Asianet Suvarna News Asianet Suvarna News

ಮಂಡ್ಯ: ದಂಡ ಕಟ್ಟೋದಿಲ್ಲ ಎಂದು ಪೊಲೀಸರಿಗೇ ಆವಾಜ್‌ ಹಾಕಿ ಕಕ್ಕಾಬಿಕ್ಕಿಯಾದ..!

ಎಕ್ಸ್‌ಪ್ರೆಸ್‌ ವೇನಲ್ಲಿ ಇಳಿಯಬಾರದು ಎನ್ನುವುದು ನನಗೆ ಗೊತ್ತಿರಲಿಲ್ಲ. ನಾನು ದಂಡ ಕಟ್ಟೋಲ್ಲ. ನೀವು ಎಕ್ಸ್‌ಪ್ರೆಸ್‌ ವೇಗೆ ಹತ್ತುವಾಗ ಹತ್ತಬೇಡಿ ಎಂದು ಹೇಳೋಲ್ಲ. ಈಗ ದಂಡ ಕಟ್ಟಿ ಅಂತೀರಾ, ನಾನು ಕಟ್ಟುವುದಿಲ್ಲ. ನನಗೆ ಹೊಸ ನಿಯಮ ಜಾರಿ ಮಾಡಿರುವುದು ಗೊತ್ತಿಲ್ಲ ಎಂದು ಪೊಲೀಸರಿಗೆ ಅವಾಜ್‌ ಹಾಕಿದ ಬೈಕ್‌ ಸವಾರ 

Bike Rider Says to Police Not Pay the Fine in Mandya grg
Author
First Published Aug 3, 2023, 2:30 AM IST | Last Updated Aug 3, 2023, 2:30 AM IST

ಮಂಡ್ಯ(ಆ.03):  ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌-ವೇನಲ್ಲಿ ನಿಯಮಾವಳಿ ಉಲ್ಲಂಘಿಸಿ ಬೈಕ್‌ನಲ್ಲಿ ಪ್ರಯಾಣಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಸವಾರನೊಬ್ಬ ರೂಲ್ಸ್‌ ಪಾಠ ಮಾಡಲು ಹೋಗಿ ಕಕ್ಕಾಬಿಕ್ಕಿಯಾದ ಘಟನೆ ಬುಧವಾರ ನಡೆಯಿತು. ಆ.1 ರಿಂದ ಎಕ್ಸ್‌ಪ್ರೆಸ್‌ ವೇನಲ್ಲಿ ದ್ವಿಚಕ್ರ ವಾಹನ, ಆಟೋ, ಟ್ರಾಕ್ಟರ್‌, ಎತ್ತಿನಗಾಡಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದರ ನಡುವೆಯೂ ನಿಯಮ ಉಲ್ಲಂಘಿಸಿ ಬೈಕ್‌ ಸವಾರನೊಬ್ಬ ಎಕ್ಸ್‌ಪ್ರೆಸ್‌ ವೇನಲ್ಲಿ ಬೈಕ್‌ ಚಾಲನೆ ಮಾಡಿಕೊಂಡು ಬಂದನು. ಈ ವೇಳೆ ನಗರದ ಹೊರವಲಯದಲ್ಲಿರುವ ಉಮ್ಮಡಹಳ್ಳಿ ಗೇಟ್‌ ಬಳಿ ಬೈಕ್‌ ಸವಾರನನ್ನು ಪೊಲೀಸರು ಅಡ್ಡಗಟ್ಟಿದಂಡ ಕಟ್ಟುವಂತೆ ತಿಳಿಸಿದರು.

ಆ ಸಮಯದಲ್ಲಿ ಎಕ್ಸ್‌ಪ್ರೆಸ್‌ ವೇನಲ್ಲಿ ಇಳಿಯಬಾರದು ಎನ್ನುವುದು ನನಗೆ ಗೊತ್ತಿರಲಿಲ್ಲ. ನಾನು ದಂಡ ಕಟ್ಟೋಲ್ಲ. ನೀವು ಎಕ್ಸ್‌ಪ್ರೆಸ್‌ ವೇಗೆ ಹತ್ತುವಾಗ ಹತ್ತಬೇಡಿ ಎಂದು ಹೇಳೋಲ್ಲ. ಈಗ ದಂಡ ಕಟ್ಟಿ ಅಂತೀರಾ, ನಾನು ಕಟ್ಟುವುದಿಲ್ಲ. ನನಗೆ ಹೊಸ ನಿಯಮ ಜಾರಿ ಮಾಡಿರುವುದು ಗೊತ್ತಿಲ್ಲ ಎಂದು ಬೈಕ್‌ ಸವಾರ ಪೊಲೀಸರಿಗೆ ಅವಾಜ್‌ ಹಾಕಿದನು.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಎಐ ಸ್ಪೀಡ್‌ ಡಿಟೆಕ್ಟರ್‌ ಐದೇ ದಿನಕ್ಕೆ ಸ್ಟಾಪ್‌: ಅಪಫಾತ ತಡೆ ಚಿಂತನೆ ಫ್ಲಾಪ್‌..?

