Asianet Suvarna News Asianet Suvarna News

Karnataka Monsoon Session: ಮುಂಗಾರು ಅಧಿವೇಶನ ಸಂಪೂರ್ಣ ಯಶಸ್ವಿ: ಕಾಗೇರಿ

55 ಗಂಟೆ 14 ನಿಮಿಷ ಕಲಾಪ, 14ಮಸೂದೆ ಅಂಗೀಕಾರ, ಶೇ.99 ಶಾಸಕರು ಹಾಜರು

Karnataka Monsoon Session Complete Success says Speaker Vishweshwar Hegde Kageri grg
Author
First Published Sep 24, 2022, 8:30 AM IST

ಬೆಂಗಳೂರು(ಸೆ.24):  ಕಳೆದ ಸೆಪ್ಟಂಬರ್‌ 12ರಿಂದ ಆರಂಭವಾಗಿ 23ರವರೆಗೆ 10 ದಿನಗಳ ಕಾಲ ನಡೆದ ಮಳೆಗಾಲದ ಅಧಿವೇಶನ ಸಂಪೂರ್ಣ ಯಶಸ್ವಿಯಾಗಿದ್ದು, ಒಟ್ಟು 55 ಗಂಟೆ 14 ನಿಮಿಷ ಕಾರ್ಯಕಲಾಪ ನಡೆಸಲಾಗಿದೆ. ಮಂಡನೆಯಾದ 16 ವಿಧೇಯಕಗಳಲ್ಲಿ 14 ಅಂಗೀಕಾರಗೊಂಡಿವೆ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಶುಕ್ರವಾರ ಕೊನೆಯ ದಿನದ ಕಲಾಪ ಮುಕ್ತಾಯಗೊಳಿಸಿ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ ಬಳಿಕ ತಮ್ಮ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ಕಾರ್ಯಕಲಾಪಗಳ ವಿವರಣೆ ನೀಡಿದರು. 15ನೇ ವಿಧಾನಸಭೆಯ 13ನೇ ಅಧಿವೇಶನ ಯಶಸ್ವಿಯಾಗಿ ನಡೆದಿದ್ದು ಒಟ್ಟು 55 ಗಂಟೆ 14 ನಿಮಿಷ ಕಾರ್ಯಕಲಾಪ ನಡೆದಿದೆ. ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ನಿಲುವಳಿ ಸೂಚನೆ, ಸಿಎಜಿ ವರದಿ ಮಂಡನೆ, ವಿಧೇಯಕ ಮಂಡನೆ, ಪೂರಕ ಅಂದಾಜಿನ ಮೊದಲ ಕಂತಿನ ಅನುಮೋದನೆ ಸೇರಿ ಹಲವು ಕಾರ್ಯಕಲಾಪಗಳನ್ನು ನಡೆಸಲಾಗಿದೆ. ಸರ್ಕಾರ ಮಂಡಿಸಿದ 16 ವಿಧೇಯಕಗಳಲ್ಲಿ 14 ಅಂಗೀಕಾರಗೊಂಡಿವೆ. ಒಂದು ವಿಧೇಯಕ ಮಾತ್ರ ತಿದ್ದುಪಡಿಗೆ ಸರ್ಕಾರ ನಿರ್ಧರಿಸಿ ಸರ್ಕಾರ ಹಿಂಪಡೆದಿದೆ ಎಂದರು.

ಕಾಂಗ್ರೆಸ್‌ PayCMಗೆ ಬಿಜೆಪಿ Pay2 Congress Madam ಪ್ರತ್ಯುತ್ತರ; ಕ್ರಿಯೇಟಿವ್‌ ಆಗಿ ಕಿತ್ತಾಡ್ತಿದ್ದಾರೆ ರಾಜ್ಯ ನಾಯಕರು!

