ಹಾಸನ(ಸೆ.09): ಬಿಜೆಪಿ ಸಾಧನೆ ಚಿಕ್ಕದು ಬಾಯಿ ದೊಡ್ಡದು, ನಮ್ಮ ಪಕ್ಷದ ಸಾಧನೆ ದೊಡ್ಡದು ಬಾಯಿ ಚಿಕ್ಕದ್ದು, ಹಾಗಾಗಿ ನಮ್ಮ ಕೆಲಸ ಜನರಿಗೆ ಸರಿಯಾಗಿ ಮನವರಿಕೆ ಮಾಡುವಲ್ಲಿ ವಿಫಲವಾಗಿರುವ ಕಾರಣ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ.

ಚನ್ನರಾಯಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ತಾಲೂಕು ಜೆಡಿಎಸ್‌ನಿಂದ ಶನಿವಾರ ಸಂಜೆ ಆಯೋಜಿಸಿದ್ದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಕೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಚ್.ಡಿ.ರೇವಣ್ಣಗೂ ಬಂದಿತ್ತಾ BJP ಆಫರ್‌ ?

ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆಗಳನ್ನು ಪ್ರತಿ ಹಳ್ಳಿ, ಮನೆಗಳಿಗೆ ತಲುಪಿಸುವ ಕೆಲಸ ನಮ್ಮ ಕಾರ್ಯಕರ್ತರಿಂದಾಗಬೇಕು ಎಂದರು.

ಅನುದಾನ ತರೊಂದು ನಾವು ಗುದ್ದಲಿ ಪೂಜೆ ಮಾಡೊರು ಬಿಜೆಪಿಗರು, ಇದನ್ನು ಹೋಗಲಾಡಿಸಲು ಕಾರ್ಯಕರ್ತರು ಪಕ್ಷದ ಅಭಿವೃದ್ಧಿಗಳ ವಾಸ್ತವಕತೆಯನ್ನು ಜನರ ಬಳಿ ಹೋಗಿ ತಿಳಿಸುವ ಕೆಲಸವಾಗಬೇಕು. ಜನನಾಯಕರು ಕಾರ್ಯಕರ್ತರ ಧ್ವನಿಯಾಗಿರಬೇಕು ಎಂದರು. ಪ್ರತಿಯೊಬ್ಬರ ಕಷ್ಟಸುಖ ಆಲಿಸುವ ಸಲುವಾಗಿ ಮುಂದೆ ಪಂಚಾಯ್ತಿ ಮಟ್ಟಕ್ಕೆ ಅಧಿಕಾರಿಗಳೊಂದಿಗೆ ತೆರಳಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ನೂತನ ರಾಜಾಧ್ಯಕ್ಷರು ತಮ್ಮ ಕ್ಷೇತ್ರ ಬಿಟ್ಟು ರಾಜ್ಯದೆಲ್ಲೆಡೆ ಸಂಚರಿಸಿ ಪಕ್ಷ ಕಟ್ಟುವಲ್ಲಿ ಮುಂದಾಗಬೇಕು. ಸಕಲೇಶಪುರದಲ್ಲಿ ಅವರನ್ನು ಮತ್ತೊಮ್ಮೆ ಗೆಲಿಸುವ ಜವಬ್ದಾರಿ ನನ್ನದು ಎಂದು ಧೈರ್ಯ ಹೇಳಿದರು.

ಸಾಮಾಜಿಕ ಭದ್ರತೆ ನೀಡಿದ ಸರ್ಕಾರ JDS:

ಅಭಿನಂದನೆ ಸ್ವೀಕರಿಸಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಮಾತನಾಡಿ, ಬಡವರಿಗೆ, ರೈತರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಸೇರಿದಂತೆ ಎಲ್ಲ ನೊಂದ ಜನರಿಗೆ ಸಾಮಾಜಿಕ ಭದ್ರತೆ ನೀಡಿದ ಸರ್ಕಾರ ನಮ್ಮದು, ಕೆಲವರ ಷಡ್ಯಂತ್ರದಿಂದ ಸರ್ಕಾರ ಕಳೆದುಕೊಂಡಿದ್ದೇವೆ. ಇದರಿಂದ ದೃತಿಗೆಡುವ ಅವಶ್ಯಕತೆಯಿಲ್ಲ ಇನ್ನೂ ಸಶಕ್ತವಾಗಿರುವ ನಮ್ಮ ನಾಯಕರು ಪಕ್ಷವನ್ನು ಮತ್ತೊಮ್ಮೆ ಸ್ವಂತಬಲದ ಮೇಲೆ ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮಾತನಾಡಿ, 14ತಿಂಗಳಲ್ಲಿ ಕುಮಾರಸ್ವಾಮಿ ಸರ್ಕಾರ ಏನು ಮಾಡಿದೆ ಎನ್ನುವವರಿಗೆ ನಾಚಿಕೆಯಾಗಬೇಕು. ರೈತರ ಸಾಲಮನ್ನಾ, 3 ಲಕ್ಷದ ವರೆಗೆ ಬಡ್ಡಿರಹಿತ ಸಾಲ, ಸಾಮಾಜಿಕ ಭದ್ರತೆ ಯೋಜನೆಯಡಿ ಮಸಾಶನ ಹೆಚ್ಚಳ, ನಶಿಸಿ ಹೋಗಿದ್ದ ತೆಂಗಿಗೆ 200 ಕೋಟಿ ಪರಿಹಾರ, ಬಡವರ ರಕ್ಷಣೆಗಾಗಿ ಋುಣಮುಕ್ತ ಕಾಯಿದೆ ಜಾರಿಗೊಳಿಸಿದ್ದು ಯಾರು ಎಂಬುದನ್ನು ಬಿಜೆಪಿ ಅರಿತು ಮಾತನಾಡಲಿ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಾಸಕ ಸಿ.ಎನ್‌.ಬಾಲಕೃಷ್ಣ, ಜಿಪ ಸದಸ್ಯ ಸಿ.ಎನ್‌.ಪುಟ್ಟಸ್ವಾಮಿಗೌಡ, ಮಮತಾ, ತಾ.ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಬಿ.ಎಚ್‌.ಶಿವಣ್ಣ, ಕೃಷ್ಣೇಗೌಡ, ಶಿವರಾಜು, ಎಚ್‌.ಎಸ್‌.ಶ್ರೀಕಂಠಪ್ಪ, ಕೆಂಪನಂಜೇಗೌಡ, ಎ.ಇ. ಆನಂದ್‌ಕುಮಾರ್‌, ಅನಿಲ್‌ಕುಮಾರ್‌, ಶಶಿಧರ್‌, ತಿಮ್ಮೇಗೌಡ, ವಿ.ಎನ್‌.ರಾಜಣ್ಣ, ದೊರೆಸ್ವಾಮಿ, ಆರೀಫ್‌, ವಾಸು ಸೇರಿ ಇತರರಿದ್ದರು.