ಸಮೀಕ್ಷೆ ನಡೆಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಹಿಡಿದ ಬಿಜೆಪಿ, ಠಾಣೆ ಮುಂದೆ ಏಕಾಏಕಿ ಜಮಾಯಿಸಿದ ಬಿಜೆಪಿ-ಕಾಂಗ್ರೆಸ್‌ ಬೆಂಬಲಿಗರು, ಇಡೀ ದಿನ ಠಾಣೆ ಮುಂದೆ ಹೈಡ್ರಾಮಾ, ಪರಸ್ಪರ ಆರೋಪ

ಬೆಂಗಳೂರು(ಡಿ.04): ರಾಜಧಾನಿ ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ತಾರಕಕ್ಕೇರಿದ್ದು, ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಹೆಸರುಗಳ ಪರಿಶೀಲನೆ ಹೆಸರಿನಲ್ಲಿ ಮನೆ-ಮನೆಗೂ ಭೇಟಿ ನೀಡುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಹಿಡಿದು ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ಜತೆಗೆ, ಕಾಂಗ್ರೆಸ್‌ ವತಿಯಿಂದ ಅನಧಿಕೃತವಾಗಿ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದೆ.

ಈ ಘಟನೆಯು ಎರಡೂ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದು, ಕಾಂಗ್ರೆಸ್‌ ಅಕ್ರಮವಾಗಿ ಮತದಾರರ ಗುರುತಿನ ಚೀಟಿ ಸಂಖ್ಯೆ ಹಾಗೂ ದೂರವಾಣಿ ಸಂಖ್ಯೆ ಸಂಗ್ರಹಿಸುತ್ತಿದೆ ಎಂದು ಬಿಜೆಪಿಯವರು ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮನೆ-ಮನೆ ಪರಿಶೀಲನೆಗೆ ಹೋಗಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಬಿಜೆಪಿಯವರು ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್‌ನವರು ದೂರು ನೀಡಿದ್ದಾರೆ. ಹೀಗಾಗಿ ಶನಿವಾರ ದಿನ ಪೂರ್ತಿ ಯಶವಂತಪುರ ಪೊಲೀಸ್‌ ಠಾಣೆ ಎದುರು ಹೈಡ್ರಾಮಾ ನಡೆದಿದೆ.

ಡಿಲೀಟ್‌ ಬಿಜೆಪಿ ನಾಟ್‌ ವೋಟರ್‌ ಐಡಿ: ಕಾಂಗ್ರೆಸ್‌ನಿಂದ ಡಿಜಿಟಲ್ ಅಭಿಯಾನ

ಬೆಂಗಳೂರು ನಗರದಲ್ಲಿ ಚಿಲುಮೆ ಸಂಸ್ಥೆಯು ಮತದಾರರ ಪಟ್ಟಿಯಿಂದ 6.2 ಲಕ್ಷ ಮತದಾರರನ್ನು ಅಕ್ರಮವಾಗಿ ಕೈಬಿಟ್ಟಿದೆ ಎಂದು ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಸಂಬಂಧ ಮತದಾರರ ಪಟ್ಟಿಯಿಂದ ಅಕ್ರಮವಾಗಿ ತೆಗೆದು ಹಾಕಿರುವ ಮತಗಳ ಪರಿಶೀಲನೆ ಹಾಗೂ ಮತದಾರರ ಪಟ್ಟಿಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸಲು ಕಾಂಗ್ರೆಸ್‌ ಕಾರ್ಯಕರ್ತರು ಮುಂದಾಗಿದ್ದರು.