ನಿಯಮ 69 ಅಡಿಯಲ್ಲಿ ಸಾರ್ವಜನಿಕ ಜರೂರು ವಿಷಯಗಳಾಗಿ 7 ಸೂಚನೆಗಳನ್ನು ಚರ್ಚೆ ಮಾಡಲಾಗಿದೆ. ಸರ್ಕಾರ 150 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಿದೆ. ಇತರೆ 1650 ಪ್ರಶ್ನೆಗಳಿಗೆ ಲಿಖಿತ ಮೂಲಕ ಸದಸ್ಯರಿಗೆ ಉತ್ತರ ನೀಡಿದೆ. ಅತಿವೃಷ್ಟಿವಿಚಾರದಲ್ಲಿ ನೇರವಾಗಿ 36 ಜನ ಸದಸ್ಯರು ಭಾಗಿಯಾಗಿ ಚರ್ಚಿಸಿದ್ದಾರೆ. 85 ಗಮನ ಸೆಳೆಯುವ ಸೂಚನೆಯನ್ನು ಚರ್ಚೆ ಮಾಡಲಾಗಿದೆ ಎಂದು ವಿವರಿಸಿದರು. ಶೇ.99 ರಷ್ಟುಶಾಸಕರು ಸದನಕ್ಕೆ ಹಾಜರಾಗಿ ಕಲಾಪದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ:

ಪ್ರಸಕ್ತ ವರ್ಷದ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಮುಂದಿನ ಬೆಳಗಾವಿ ಅಧಿವೇಶನದಲ್ಲಿ ನೀಡಲಾಗುವುದು ಎಂದು ಇದೇ ವೇಳೆ ಸ್ಪೀಕರ್‌ ಕಾಗೇರಿ ತಿಳಿಸಿದರು.

Karnataka Monsoon Session: ಸದಸ್ಯರು ಕೇಳಿದ್ದೊಂದು, ಸರ್ಕಾರ ಹೇಳಿದ್ದೊಂದು..!

15,614 ಸಾರ್ವಜನಿಕರಿಂದ ಸದನ ವೀಕ್ಷಣೆ:

ಕೋವಿಡ್‌ ತಹಬದಿಗೆ ಬಂದಿರುವುದರಿಂದ ಅಧಿವೇಶನದ ಕಾರ್ಯಕಲಾಪಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿತ್ತು. ಒಟ್ಟು 15,614 ಜನ ಈ ಬಾರಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ಕಲಾಪ ವೀಕ್ಷಿಸಿದ್ದಾರೆ. ಕೊನೆಯ ಎರಡು ಮೂರು ದಿನ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ಕಲಾಪ ವೀಕ್ಷಿಸಿದ್ದು ವಿಶೇಷ ಎಂದರು.

ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆ ಕುರಿತು ಸೆ.15 ರಂದು ಅತ್ಯುತ್ತಮ ಶಾಸಕ ಸಮಿತಿಯ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಮಿತಿಯ ಇತರೆ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು. ಈ ಬಾರಿ ಸದನದಲ್ಲಿ ಶೇ.99ರಷ್ಟುಶಾಸಕರ ಹಾಜರಾತಿ ಇತ್ತು. ಕೆ.ಎಸ್‌.ಈಶ್ವರಪ್ಪ ಮತ್ತು ರಮೇಶ್‌ ಜಾರಕಿಹೊಳಿ ಅವರು ಹಾಜರಾಗಿರಲಿಲ್ಲ. ಗೈರು ಹಾಜರಾದ ಇನ್ನು ಕೆಲ ಶಾಸಕರು ನನ್ನ ಗಮನಕ್ಕೆ ತಂದು ಸದನದ ಅನುಮತಿ ನೀಡಲಾಗಿತ್ತು.
ಅಧಿವೇಶನದ ಕೊನೆ ದಿನ ಜೆಡಿಎಸ್‌ ಸದಸ್ಯರ ಧರಣಿಯಿಂದ ಕಾರ್ಯಕಲಾಪ ಸರಿಯಾಗಿ ನಡೆಸಲು ಆಗಿಲ್ಲ. ಇನ್ನುಳಿದ ಎಲ್ಲಾ ದಿನಗಳು ಕಾರ್ಯಕಲಾಪ ಸುಗಮವಾಗಿ ನಡೆದಿದೆ. ಇದಕ್ಕೆ ಅಗತ್ಯ ನೆರವು, ಸಹಕಾರ ನೀಡಿದ ಆಡಳಿತ ಪಕ್ಷದ ನಾಯಕರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲ ಸದಸ್ಯರು, ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
 

Follow Us:
Download App:
  • android
  • ios