ಧಾರವಾಡ(ನ.16): ದೀಪಾವಳಿ ಹಬ್ಬದ ಪ್ರಯುಕ್ತ ಇಸ್ಪೀಟ್‌ ಜೂಜಾಟ ನಡೆಯುತ್ತಿದ್ದ 2 ದೊಡ್ಡ ಹೋಟೆಲ್‌ಗಳ ಮೇಲೆ ದಾಳಿ ಮಾಡಿರುವ ಪೊಲೀಸರು ಅಪಾರ ಪ್ರಮಾಣದ ಮೊತ್ತ ವಶಪಡಿಸಿಕೊಂಡು, ಕೆಲ ಸ್ಥಳೀಯ ಬಿಜೆಪಿ, ಕಾಂಗ್ರೆಸ್‌ ಮುಖಂಡರನ್ನು ವಶಕ್ಕೆ ಪಡೆದಿರುವ ಘಟನೆ ಭಾನುವಾರ ನಸುಕಿನಲ್ಲಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ಕೈಗೊಂಡ ಪೊಲೀಸರು ಅಂದಾಜು 100ಕ್ಕೂ ಮಂದಿಯನ್ನು ಬಂಧಿಸಿ, 55 ಲಕ್ಷಕ್ಕೂ ಹೆಚ್ಚಿನ ಮೊತ್ತದ ಹಣ ವಶಪಡಿಸಿಕೊಂಡಿದ್ದಾರೆ. ಮುಂಜಾನೆ 3.30ರ ಸಮಯದಲ್ಲಿ ಎಸ್ಪಿ ಕೃಷ್ಣಕಾಂತ ನೇತೃತ್ವದ ತಂಡ ಬೈಪಾಸ್‌ ರಸ್ತೆಯ ರಮ್ಯ ರೆಸಿಡೆನ್ಸಿ ಹಾಗೂ ಹುಬ್ಬಳ್ಳಿಯ ಪ್ರೀತಿ ಲಾಡ್ಜ್‌ ಮೇಲೆ ದಾಳಿ ನಡೆಸಿದೆ.

ಧಾರವಾಡದಲ್ಲಿ ಪೊಲೀಸರಿಂದಲೇ ಜೂಜಾಟ..!

ಮುಂಜಾನೆಯೇ ದಾಳಿ ನಡೆದಿದ್ದರೂ ದಾಳಿಯಲ್ಲಿ ಸಿಕ್ಕವರೆಲ್ಲ ವಿಐಪಿಗಳು ಎನ್ನುವ ಕಾರಣ ಮಾಧ್ಯಮಗಳ ದಾರಿ ತಪ್ಪಿಸಲಾಗಿದೆ. ವಶಕ್ಕೆ ಪಡೆದವರನ್ನು ಪೊಲೀಸ್‌ ಹೆಡ್‌ ಕ್ವಾರ್ಟರ್ಸ್‌ ಬಳಿ ಇರುವ ದುರ್ಗಾದೇವಿ ಗುಡಿ ಆವರಣದಲ್ಲಿ ಕೆಲಹೊತ್ತು ಇಡಲಾಗಿದೆ. ಸ್ಥಳೀಯ ಪೊಲೀಸ್‌ ಇಲಾಖೆ ಅಧಿಕಾರಿಗಳ ಮೇಲೆ ತೀವ್ರ ಒತ್ತಡದ ಕಾರಣ ತನಿಖೆಗೆ ಸ್ವತಃ ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ್‌ ಆಗಮಿಸಿದ್ದು ಮತ್ತಷ್ಟು ಅನುಮಾನ ಮೂಡಿಸಿದೆ.

ಇದೊಂದು ಸಿಂಪಲ್‌ ಕೇಸು ಎಂದಿರುವ ಐಜಿಪಿ ಸುಹಾಸ್‌ ಅವರು ಸಂಜೆಯ ವರೆಗೂ ಮಾಧ್ಯಮಗಳಿಗೆ ಮಾಹಿತಿ ನೀಡಲು ಹಿಂದೇಟು ಹಾಕಿದರು. ಎಸ್ಪಿ ಕೃಷ್ಣಕಾಂತ ಅವರು ಮಾಧ್ಯಮ ಪ್ರತಿನಿಧಿಗಳ ದೂರವಾಣಿ ಕರೆಯನ್ನೇ ಸ್ವೀಕರಿಸಿಲ್ಲ. ದಾಳಿ ವೇಳೆ ಕೋಟ್ಯಂತರ ರುಪಾಯಿ ಹಣ ಸಿಕ್ಕಿದ್ದು ಬರೀ ಲಕ್ಷಾಂತರ ಹಣ ಎಂದು ತೋರಿಸಲಾಗಿದೆ ಎನ್ನಲಾಗುತ್ತಿದೆ. ಇಂತಿಂಥವರು ಸಿಕ್ಕಿಬಿದ್ದಾರಂತೆ ಎಂಬ ಸುದ್ದಿ ಹಬ್ಬಿದೆಯಲ್ಲಾ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಲು ನಿರಾಕರಿಸಿರುವ ಐಜಿಪಿ ರಾಘವೇಂದ್ರ ಸುಹಾಸ್‌, ಹೇಳುವವರು ಸಾವಿರ ಹೇಳ್ತಾರೆ. ಯಾರಾರ‍ಯರು ಸಿಕ್ಕಿಬಿದ್ದಿದ್ದಾರೆ ಎಂಬುದು ಚಾರ್ಜ್‌ಶೀಟ್‌ನಲ್ಲಿ ಗೊತ್ತಾಗಲಿದೆ ಎಂದಷ್ಟೇ ತಿಳಿಸಿದ್ದಾರೆ.