ಹಳಿಯಾಳದಲ್ಲಿ ಬಿಜೆಪಿ ಕಾಂಗ್ರೆಸ್ ಗುದ್ದಾಟ: ಮಸೀದಿ- ಗ್ರಾಮದೇವಿ ಟ್ರಸ್ಟ್ ಜಾಗದ ನೆಪ
ಹಳಿಯಾಳದಲ್ಲಿ ಗ್ರಾಮ ದೇವಿಗೆ ಸಂಬಂಧಿಸಿದ ಜಾಗವನ್ನು ಪುರಸಭೆ ಒತ್ತುವರಿ ನಡೆಸಿ ಕಾಮಗಾರಿ ನಡೆಸುತ್ತಿರುವ ವಿರುದ್ಧ ಈ ಪ್ರತಿಭಟನೆ ನಡೆದಿಸಲಾಗುತ್ತಿದೆ. ಈ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುಗೆ ಗುದ್ದಾಟಕ್ಕೆ ಕಾರಣವಾಗಿದೆ.
ವರದಿ- ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್
ಉತ್ತರ ಕನ್ನಡ (ಫೆ.14): ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಮೊನ್ನೆಯಷ್ಟೇ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಹಿಂದೂ ಕಾರ್ಯಕರ್ತರ ಸಹಯೋಗದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಗ್ರಾಮ ದೇವಿಗೆ ಸಂಬಂಧಿಸಿದ ಜಾಗವನ್ನು ಪುರಸಭೆ ಒತ್ತುವರಿ ನಡೆಸಿ ಕಾಮಗಾರಿ ನಡೆಸುತ್ತಿರುವ ವಿರುದ್ಧ ಈ ಪ್ರತಿಭಟನೆ ನಡೆದಿಸಲಾಗುತ್ತಿದೆ. ಯಾವುದೇ ಕ್ಷಣದಲ್ಲೂ ಲಾಠಿ ಚಾರ್ಜ್ ನಡೆಯಬಹುದು ಅನ್ನೋವಷ್ಟರ ಮಟ್ಟಿಗೆ ಇದು ತೀವ್ರಗೊಂಡಿತ್ತು. ಆದರೆ, ಇದೀಗ ಈ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುಗೆ ಗುದ್ದಾಟಕ್ಕೆ ಕಾರಣವಾಗಿದ್ದು, ಆರೋಪ- ಪ್ರತ್ಯಾರೋಪ ಮಾಡಲಾರಂಭಿಸಿದ್ದಾರೆ.
ಹಳಿಯಾಳ ಪಟ್ಟಣದ ಮರಡಿಗುಡ್ಡ ಪ್ರದೇಶದಲ್ಲಿ ಜನರು ಆರಾಧಿಸುವ ಗ್ರಾಮ ದೇವಿಗೆ ಸಂಬಂಧಿಸಿದ ಬನ್ನಿ ಮಂಟಪವಿದೆ. ಪ್ರತೀ ವರ್ಷ ದಸರಾ ಸಂದರ್ಭ ಇಲ್ಲಿ ಬನ್ನಿ ಮುರಿಯುವ ಮೂಲಕ ಧಾರ್ಮಿಕ ಆಚರಣೆ ನಡೆಸಲಾಗುತ್ತದೆ. ಮಸೀದಿ ಮುಂಭಾಗದಲ್ಲೇ ಇರುವ ಈ ಸ್ಥಳದಲ್ಲಿ ಪುರಸಭೆಯಿಂದ ಅಕ್ರಮ ಒತ್ತುವರಿ ಮಾಡಿ ಬ್ಲಾಕ್‌ಗಳನ್ನು ಅಳವಡಿಸಲಾಗಿತ್ತು. ಅಲ್ಲದೇ, ಹಳಿಯಾಳದ ವನಶ್ರೀ ವೃತ್ತದ ಬಳಿಯಿರುವ ಗ್ರಾಮ ದೇವಿ ಮೈದಾನದಲ್ಲಿ ಜಾತ್ರೆ ಹಾಗೂ ಹಲವಾರು ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿತ್ತು.
