ಬೆಂಗಳೂರು [ಜ.30]:  ಬಿಬಿಎಂಪಿ ಕೌನ್ಸಿಲ್‌ನಲ್ಲಿ ಜಕ್ಕೂರು ವಾರ್ಡ್‌ನ ಬೆಳ್ಳಳ್ಳಿ ವೃತ್ತಕ್ಕೆ ‘ಟಿಪ್ಪು ಸುಲ್ತಾನ್‌’ ಹೆಸರು ನಾಮಕರಣ ಮಾಡುವ ಬಗ್ಗೆ ಕೈಗೊಳ್ಳಲಾಗಿದ್ದ ನಿರ್ಧಾರವನ್ನು ಏಕಾಏಕಿ ರದ್ದು ಮಾಡಿದ ಆಡಳಿತಾ ರೂಢ ಬಿಜೆಪಿಯ ನಿರ್ಧಾರದ ವಿರುದ್ಧ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ಪಾಲಿಕೆ ಸಭೆಯಲ್ಲಿ ಜರುಗಿತು.

ಪಾಲಿಕೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಆಡಳಿತಾವಧಿ ವೇಳೆ ಜಕ್ಕೂರು ವಾರ್ಡ್‌ನ ಬೆಳ್ಳಳ್ಳಿ ವೃತ್ತಕ್ಕೆ ಟಿಪ್ಪು ಸುಲ್ತಾನ್‌ ವೃತ್ತ ಎಂದು ನಾಮಕರಣ ಮಾಡುವ ನಿರ್ಣಯವನ್ನು ಪಾಲಿಕೆ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಅದನ್ನು ಮಂಗಳವಾರ ನಡೆದ ವಿಷಯಾಧಾರಿತ ಸಭೆಯಲ್ಲಿ ರದ್ದು ಪಡಿಸಲು ಅಥವಾ ವಿಷಯ ಕೈ ಬಿಡುವ ಕ್ರಮ ಕೈಗೊಳ್ಳುವುದಕ್ಕೆ ಆಯುಕ್ತರಿಗೆ ಸೂಚನೆ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್‌ ಸದಸ್ಯರು ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತಾರೂಢ ಬಿಜೆಪಿಯ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಶಂಕರ ಮಠ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಎಂ.ಶಿವರಾಜು, ಈ ಹಿಂದೆ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಬೆಳ್ಳಳ್ಳಿ ವೃತ್ತಕ್ಕೆ ಟಿಪ್ಪು ಸುಲ್ತಾನ್‌ ಹೆಸರನ್ನು ಇಡಲಾಗಿತ್ತು. ಈಗ ಏಕಪಕ್ಷೀಯವಾಗಿ ಅದನ್ನು ರದ್ದು ಮಾಡಲಾಗಿದೆ. ಯಾವುದೇ ವಿಚಾರವನ್ನು ರದ್ದು ಮಾಡಬೇಕಾದಲ್ಲಿ ಕೌನ್ಸಿಲ್‌ನಲ್ಲಿ ಚರ್ಚೆ ಮಾಡಬೇಕು. ಹೇಗೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿರಿ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಯಾವ ಕಾನೂನು ಅಡಿಯಲ್ಲಿ ರದ್ದು ಪಡಿಸಲಾಗಿದೆ ಎಂಬುದನ್ನು ಸಭೆಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್‌ಗೆ ಸದ್ಯ ಕೊಕ್‌ ಇಲ್ಲ!...

ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಅಬ್ದುಲ್‌ ವಾಜಿದ್‌, ಈಗಾಗಲೇ ಕೌನ್ಸಿಲ್‌ನಲ್ಲಿ ಈ ವಿಷಯ ತೀರ್ಮಾನವಾದ ಮೇಲೆ ಹೇಗೆ ಬದಲಾಯಿಸುತ್ತೀರಿ. ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇರುವ ಅಂದಿನ ಆಡಳಿತ ಪಕ್ಷದ ನಾಯಕ ಎನ್‌.ಆರ್‌.ರಮೇಶ್‌ ವಿಷಯ ಮಂಡನೆ ಮಾಡಿದ್ದರು. ಅವರಿಗೆ ಅವಮಾನ ಮಾಡುವುದಕ್ಕೆ ಈ ತೀರ್ಮಾನ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದರು.

ಒಂದು ವೇಳೆ ರದ್ದು ಮಾಡಬೇಕಾಗಿದ್ದಲ್ಲಿ ನಿಯಮ 51 ಹಾಕಬೇಕಾಗಿತ್ತು. ಇಲ್ಲವೇ ಮೂರನೇ ಎರಡರಷ್ಟುಸದಸ್ಯರು ಸಹಿ ಮಾಡಿರಬೇಕಾಗಿತ್ತು. ಅದ್ಯಾವುದನ್ನೂ ಮಾಡದೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, ಆಯುಕ್ತರು ಸೂಕ್ತ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಸ್ಪಷ್ಟನೆ ನೀಡಿ, ಕಡತವನ್ನು ತರಿಸಿ ಅದರಲ್ಲಿನ ಕಾನೂನು ಪರಿಶೀಲಿಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು. ಆದರೂ ಕಾಂಗ್ರೆಸ್‌ ಸದಸ್ಯರು ಒಪ್ಪಲಿಲ್ಲ. ಈ ವೇಳೆ ಪದ್ಮನಾಭರೆಡ್ಡಿ ಮಧ್ಯಪ್ರವೇಶಿಸಿ ಈ ನಿರ್ಣಯ ತೆಗೆದುಕೊಂಡಿದ್ದನ್ನು ವಿರೋಧಿಸಿ ನೀವೇ ಮೂರನೇ ಎರಡರಷ್ಟುಸಹಿ ಹಾಕಿಸಿಕೊಂಡು ಬನ್ನಿ ಚರ್ಚೆ ಮಾಡೋಣ ಎಂದು ಟಾಂಗ್‌ ನೀಡಿದರು.