ಬೆಂಗಳೂರು ಮಹಾನಗರ ವಿಧೇಯಕ ಮಂಡನೆ, ನಗರದಲ್ಲಿ ಟ್ರಾಫಿಕ್ ನಿರ್ವಹಣೆಗೆ ಒಂದೇ ಪ್ರಾಧಿಕಾರಮ ಮುಖ್ಯಮಂತ್ರಿ ಅಧ್ಯಕ್ಷರು, ಮೇಯರ್ ಸದಸ್ಯ
ವಿಧಾನಸಭೆ(ಸೆ.24): ಬೆಂಗಳೂರು ನಗರದಲ್ಲಿ ಸಂಚಾರ ಕಾರ್ಯಾಚರಣೆ, ನಿರ್ವಹಣೆ, ಮೇಲ್ವಿಚಾರಣೆಗಾಗಿ ಪ್ರಾಧಿಕಾರ ರಚಿಸುವ ಸಂಬಂಧ ‘ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ-2022’ ಅನ್ನು ಮಂಡಿಸಲಾಯಿತು. ಶುಕ್ರವಾರ ಬಿಎಂಎಸ್ ಟ್ರಸ್ಟ್ ಅಕ್ರಮ ಕುರಿತು ಜೆಡಿಎಸ್‌ನ ಗದ್ದಲ, ಕೋಲಾಹಲ ಮತ್ತು 40 ಪರ್ಸೆಂಟ್ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ನ ಆಗ್ರಹದ ನಡುವೆಯೇ ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧೇಯಕನ್ನು ಮಂಡಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ವಲಯ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಂಚಾರ ಪೊಲೀಸ್, ಬೆಂಗಳೂರು ಮಹಾನಗರ ಸಾರಿಗೆ ನಿಗಮ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ನಿಯಮಿತ ಮತ್ತು ಸಾರಿಗೆ ಇಲಾಖೆಯಂತಹ ವಿವಿಧ ಸಂಸ್ಥೆಗಳು ಒಂದೇ ಸೂರಿಯಡಿ ತರಬೇಕು ಎಂಬ ಉದ್ದೇಶದಿಂದ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕವನ್ನು ಮಂಡಿಸಲಾಗಿದೆ.
Karnataka Monsoon Session: ಮುಂಗಾರು ಅಧಿವೇಶನ ಸಂಪೂರ್ಣ ಯಶಸ್ವಿ: ಕಾಗೇರಿ
ಆರ್ಥಿಕತೆ, ಮೂಲಸೌಕರ್ಯಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಮಾರುಕಟ್ಟೆಗಳ ಸ್ಥಾಪನೆ ಮತ್ತು ನಿರ್ವಹಣೆ, ಪರಿಸರ ಸಂರಕ್ಷಣೆ ಮುಂತಾದವುಗಳಿಗೆ ಉತ್ತೇಜನ ನೀಡಲು ಸಹಕಾರಿಯಾಗಲಿದೆ. ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ದ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳು ಇರಲಿದ್ದು, ಬೆಂಗಳೂರು ಅಭಿವೃದ್ಧಿ ಸಚಿವ, ಸಾರಿಗೆ ಸಚಿವರು ಉಪಾಧ್ಯಕ್ಷರಾಗಲಿದ್ದಾರೆ. ಸರ್ಕಾರ ಮುಖ್ಯಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಾರಿಗೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಲೋಕೋಪಯೋಗಿ, ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮೇಯರ್ ಅವರು ಸದಸ್ಯರಾಗಿರುತ್ತಾರೆ.
ಕನಿಷ್ಠ ಪಕ್ಷ ಐದು ವರ್ಷಗಳಿಗೊಮ್ಮೆ ಪ್ರಾಧಿಕಾರವು ಸಮಗ್ರ ಸಂಚಾರ ಯೋಜನೆಯನ್ನು ಪರಿಷ್ಕರಿಸಲಿದೆ. ನಗರದ ಸಂಚಾರ ಯೋಜನೆಯನ್ನು ಪರಿಷ್ಕರಿಸಿದ ಬಳಿಕ ಅನುಷ್ಠಾನದ ಬಗ್ಗೆಯೂ ನಿಗಾವಹಿಸಲಾಗುತ್ತದೆ. ಪ್ರಾಧಿಕಾರದ ಅಧ್ಯಕ್ಷರು ಪ್ರಾಧಿಕಾರದ ಎಲ್ಲಾ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಮೇಲ್ವಿಚಾರಣೆ, ನಿರ್ದೇಶನಗಳು ಮತ್ತು ನಿಯಂತ್ರಣದ ಅಧಿಕಾರವು ಇರಲಿದೆ. ಒಂದು ವೇಳೆ ಅಧ್ಯಕ್ಷರು ಪ್ರಾಧಿಕಾರದ ಕಾರ್ಯಗಳನ್ನು ನಿರ್ವಹಿಸಲು ಅಸಮರ್ಥನಾದ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರು ಅಧ್ಯಕ್ಷರಾಗಲಿದ್ದಾರೆ. ನಗರ ಸಾರಿಗೆ ಯೋಜನೆಗಳನ್ನು ಅನುಮೋದಿಸುವ ಅಧಿಕಾರ ಇರುತ್ತದೆ. ವಾಹನ ನಿಲುಗಡೆ ನೀತಿ, ಸರಕು ಸಾಗಣೆ ನೀತಿ ಸೇರಿದಂತೆ ಅವಶ್ಯಕತೆ ಎನ್ನಿಸುವ ನೀತಿಯನ್ನು ರೂಪಿಸಲು ಪ್ರಾಧಿಕಾರಕ್ಕೆ ಅಧಿಕಾರ ಇರುತ್ತದೆ.
ಸಂಚಾರ ಕಾರ್ಯಚರಣೆ, ನಿರ್ವಹಣೆ, ಮೇಲ್ವಿಚಾರಣೆಗಾಗಿ ಒಂದೇ ಸೂರಿನಡಿಯಲ್ಲಿ ಸಂಚಾರಕ್ಕೆ ಸಂಬಂಧಿಸಿದ ಇಲಾಖೆಗಳು ಲಂಡನ್‌ನಲ್ಲಿ ಇದ್ದು, ಇದೇ ಮಾದರಿಯಲ್ಲಿಯೇ ಬೆಂಗಳೂರಿನಲ್ಲಿ ತರುವ ಉದ್ದೇಶ ಹೊಂದಲಾಗಿದೆ. ಇದರಿಂದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಸಾಧ್ಯವಿದೆ ಎಂದು ಮೂಲಗಳು ಹೇಳಿವೆ.
