ಚಾಮರಾಜನಗರ(ಜ.17): ಕಾವೇರಿ ನೀರಾವರಿ ನಿಗಮದಲ್ಲಿ ಅಕ್ರಮ, ಅವ್ಯವಹಾರದಲ್ಲಿ ನಿರತರಾಗಿ ಸರ್ಕಾರಿ ಹಣ ಪೋಲು ಮಾಡುತ್ತಿರುವ ಅಧಿಕಾರಿಗಳಾದ ಡಿ. ಕರುಣಾಮಯಿ ಹಾಗೂ ಉಮೇಶ್‌ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಮತ್ತು ಸರ್ಕಾರದ ಅಧೀನ ಕಾರ್ಯದರ್ಶಿಗಳಿಗೆ ಗುತ್ತಿಗೆದಾರ ಶಿವಮಲ್ಲೆಗೌಡ ದೂರು ನೀಡಿದ್ದಾರೆ.

30 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿ ನಮ್ಮ ಹನೂರು, ಕೊಳ್ಳೇಗಾಲ ತಾಲೂಕಿನಲ್ಲಿ ಇನ್ನೂ ಚಾಲನೆಯಾಗಿಲ್ಲ. ಶಂಕುಸ್ಥಾಪನೆ ಸಹ ನಡೆದಿಲ್ಲ (ಸರಗೂರು ಗ್ರಾಮದ ಕಾವೇರಿ ನದಿಯಿಂದ ನೀರನ್ನು ಗುಂಡಾಲ್ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಹಾಗೂ ತಾಲೂಕಿನ ಎರಡು ಕೆರೆಗಳಿಗೆ ನೀರು ತುಂಬಿಸುವ ಯೋಜನೆ)ಆಗಿದ್ದರೂ ಸಹ ಈ ಯೋಜನೆಗಾಗಿ ಬಿಲ್ ಬರೆದಿದ್ದು ಹಿರಿಯ ಅಧಿಕಾರಿಗಳಿಗೆ ಸಂದಾಯ ಮಾಡುವ ಮೂಲಕ ಲೋಪವೆಸಗಿದ್ದಾರೆ. ಹಾಗಾಗಿ ತನಿಖೆ ನಡೆಸಿ ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಬೇಕು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಕರ್ತವ್ಯ ಲೋಪ:

ಇದಲ್ಲದೆ ಉದ್ದನೂರು ಗ್ರಾಮದಲ್ಲಿ ಎಸ್‌ಟಿ ಕಾಲೋನಿಯಲ್ಲಿ ಚರಂಡಿ ಮತ್ತು ರಸ್ತೆ ಕಾಮಗಾರಿಯಲ್ಲೂ ಸಹ ಸಾಕಷ್ಟುಲೋಪವಾಗಿದೆ. ಹಿರಿಯ ಅಧಿಕಾರಿಗಳ ಆದೇಶವನ್ನು ಉಲ್ಲಂಘಿಸಲಾಗಿದೆ. ಹಿರಿಯ ಅಧಿಕಾರಿಗಳು ಟೆಂಡರ್‌ ಕರೆಯಲು ಸೂಚಿಸಿದ್ದರೂ ಸಹ ನಿಯಮ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಲಾಗಿದ್ದು, ಈ ಪ್ರಕರಣದಲ್ಲೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಹಿರಿಯ ಅಧಿಕಾರಿಗಳಿಗೆ ದೂರು:

ಎಂಜಿನಿಯರ್‌ ಕರುಣಾಮಯಿ ಎಂಬುವರು ತಾವೇ ಬಂಡವಾಳ ಹಾಕಿಕೊಂಡು ಬೇನಾಮಿಯಾಗಿ ಕಾಮಗಾರಿ ನಿರ್ವಹಿಸುವ ಚಾಳಿ ಬೆಳೆಸಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಹಾಗೂ ನಾಗರಿಕರೊಡನೆ ಸೌಜನ್ಯದಿಂದ ವರ್ತಿಸದೆ ಉದ್ಧಟತನದಿಂದ ವರ್ತಿಸುತ್ತಾರೆ.

ಶಂಕಿತ ಉಗ್ರರು: ಬಂಡೀಪುರ ಚೆಕ್‌ ಪೋಸ್ಟ್‌ನಲ್ಲಿ ತೀವ್ರ ತಪಾಸಣೆ

ಹಿರಿಯ ಅಧಿಕಾರಿಗಳ ಮುಂದೆಯೇ ಉದ್ದಟವಾಗಿ ವರ್ತಿಸಿದ ಹಲವು ಉದಾಹರಣೆಗಳಿದ್ದು ಈ ಸಂಬಂಧ ದಾಖಲೆ ಸಮೇತ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ. ದೂರು ಪ್ರತಿಯನ್ನು ಜಲಸಂಪನ್ಮೂಲ ಇಲಾಖಾ ಸಚಿವರು, ಪ್ರಧಾನ ಕಾರ್ಯದರ್ಶಿ, ವ್ಯವಸ್ಥಾಪಕ ನಿರ್ದೇಶಕರು ಕಾವೇರಿ ನಿಗಮದ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.