ಮತದಾರರ ಪಟ್ಟಿಯಿಂದ ಅಕ್ರಮವಾಗಿ ಮತದಾರರ ಹೆಸರು ತೆಗೆದುಹಾಕಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಪಕ್ಷ, ‘ಡಿಲೀಟ್‌ ಬಿಜೆಪಿ, ನಾಟ್‌ ವೋಟರ್‌ ಐಡಿ’ (ಬಿಜೆಪಿಯನ್ನು ಅಳಿಸಿಹಾಕಿ, ಮತದಾರರ ಗುರುತನ್ನಲ್ಲ) ಹ್ಯಾಶ್‌ಟ್ಯಾಗ್‌ ಹೆಸರಿನಲ್ಲಿ ಡಿಜಿಟಲ್‌ ಅಭಿಯಾನ ರೂಪಿಸಿದೆ. 

ಬೆಂಗಳೂರು (ಡಿ.03): ಮತದಾರರ ಪಟ್ಟಿಯಿಂದ ಅಕ್ರಮವಾಗಿ ಮತದಾರರ ಹೆಸರು ತೆಗೆದು ಹಾಕಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಪಕ್ಷ, ‘ಡಿಲೀಟ್‌ ಬಿಜೆಪಿ, ನಾಟ್‌ ವೋಟರ್‌ ಐಡಿ’ (ಬಿಜೆಪಿಯನ್ನು ಅಳಿಸಿಹಾಕಿ, ಮತದಾರರ ಗುರುತನ್ನಲ್ಲ) ಹ್ಯಾಶ್‌ಟ್ಯಾಗ್‌ ಹೆಸರಿನಲ್ಲಿ ಡಿಜಿಟಲ್‌ ಅಭಿಯಾನ ರೂಪಿಸಿದೆ. ಬೆಂಗಳೂರು ನಗರ ಒಂದರಲ್ಲೇ 6.6 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗವೇ ಮಧ್ಯಪ್ರವೇಶ ಮಾಡಿ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಅಮಾನತು ಮಾಡಿದೆ. 

ಹೀಗಾಗಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟವಾಗಿದ್ದು, ಮತದಾರರಿಗೆ ಜಾಗೃತಿ ಮೂಡಿಸಲು ಅಭಿಯಾನ ರೂಪಿಸಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ‘ಬಿಜೆಪಿ ಸರ್ಕಾರವು ಬೆಂಗಳೂರಿನಲ್ಲಿ 6.6 ಲಕ್ಷ ಮತದಾರರ ಹೆಸರು ಅಳಿಸಿ ಹಾಕಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರೂ ಡಿಲೀಟ್‌ ಆಗಿದ್ದರೆ, ಬದಲಾಗಿದ್ದರೆ ಅಥವಾ ಯಾವುದೇ ತಪ್ಪುಗಳಾಗಿದ್ದರೂ ಕೂಡಲೇ ಕೇಂದ್ರ ಚುನಾವಣಾ ಆಯೋಗದ ವೆಬ್‌ಸೈಟ್‌ ಮೂಲಕ ಆಕ್ಷೇಪಣೆ ಸಲ್ಲಿಸಿ’ ಎಂದು ಕರೆ ನೀಡಿದೆ.

Tumakuru: ದೇಶಕ್ಕೆ ಕಾಂಗ್ರೆಸ್‌ ಪಕ್ಷ ಸಾಕಷ್ಟು ಕೊಡಿಗೆ ನೀಡಿದೆ: ಡಾ.ಜಿ.ಪರಮೇಶ್ವರ್‌

10 ಲಕ್ಷ ಜನರಿಗೆ ಸಂದೇಶ: ಈ ಬಗ್ಗೆ ವಾಟ್ಸಾಪ್‌ ಮೂಲಕ ಬೆಂಗಳೂರಿನ 10 ಲಕ್ಷಕ್ಕೂ ಹೆಚ್ಚು ಮಂದಿಗೆ ‘ಕೇಂದ್ರ ಚುನಾವಣಾ ಆಯೋಗದ https://electoralsearch.in/ ವೆಬ್‌ಸೈಟ್‌ ಮೂಲಕ ನಿಮ್ಮ ವಿವರಗಳನ್ನು ಹುಡುಕಿ. ನಿಮ್ಮ ಹೆಸರು ತಪ್ಪಿ ಹೋಗಿದ್ದರೆ ಕೂಡಲೇ ಸೇರಿಸಿಕೊಳ್ಳಿ’ ಎಂದು ಸಂದೇಶ ಕಳುಹಿಸುವ ಮೂಲಕ ಜಾಗೃತಿ ಮೂಡಿಸಲು ಪಕ್ಷ ಸಜ್ಜಾಗಿದೆ.