ಉತ್ತರ ಕನ್ನಡ: ನಾಯಿಯೊಂದಿಗೆ ಆಟವಾಡುತ್ತಾ ಬಾವಿಗೆ ಬಿದ್ದ ಬಾಲಕ ಸಾವು
ಈ ಭಾಗದಲ್ಲಿ ಹಸಿರು ಹುಲ್ಲುಗಾವಲು ಬೆಳೆಸಲು ಪೈಪ್‌ಲೈನ್ ಕಾಮಗಾರಿಯನ್ನು ಪುರಸಭೆ ನಡೆಸಿತ್ತು. ಇದಕ್ಕಾಗಿ ಹಳಿಯಾಳ ಪುರಸಭೆ ಸುಮಾರು 30ಲಕ್ಷ ರೂ. ವೆಚ್ಚ ಮಾಡುವ ಯೋಜನೆ ಹಾಕಿತ್ತು. ಪುರಸಭೆಯು ಗ್ರಾಮದೇವಿ ಟ್ರಸ್ಟ್ ಗಮನಕ್ಕೆ ತರದೆ ಇದನ್ನು ಮಾಡುತ್ತಿದ್ದ ಕಾರಣ ಕಳೆದ 15 ದಿನಗಳಿಂದ ಯಾವುದೇ ಕಾಮಗಾರಿ ನಡೆಸಬಾರದು ಎಂದು ಟ್ರಸ್ಟ್‌ನವರು ಹಾಗೂ ಭಕ್ತಾಧಿಗಳು ಆಗ್ರಹ ಮಾಡ್ತಿದ್ರು. ಆದ್ರೂ ಕಾಮಗಾರಿ ನಡೆಸಲಾಗ್ತಿದ್ದದ್ದಿಂದ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ದೇವಸ್ಥಾನ ಟ್ರಸ್ಟ್‌ನ ಮಂಗೇಶ್ ದೇಶ್‌ಪಾಂಡೆ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು, ಪುರಸಭೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರು ಬಳಿಕ ಈದ್ಗಾ ಮೈದಾನಕ್ಕೆ ನುಗ್ಗಿದ್ದರು.
ಮೈದಾನದ ಬಳಿ ಪುರಸಭೆಯಿಂದ ನೆಲಕ್ಕೆ ಅಳವಡಿಸಿದ್ದ ಸಿಮೆಂಟ್ ಬ್ಲಾಕ್ ಕಿತ್ತು ಬಿಸಾಕಿದ್ದರು. ಇದೇ ಬ್ಲಾಕ್‌ಗಳನ್ನು ಇಟ್ಟು ಕೊನೆಗೆ ಭಗವಾಧ್ವಜ ಹಾರಿಸಿದ ಪ್ರತಿಭಟನಾಕಾರರು ಆರ್‌ಎಸ್‌ಎಸ್ ಗೀತೆಯನ್ನು ಹಾಡಿ ಗೌರವ ಸಲ್ಲಿಸಿದ್ದರು. ನಂತರ ಒತ್ತುವಾರಿಯಾದ ಜಾಗ ಹಾಗೂ ಪಕ್ಕದಲ್ಲಿ ಕಟ್ಟಲಾದ ಶೌಚಾಲಯ ಕ್ಲಿಯರ್ ಮಾಡಬೇಕೆಂದು ಪುರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಪುರಸಭೆ ಅಧಿಕಾರಿಗಳು ಅವರ ಬೇಡಿಕೆಗಳನ್ನು ಈಡೇರಿಸುವ ಭರವಸೆ ಕೂಡಾ ನೀಡಿದ್ದಾರೆ. ಇಷ್ಟೆಲ್ಲಾ ಘಟನೆ ನಡೆಯಲು ಹಾಗೂ ಜನರ ಧಾರ್ಮಿಕ ನಂಬಿಕೆಗೆ ಏಟು ನೀಡಲು ಯತ್ನಿಸುವ ಮೂಲಕ ಹಳಿಯಾಳದ ಶಾಂತಿಗೆಡೆಲು ಕಾರಣವಾಗಿರುವುದು ಪುರಸಭೆ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಎಂದು ಬಿಜೆಪಿ ನಾಯಕರು ದೂರಿದ್ದಾರೆ.
