹಾಕಿ ಬರಮಾಡಿಕೊಳ್ಳಲಾಯಿತು.

ತಂಬಾಕು ಮಂಡಳಿ ನಿರ್ದೇಶಕ ವಿಕ್ರಮ… ರಾಜ…, ಕಂಪಲಾಪುರ ಶಕ್ತಿ ಕೇಂದ್ರ ಅಧ್ಯಕ್ಷ ಮಂಜುನಾಥ್‌, ತಾಲೂಕು ಪ್ರಧಾನ ಕಾರ್ಯದರ್ಶಿ ಚಂದ್ರು, ಮುಖಂಡರಾದ ಗಿರೀಶ್‌, ಅರವಿಂದ್‌ ಮತ್ತು ಕಾರ್ಯಕರ್ತರು ಇದ್ದರು.

ಬಿಜೆಪಿ ಸೇರಿದ್ದಕ್ಕೆ ಪಶ್ಚತಾಪ

ಮೈಸೂರು : ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಕೆಡವಿ, ಬಿಜೆಪಿ ಸೇರಿದ್ದಕ್ಕೆ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅವರು ಸೋಮವಾರ ಪಶ್ಚಾತ್ತಾಪ ಸತ್ಯಾಗ್ರಹ ನಡೆಸಿದರು. ಅವರ ಬೆಂಬಲಿಗರು ಸಾಥ್‌ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಾನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಮಾತಿಗೆ ಬೆಲೆಕೊಟ್ಟು ಜೆಡಿಎಸ್‌ ಸೇರಿದೆ. ಆದರೆ ಶಾಸಕನಾಗಿದ್ದ ನನ್ನನ್ನು ಆ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಜೆಡಿಎಸ್‌- ಕಾಂಗ್ರಸ್‌ ಮೈತ್ರಿಯಲ್ಲಿ ರಾಕ್ಷಸ ಸರ್ಕಾರ ನಡೆಯುತ್ತಿದೆ ಎಂಬುದು ಮನವರಿಕೆ ಆಯಿತು. ಅದು ಹೊಂದಾಣಿಕೆ ಇಲ್ಲದ ಮೈತ್ರಿ ಸರ್ಕಾರವಾಗಿತ್ತು. ಈ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಅನುಕೂಲ ಆಗುವುದಿಲ್ಲ ಎಂಬುದು ಖಾತರಿಯಾದಾಗ ಮತ್ತೊಂದು ಹೆಜ್ಜೆಯನ್ನು ಅನಿವಾರ್ಯವಾಗಿ ಇಡಬೇಕಾಯಿತು ಎಂದರು.

ಸಚಿವ ಸ್ಥಾನಕ್ಕೆ ನಾನು ಎಂದೂ ಆಸೆ ಪಟ್ಟವನಲ್ಲ. ಸಚಿವ ಸ್ಥಾನ ಸಿಗದ ಕಾರಣಕ್ಕೆ ನಾನು ಜೆಡಿಎಸ್‌ ಬಿಟ್ಟೆಎಂಬುದು ಸುಳ್ಳು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ಒಳಿತಾಗಬಹುದು ಎಂಬ ಕಾರಣಕ್ಕೆ ಸಮಾನ ಮನಸ್ಕರೊಡನೆ ಸೇರಿ ಚರ್ಚಿಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾಗಿ ಅವರು ಹೇಳಿದರು.

ಡಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಆಗಬಹುದು ಎಂಬ ನಿರೀಕ್ಷೆ ನಮ್ಮಲ್ಲಿತ್ತು. ಆದರೆ ಎಲ್ಲವೂ ನುಚ್ಚು ನೂರಾಯಿತು. ಇದೊಂದು ಐತಿಹಾಸಿಕ ಪರಮ ಭಷ್ಟಸರ್ಕಾರ ಎಂಬ ಟೀಕೆಗೆ ಗುರಿಯಾಯಿತು. ಇದರಿಂದ ನನಗೆ ಪಶ್ಚಾತ್ತಾಪ ಕಾಡುತ್ತಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣನಾದ ನನಗೆ ಅತೀವವಾದ ನೋವಿದೆ, ಬೇಸರವಿದೆ ಎಂದು ಅವರು ತಿಳಿಸಿದರು.

‘ಹೇ ವಿಶ್ವನಾಥ್‌, ನೀನೇಕೆ ಇಂತಹ ತಪ್ಪು ಮಾಡಿದೆ’ ಎಂದು ನನ್ನ ಅಂತರಾತ್ಮ ನನ್ನನ್ನು ತಿವಿಯುತ್ತಲೇ ಇದೆ. ಈ ಪಾಪಪ್ರಜ್ಞೆ ನನ್ನನ್ನು ಕೊನೆತನಕವೂ ಕಾಡುತ್ತಲೇ ಇರುತ್ತದೆ. ಹೀಗಾಗಿ ಈ ಪಾಪದ ಹೊರೆ ಇಳಿಸಿಕೊಳ್ಳಲೇಬೇಕಾದ ಜರೂರು ನನ್ನ ಮುಂದಿದೆ. ಇದೇ ಕಾರಣದಿಂದ ಇಂದು ಮಹಾತ್ಮ ಗಾಂಧೀಜಿ ಪುತ್ಥಳಿ ಬಳಿ ಪ್ರಾಯಶ್ಚಿತ್ತ ಸತ್ಯಾಗ್ರಹ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಡಬಲ್‌ ಇಂಜಿನ್‌ ಸರ್ಕಾರ ಇದ್ದರೆ ರಾಜ್ಯಕ್ಕೆ ಒಳಿತೆಂದು ಬಿಜೆಪಿ ಸರ್ಕಾರ ತಂದೆವು. ಆದರೆ, ಬಿಜೆಪಿ ಸರ್ಕಾರ ಪರಮ ಭ್ರಷ್ಟಸರ್ಕಾರವಾಗಿದೆ. ಇಂತಹ ಸರ್ಕಾರ ಬರಲು ನಾನು ಕಾರಣವಾಗಿದ್ದಕ್ಕೆ ನನಗೆ ಅತೀವ ನೋವಿದೆ. ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ. ಪಾಪದ ಹೊರೆ ಇಳಿಸಿ ಕೊಳ್ಳಲು ಪಶ್ಚಾತ್ತಾಪ ಸತ್ಯಾಗ್ರಹ ಮಾಡುತ್ತಿದ್ದೇನೆ. ನಾನು ಬಿಜೆಪಿಯಿಂದ ವಿಧಾನ ಪರಿಷತ್‌ ಸದಸ್ಯನಾಗಿಲ್ಲ. ಸಾಹಿತ್ಯ ಕೋಟಾದಲ್ಲಿ ಮೇಲ್ಮನೆ ಸದಸ್ಯನಾಗಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ ಬೆಂಬಲಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.