ಹೊನ್ನಾಳಿ (ಫೆ.08):  ತಾಲೂಕಿನ 20 ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಇದರಲ್ಲಿ 13 ಗ್ರಾಪಂಗಳು ಬಿಜೆಪಿ ತೆಕ್ಕೆಗೆ ಬಂದಿವೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತಾಲೂಕಿನ ಹನುಮಸಾಗರ ಗ್ರಾಮಪಂಚಾಯಿತಿಗೆ ಭೇಟಿ ನೀಡಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ತಾಲೂಕಿನ ಬೇಲಿಮಲ್ಲೂರು, ಮುಕ್ತೇನಹಳ್ಳಿ, ಲಿಂಗಾಪುರ, ಎಚ್‌.ಗೋಪಗೊಂಡನಹಳ್ಳಿ, ಕಮ್ಮಾರಗಟ್ಟೆ, ಕುಂಬಳೂರು, ಬನ್ನಿಕೊಂಡು, ಕ್ಯಾಸಿನಕೆರೆ, ಹನುಮಸಾಗರ, ಕತ್ತಿಗೆ ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ್ದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದರು.

35ರಲ್ಲಿ 33 ಕಡೆ ಬಿಜೆಪಿಗೆ ಜಯ : ಮುಂದುವರಿದ ಗೆಲುವಿನ ಪರ್ವ

ಅದೇ ರೀತಿ ಹುಣಸಘಟ್ಟ, ಕುಂದುರು, ಬೆನಕನಹಳ್ಳಿ ಗ್ರಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಈ ಮೂರು ಗ್ರಾಪಂಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ ಎಂದರು.

ಇನ್ನೂ 8 ಗ್ರಾಪಂಗಳ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಬಾಕಿ ಉಳಿದಿದ್ದು, ಅವುಗಳಲ್ಲೂ ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರ ಹಿಡಿಯಲಿದೆ ಎಂದ ಶಾಸಕರು ನೂತನವಾಗಿ ಆಯ್ಕೆಯಾಗಿರುವ ಗ್ರಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಒಟ್ಟಾಗಿ ಗ್ರಾಮಗಳ ಸರ್ವಾಂಗಿಣ ಅಭಿವೃದ್ಧಿಗೆ ಮುಂದಾಗಬೇಕು. ಅಷ್ಟೇ ಅಲ್ಲದೆ, ಐದು ವರ್ಷಗಳ ಕಾಲ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿದರು.

ಅವಳಿ ತಾಲೂಕುಗಳ ಪ್ರತಿಯೊಂದು ಹಳ್ಳಿಗಳ ಅಭಿವೃದ್ಧಿಗೂ ನಾನು ಕಠಿಬದ್ಧನಾಗಿದ್ದು, ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರೊಂದಿಗೆ ಸದಾ ನಾನಿರುತ್ತೇನೆಂದರು. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 45 ಗ್ರಾಪಂಗಳಲ್ಲಿ ಬಿಜೆಪಿ 35ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಅಧಿಕಾರ ಹಿಡಿಯಲಿದೆ. ಕಾಂಗ್ರೆಸ್‌ನವರು ಅವಳಿ ತಾಲೂಕಿನಲ್ಲಿ ಕಾಂಗ್ರೇಸ್‌ 30ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳುತ್ತಿದ್ದರು. ಇದೀಗ ಅವಳಿ ತಾಲೂಕಿನ ಜನ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಹನುಮಸಾಗರ ನೂತನ ಗ್ರಾಪಂ ಅಧ್ಯಕ್ಷೆ ಬಸಮ್ಮ ನಾಗರಾಜಪ್ಪ, ಉಪಾಧ್ಯಕ್ಷೆ ಶೃತಿ ಮಂಜುನಾಥ್‌, ಮುಖಂಡರಾದ ಹಾಲೇಶಣ್ಣ, ಮಂಜುನಾಥ್‌, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್‌, ನೆಲಹೊನ್ನೆ ಮಂಜುನಾಥ್‌, ಮತ್ತಿತರರಿದ್ದರು.