ಇನ್ನು ಘಟನೆ ಸಂಬಂಧಿಸಿ ಕಾಂಗ್ರೆಸ್ ನಾಯಕರು ಮಾತ್ರ ಇದು ಬಿಜೆಪಿಯಿಂದ ನಡೆಯುತ್ತಿರುವ ಶಾಂತಿ ಕದಡಿಸುವ ತಂತ್ರ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಯಿಸಿದ ಶಾಸಕ ಆರ್.ವಿ.ದೇಶ್‌ಪಾಂಡೆ, ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮರಡಿಗುಡ್ಡದ ಮೇಲೆ ಫೇವರ್ಸ್ ಹಾಕಿರುವ ವಿಚಾರ ದೊಡ್ಡ ವಿಷಯವಲ್ಲ. ಜನರನ್ನು ಕರೆಯಿಸಿ ಚರ್ಚೆ ಮಾಡಿ ಅವರ ಜಾಗವನ್ನು ಬಿಟ್ಟುಕೊಡಲು ಸಂಬಂಧಪಟ್ಟವರಿಗೆ ಹೇಳಿದ್ದೆ. ಆದರೆ, ಪ್ರತಿಭಟನಾಕಾರರು ಮಾತ್ರ ಕಾನೂನು ಕೈಗೆ ತೆಗೆದುಕೊಂಡು ಏಕಾಏಕಿ ಫೇವರ್ಸ್ ತೆಗೆದು ಹಾಕಿದ್ರು. ಪೊಲೀಸರು, ತಹಶೀಲ್ದಾರ್ ಇದ್ರುನೂ ಎಲ್ಲಾ ಮೂಖ ಪ್ರೇಕ್ಷಕರಾಗಿದ್ದರು.
ಪ್ಯಾರ್ ಮೊಹಬ್ಬತ್ ದೋಖಾ.: ಉತ್ತರ ಕನ್ನಡ ಜೆಡಿಎಸ್ ಅಧ್ಯಕ್ಷನ ವಿರುದ್ಧ ದೂರು
ಸೌಹಾರ್ದ ವಾತಾವರಣ ಕೆಡಿಸುವ ಕೆಲಸ: ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದಿಂದ ಈ ಆದೇಶ ಬಂದಿದೆಯೇ ಎಂಬುದು ಗೊತ್ತಿಲ್ಲ. ಆದರೆ, ಪ್ರತಿಭಟನಾಕಾರರು ಮಾಡಿದ್ದು ಸರಿಯಲ್ಲ. ಚರ್ಚೆ ಮುಖಾಂತರ ನಡೆಯುವ ಕೆಲಸವನ್ನು ಕಾನೂನು ಕೈಗೆತ್ತಿಕೊಂಡು ಮಾಡಿದ್ದರು. ಫೇವರ್ಸ್ ಹಾಕುವ ಕೆಲಸಕ್ಕೆ ಅಡಿಗಲ್ಲು ಹಾಕಿದ್ದು ಬಿಜೆಪಿ ಸದಸ್ಯ. ಚುನಾವಣೆ ಬರುತ್ತಿರುವ ಹಿನ್ನೆಲೆ ಅನಾವಶ್ಯಕವಾಗಿ ಸುದ್ದಿಗಳನ್ನು ಹಬ್ಬಿ ಹಳಿಯಾಳದಲ್ಲಿ ಸೌಹಾರ್ದ ವಾತಾವರಣ ಕೆಡಿಸುವ ಕೆಲಸಗಳಾಗುತ್ತಿವೆ. ಹಳಿಯಾಳದ ವಾತಾವರಣ ಕೆಡಿಸುವ ಪ್ರಯತ್ನಗಳಾಗುತ್ತಿದ್ದು, ಜನರು ಒಪ್ಪಿಕೊಳ್ಳಲ್ಲ. ಸರ್ಕಾರ ತಕ್ಷಣ ಇದರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸಗಳಾಗಬೇಕಿತ್ತು. ಆದರೆ, ಇಲ್ಲಿಯವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ನಿದ್ರೆ ಮಾಡ್ತಿದ್ದಾರಾ..? ಬಿಜೆಪಿಯವರು ಹತಾಶೆಯಾಗಿರುವುದರಿಂದ ಇಂತಹ ತಂತ್ರಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರ್.ವಿ.ದೇಶ್‌ಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.