ಪಕ್ಷದಲ್ಲಿ ಕಡೆಗಣನೆ: ಜೆಡಿಎಸ್‌ನತ್ತ ಮುಖಮಾಡಿದ ಬಿಜೆಪಿ ಕಾರ್ಯಕರ್ತರು..!
ಸಚಿವ ಶ್ರೀರಾಮುಲು, ಜಿಲ್ಲಾಧ್ಯಕ್ಷರ ಬಳಿ ದೂರಿದರೂ ಪ್ರಯೋಜನ ಇಲ್ಲ| ಸುಮಾರು 150 ರಿಂದ 200 ಪ್ರಮುಖ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರುತ್ತಾರೆ ಎಂದು ಕೇಳಿ ಬರುತ್ತಿರುವ ಮಾತುಗಳು| ನಿಷ್ಠಾವಂತ ಕಾರ್ಯಕರ್ತರ ವಲಸೆ ಹೋಗಿ ಮುಂಬರುವ ಚುನಾವಣೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ|
ಗುಳೇದಗುಡ್ಡ(ಮಾ.25): ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣ ಸೇರಿದಂತೆ ಮತಕ್ಷೇತ್ರದ ಕೆಲ ಪ್ರಮುಖ ಬಿಜೆಪಿ ಕಾರ್ಯಕರ್ತರು ಪಕ್ಷದಲ್ಲಿ ತಮಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಇತ್ತೀಚೆಗೆ ಪಕ್ಷಕ್ಕೆ ಬಂದವರಿಗೆ ಅವಕಾಶ ನೀಡಿ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ನೂರಾರು ಕಾರ್ಯಕರ್ತರು ಪಕ್ಷ ತೊರೆಯುವ ಹಾಗೂ ಜೆಡಿಎಸ್ ಸೇರುವ ಸಾಧ್ಯತೆ ಇದೆ ಎಂದು ಕೇಳಿ ಬರುತ್ತಿದೆ.
ಗುಳೇದಗುಡ್ಡ ಪಟ್ಟಣದ ಬಿಜೆಪಿ ಕಾರ್ಯಕರ್ತರು ಕಳೆದ ಕೆಲ ದಿನಗಳಿಂದ ಪಕ್ಷದಲ್ಲಿನ ತಮ್ಮ ಅಸಮಾಧಾನವನ್ನು ಹೊರಹಾಕುತ್ತಲೇ ಇದ್ದಾರೆ. ಹೊಸಬರಿಗೆ ಮಣೆ ಹಾಕುತ್ತಿದ್ದಾರೆ. ಅನುಭವಿ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರು ಸಚಿವ ಶ್ರೀರಾಮುಲು ಹಾಗೂ ಬಾದಾಮಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಕುಮಾರ ಪಾಟೀಲ ಅವರ ಮುಂದೆ ಹೇಳಿಕೊಂಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗದ ಕಾರಣ ಇಲ್ಲಿನ ಬಹುತೇಕ ಕಾರ್ಯಕರ್ತರು ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗಿದೆ.
'ಬಿಜೆಪಿ ಸರ್ಕಾರವೋ..ಸಿಡಿ ಸರ್ಕಾರವೋ'
ಈ ಕುರಿತು ಕೆಲ ಬಿಜೆಪಿ ಮುಖಂಡರನ್ನು ಮಾತನಾಡಿಸಿದಾಗ, ಅವರು ವಾಸ್ತವ ವಿಷಯ ಬಿಟ್ಟು ಕೊಡುತ್ತಿಲ್ಲ. ಬದಲಾಗಿ ಯಾವ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನವಿಲ್ಲ ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ. ಕಾರ್ಯಕರ್ತರ ಅಸಮಾಧಾನದ ಬಗ್ಗೆ ಪಕ್ಷದ ನಾಯಕರ ಮುಂದೆ ವಿಷಯ ಇಟ್ಟಿದ್ದೇವೆ ಅವರು ಸರಿಪಡಿಸುತ್ತಾರೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಆದರೂ ತೆರೆಮರೆಯಲ್ಲಿ ಕಾರ್ಯಕರ್ತರು ಗುಟ್ಟಾಗಿ ಸಭೆ ನಡೆಸಿ ವೇದಿಕೆ ಸಿದ್ದ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಮಾವಿನಮರದ ಬಳಿ ಹೋಗುತ್ತಿದ್ದೇವೆ:
ಗುಳೇದಗುಡ್ಡ ಪಟ್ಟಣದ ಹೆಚ್ಚಿನ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ ಅವರ ಸ್ವಭಾವಕ್ಕೆ ಮಾರುಹೋಗಿ ಜೆಡಿಎಸ್ ಅತ್ತ ಮುಖ ಮಾಡುತ್ತಿದ್ದಾರೆ. ಈ ಕುರಿತು ಬಿಜೆಪಿ ಕಾರ್ಯಕರ್ತರನ್ನು ಮಾತನಾಡಿಸಿದಾಗ, ನಾವು ಜೆಡಿಎಸ್ ಪಕ್ಷ ಅಂತ ಹೊರಟಿಲ್ಲ. ಮಾವಿನಮರದ ಅವರ ಸ್ವಭಾವಕ್ಕೆ ಮಾರು ಹೋಗಿ ಹೋಗುತ್ತಿದ್ದೇವೆ. ಮೊನ್ನೆ ನಡೆದ ಗ್ರಾಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಗ್ರಾಮೀಣ ಭಾಗದ ಕಾರ್ಯಕರ್ತರು ಪಕ್ಷದ ಮುಖಂಡರ ಎದುರೇ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದು ಉದಾಹರಣೆ ಇದೆ. ಸದ್ಯ ನಮ್ಮಲ್ಲಿಯೂ ತಾಪಂ ಹಾಗೂ ಜಿಪಂ ಚುನಾವಣೆ ಸಮೀಪಿಸುತ್ತಿದ್ದಂತೆ ಸುಮಾರು 150 ರಿಂದ 200 ಪ್ರಮುಖ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರುತ್ತಾರೆ ಎಂದಿರುವುದನ್ನು ಕೇಳಿದರೆ ಬರಲಿರುವ ದಿನಗಳಲ್ಲಿ ಬಿಜೆಪಿಯ ಭದ್ರಕೊಟೆಯಾಗಿರುವ ಗುಳೇದಗುಡ್ಡದಲ್ಲಿ ನಿಷ್ಠಾವಂತ ಕಾರ್ಯಕರ್ತರ ವಲಸೆ ಹೋಗಿ ಮುಂಬರುವ ಚುನಾವಣೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಂಭವ ಮೇಲ್ನೋಟಕ್ಕೆ ಕಂಡು ಬರುತ್ತಿದೆ.