ಇದರ ಭಾಗವಾಗಿ ಶನಿವಾರ ಬೆಳಗ್ಗೆ ಶ್ಯಾಮ್‌ ಹಾಗೂ ರಘು ಎಂಬ ಯುವಕರು ಯಶವಂತಪುರದ ಬಿ.ಕೆ.ನಗರ 8ನೇ ಕ್ರಾಸ್‌ನಲ್ಲಿ ಮನೆ-ಮನೆಗೂ ತೆರಳಿ ಶ್ಯಾಮ್‌ ಹಾಗೂ ರಘು ಮಾಹಿತಿ ಕಲೆ ಹಾಕುತ್ತಿದ್ದರು. ಈ ವೇಳೆ ಸಂಸದ ಡಿ.ಕೆ.ಸುರೇಶ್‌ ಹಾಗೂ ಆರ್‌.ಆರ್‌.ನಗರ ಪರಾಜಿತ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರ ಫೋಟೋ ಹೊಂದಿರುವ ಮತದಾರರ ಪಟ್ಟಿ ಇಟ್ಟುಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವುದನ್ನು ವಿರೋಧಿಸಿದ ಸ್ಥಳೀಯರು ಇಬ್ಬರೂ ಕಾರ್ಯಕರ್ತರನ್ನು ಹಿಡಿದು ಪಾಲಿಕೆ ಮಾಜಿ ಸದಸ್ಯ ವೆಂಕಟೇಶ್‌ ನೆರವಿನಿಂದ ಯಶವಂತಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರ ಬೆನ್ನಲ್ಲೇ ಕುಸುಮಾ ಹನುಮಂತರಾಯಪ್ಪ ಸೇರಿದಂತೆ ಕಾಂಗ್ರೆಸ್‌ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರಿಂದ ಇಡೀ ದಿನ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಕಾಂಗ್ರೆಸ್ಸಿಂದ ಮತದಾರರ ಪಟ್ಟಿ ಹಗರಣ: ಬಿಜೆಪಿ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ವೆಂಕಟೇಶ್‌, ‘ಇದುವರೆಗೆ ನಮಗೇ ದೊರಕದ, ಆರ್‌ಒ, ಎಆರ್‌ಒಗಳ ಬಳಿ ಇಲ್ಲದ ಮತದಾರರ ಪಟ್ಟಿಕಾಂಗ್ರೆಸ್‌ ಯುವಕರ ಬಳಿ ಇತ್ತು. ಚಾಣುಕ್ಯ ಎಂದು ಹೊಸ ನಾಮಕರಣ ಮಾಡಿರುವ ವಾರ್ಡ್‌ನ 1,187 ಮತದಾರರ ಗುರುತಿನ ಪಟ್ಟಿಅವರ ಬಳಿ ಪತ್ತೆಯಾಗಿದೆ. ಅಕ್ರಮವಾಗಿ ಯಾವುದೇ ಅನುಮತಿ ಇಲ್ಲದೆ ಮತದಾರರ ಮಾಹಿತಿ ಸಂಗ್ರಹಿಸುವ ಮೂಲಕ ಅಕ್ರಮಕ್ಕೆ ಮುಂದಾಗಿದ್ದಾರೆ. ಹೀಗಾಗಿ ದೂರು ದಾಖಲಿಸಿದ್ದೇವೆ’ ಎಂದು ಹೇಳಿದರು.

ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದ್ದ ಸಂಸದ

ಬಿಜೆಪಿಯ ಆರೋಪದ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷವು ಸಂಸದ ಡಿ.ಕೆ.ಸುರೇಶ್‌ ಅವರು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ತಮ್ಮ ಕಾರ್ಯಕರ್ತರು ಮನೆ-ಮನೆಗೆ ಹೋಗಿ ಮಾಹಿತಿ ಕಲೆ ಹಾಕುವ ಕುರಿತು ಬರೆದಿದ್ದ ಪತ್ರವನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ.

ನ.25ರಂದೇ ಸಂಸದ ಡಿ.ಕೆ.ಸುರೇಶ್‌ ಅವರು ಪಶ್ಚಿಮ ವಿಭಾಗದ, ಉತ್ತರ, ದಕ್ಷಿಣ ಹಾಗೂ ದಕ್ಷಿಣ-ಪೂರ್ವ ವಿಭಾಗದ ಡಿಜಿಪಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಪೊಲೀಸ್‌ ಅಧಿಕಾರಿಗಳಿಗೆ ಪತ್ರ ಬರೆದು ‘ಪಕ್ಷದ ವತಿಯಿಂದ ಮನೆ-ಮನೆಗೆ ತೆರಳಿ ಮಾಹಿತಿಯನ್ನು ನೀಡುತ್ತಿದ್ದಾರೆ. ಈ ವಿಚಾರವನ್ನು ನಿಮ್ಮ ಗಮನಕ್ಕೆ ಪತ್ರದ ಮೂಲಕ ತರುತ್ತಿದ್ದೇನೆ’ ಎಂದು ಪತ್ರ ಬರೆದಿದ್ದರು. ಹೀಗಾಗಿ ಬಿಜೆಪಿಯ ಆರೋಪ ಸುಳ್ಳು ಎಂದು ಕಾಂಗ್ರೆಸ್‌ ತಳ್ಳಿ ಹಾಕಿದೆ.