ವಾಟ್ಸಾಪ್‌ ಸಂದೇಶದಲ್ಲೇನಿದೆ?: ಕಾಂಗ್ರೆಸ್‌ ಪಕ್ಷದ ವತಿಯಿಂದ ಮತದಾರರಿಗೆ ಕಳುಹಿಸುವ ವಾಟ್ಸಾಪ್‌ ಸಂದೇಶದಲ್ಲಿ ಏನಿರಲಿದೆ ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆಯ ವಿಡಿಯೋವನ್ನೂ ಕಾಂಗ್ರೆಸ್‌ ಪ್ರಕಟಿಸಿದೆ. ವಾಟ್ಸಾಪ್‌ ಸಂದೇಶದಲ್ಲಿ ಮತದಾರರ ಪಟ್ಟಿಯಲ್ಲಿನ ಪೂಜಾರಾವ್‌ ಎಂಬುವವರ ಹೆಸರನ್ನು ಉದಾಹರಣೆಯಾಗಿ ತೆಗೆದುಕೊಂಡು ಅವರ ಹೆಸರು, ತಂದೆಯ ಹೆಸರು, ಮನೆಯ ಸಂಖ್ಯೆ ಹಾಗೂ ಚುನಾವಣಾ ಗುರುತಿನ ಸಂಖ್ಯೆಯನ್ನು ನಮೂದು ಮಾಡಲಾಗಿದೆ. ಆದರೆ, ಫೋಟೋ ಪ್ರಕಟಿಸಿಲ್ಲ. ಆ ಫೋಟೋ ಸೆಂಡ್‌ ಮಾಡಿ, ‘ಈ ಮತದಾರರ ವಿವರಗಳಲ್ಲಿ ಫೋಟೋ ಡಿಲೀಟ್‌ ಆದಂತೆ ನಿಮ್ಮ ಹೆಸರೂ ಡಿಲೀಟ್‌ ಆಗಿರಬಹುದು. 

Ticket Fight: ಜೆಡಿಎಸ್‌-ಕೈ ನೆಲದಲ್ಲಿ ಮೊದಲ ಬಾರಿ ತ್ರಿಕೋನ ಕದನ?

ಬಿಜೆಪಿ ಸರ್ಕಾರ ಬೆಂಗಳೂರು ಒಂದರಲ್ಲೇ 6.6 ಲಕ್ಷ ಮಂದಿ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್‌ ಮಾಡಿದೆ. ಹೀಗಾಗಿ ನಿಮ್ಮ ಹೆಸರು ತಪ್ಪಿ ಹೋಗಿದ್ದರೆ https://electoralsearch.in/ ಮೂಲಕ ಪರಿಶೀಲಿಸಿ. ಈ ಸಂದೇಶ ಜನ ಹಿತಕ್ಕಾಗಿ ಕಾಂಗ್ರೆಸ್‌ನಿಂದ ನೀಡಲಾಗುತ್ತಿದೆ’ ಎಂಬ ಸಂದೇಶ ಕಳುಹಿಸಲಾಗುತ್ತದೆ. ಇದಕ್ಕೆ ಮತದಾರರು, ‘ಈ ಬಗ್ಗೆ ನನಗೆ ಅಚ್ಚರಿ ಇಲ್ಲ. ಬಿಜೆಪಿ ಯಾವುದೇ ನೀಚ ಮಟ್ಟಕ್ಕೆ ಇಳಿಯಲೂ ಸಿದ್ಧ. ಈಗಲೇ ನನ್ನ ವಿವರಗಳನ್ನು ಪರಿಶೀಲಿಸುತ್ತೇನೆ’ ಎಂದು ಉತ್ತರ ನೀಡುವುದರೊಂದಿಗೆ ವಾಟ್ಸಾಪ್‌ ವಿಡಿಯೋ ಸಂದೇಶ ಕೊನೆಗೊಳ್ಳುತ್ತದೆ.