ಬಿಜೆಪಿ ಗೂಂಡಾಗಳಿಂದ ಹಲ್ಲೆ: ಕುಸುಮಾ

ಈ ಬಗ್ಗೆ ಮಾತನಾಡಿದ ಕುಸುಮಾ ಹನುಮಂತರಾಯಪ್ಪ, ‘ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಒಂದು ಲಕ್ಷ ಮತ ಸೇರ್ಪಡೆಯಾಗಿದೆ. 40 ಸಾವಿರ ಡಿಲೀಟ್‌ ಆಗಿದೆ. ಯಾರಾರ‍ಯರ ಹೆಸರು ಡಿಲೀಟ್‌ ಆಗಿದೆ ಎಂದು ಮನೆ-ಮನೆಗೆ ಹೋಗಿ ಪರಿಶೀಲನೆ ಮಾಡುತ್ತಾ ಇದ್ವಿ. ಹೇಗೆ ಒಂದು ಲಕ್ಷ ಜನ ಹೊರಗಡೆಯಿಂದ ಬಂದರು? ಹೀಗಾಗಿ ಪರಿಶೀಲನೆ ನಡೆಸಲು ಹೋದಾಗ ನಮ್ಮ ಕಾರ್ಯಕರ್ತರ ಮೇಲೆ ಬಿಜೆಪಿ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ಹೇಳಿದರು.

ಬಾಗಲಕೋಟೆ ಜಿಲ್ಲೆಯಲ್ಲಿ 64,000 ಮತದಾರರ ಕೈಬಿಡಲಾಗಿದೆ: ಕಾಂಗ್ರೆಸ್‌

ದೂರು ಪ್ರತಿ ದೂರು ದಾಖಲು

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹ ಸಂಬಂಧ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ಹಾಗೂ ಪ್ರತಿ ದೂರು ದಾಖಲಾಗಿದೆ. ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಮತ್ತು ಕಾಂಗ್ರೆಸ್‌ ಮುಖಂಡರಾದ ಕುಸಮಾ ಅವರ ಭಾವಚಿತ್ರವಿರುವ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರರ ಕುಟುಂಬ ಸದಸ್ಯರ ಮಾಹಿತಿ ಪುಸ್ತಕ ಹಿಡಿದು ಶ್ಯಾಮ್‌ ಮತ್ತು ರಘು ಎಂಬುವವರು ಮತದಾರರ ವೈಯಕ್ತಿಕ ವಿವರ ಸಂಗ್ರಹಿಸುತ್ತಿದ್ದರು ಎಂದು ಯಶವಂತಪುರ ಠಾಣೆ ಪೊಲೀಸಿರಗೆ ಗುಲಾಬು ಎಂಬ ಮಹಿಳೆ ದೂರು ನೀಡಿದ್ದಾರೆ.

ಈ ದೂರು ಆಧರಿಸಿ ಶ್ಯಾಮ್‌ ಮತ್ತು ರಘುನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಮತದಾರರ ಪಟ್ಟಿಯಿಂದ ಹಲವರ ಹೆಸರು ಡಿಲೀಟ್‌ ಆಗಿರುವುದರಿಂದ ಆ ಬಗ್ಗೆ ಪರಿಶೀಲಿಸಲು ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಸಂಗ್ರಹಿಸಿದ್ದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ. ಮಾಹಿತಿ ಸಂಗ್ರಹದ ವೇಳೆ ಕೆಲವರು ನಮ್ಮೊಂದಿಗೆ ಗಲಾಟೆ ಮಾಡಿದ್ದಾರೆ ಎಂದು ರಘು ಎಂಬಾತ ಪ್ರತಿ ದೂರು ನೀಡಿದ್ದಾರೆ. ಈ ಎರಡೂ ದೂರುಗಳ ಕುರಿತು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.