ಎಕ್ಸ್‌ಪ್ರೆಸ್‌ ವೇ ಹತ್ತುವ ಜಾಗಗಳಲ್ಲಿ ನಾಮಫಲಕಗಳನ್ನು ಹಾಕಿದ್ದೇವೆ ನೋಡಿಲ್ವಾ. ನಿತ್ಯ ಪತ್ರಿಕೆಗಳಲ್ಲಿ ಸುದ್ದಿ ಬರುತ್ತಿರುವುದನ್ನು ನೋಡಿಲ್ಲವೇ ಎಂದರೂ ಒಪ್ಪದ ಬೈಕ್‌ ಸವಾರ, ನಾನು ಈ ಹೊಸ ರೂಲ್ಸ್‌ ಎಲ್ಲೂ ನೋಡಿಲ್ಲ. ನಾನು ದಂಡ ಕಟ್ಟುವುದಿಲ್ಲ ಎಂದು ಮೊಂಡು ವಾದಕ್ಕಿಳಿದನು.

ಈ ವೇಳೆ ಎಕ್ಸ್‌ಪ್ರೆಸ್‌ ವೇಗೆ ಬೈಕ್‌ನೊಂದಿಗೆ ಇಳಿಯಬಾರದು ಎಂಬ ಹೊಸ ರೂಲ್ಸ್‌ ಗೊತ್ತಿಲ್ಲ ಅಂತಿದ್ದೀಯಾ ಓಕೆ. ಹೆಲ್ಮೆಟ್‌ ಯಾಕೆ ಹಾಕಿಲ್ಲ?. ಹೆಲ್ಮೆಟ್‌ ಹಾಕೋ ಹಳೆ ರೂಲ್ಸ್‌ ನಿನಗೆ ಗೊತ್ತಿಲ್ವಾ? ಎಂಬ ಪೊಲೀಸರ ಪ್ರಶ್ನೆಗೆ ಬೈಕ್‌ ಸವಾರ ಕಕ್ಕಾಬಿಕ್ಕಿಯಾದನು.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಮೊದಲ ಫೈನ್‌ ಕಟ್ಟಿದ ಬೈಕ್‌ ಸವಾರ ಇವರೇ..?

ಇದೇ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಬೈಕ್‌ ಸವಾರನಿಗೆ ಬುದ್ಧಿಮಾತು ಹೇಳಿದರು. ಮಾಡಿರುವ ತಪ್ಪಿಗೆ ದಂಡ ಕಟ್ಟು. ಮುಂದೆ ತಪ್ಪು ಮಾಡದಂತೆ ಎಚ್ಚರ ವಹಿಸು. ಪೊಲೀಸರು ನಮ್ಮ ಒಳ್ಳೆಯದಕ್ಕೇ ಹೇಳೋದು ಎಂದಾಗ ತನ್ನ ತಪ್ಪಿನ ಅರಿವಾಗಿ ಬೈಕ್‌ ಸವಾರ ದಂಡ ಕಟ್ಟಿಮುಂದೆ ಸಾಗಿದನು.

ಹೆದ್ದಾರಿಯಲ್ಲಿ 2ನೇ ದಿನ 10 ಸಾವಿರ ದಂಡ

ಮದ್ದೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ 20 ದ್ವಿಚಕ್ರ ವಾಹನ ಸವಾರರಿಂದ ಪೊಲೀಸರು 10 ಸಾವಿರ ದಂಡ ವಸೂಲಿ ಮಾಡಿದ್ದಾರೆ. ತಾಲೂಕಿನ ನಿಡಘಟ್ಟಗಡಿಭಾಗ ಬೆಂಗಳೂರು - ಮೈಸೂರು ಹೆದ್ದಾರಿಯ ಹಾಗೂ ಗೆಜ್ಜಲಗೆರೆ ಭಾಗಗಳಲ್ಲಿ ಕಾರ್ಯಾಚರಣೆಗಿಳಿದ ಕಾನೂನು ಮತ್ತು ಶಿಸ್ತು ವಿಭಾಗದ ಪಿಎಸ್‌ಐ ಆರ್‌.ಬಿ.ಉಮೇಶ್‌ ಹಾಗೂ ಸಂಚಾರಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಿಷೇಧ ಉಲ್ಲಂಘಿಸಿ ಹೆದ್ದಾರಿ ಸಂಚರಿಸುತ್ತಿದ್ದ 20 ಬೈಕ್‌ ಸವಾರರಿಗೆ ತಲಾ 500 ರು. ನಂತೆ 10 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಮೊದಲನೇ ದಿನ ಕಾರ್ಯಾಚರಣೆ ನಡೆಸಿ 40 ಬೈಕ್‌ ಸವಾರರಿಂದ 500 ರು.ನಂತೆ 22 ಸಾವಿರ ರು ದಂಡ ವಸೂಲಿ ಮಾಡಿದ್ದರು. 2ನೇ ದಿನವಾದ ಇಂದೂ ಸಹ ಕಾರ್ಯಾಚರಣೆ ನಡೆಸಿ ಹೆದ್ದಾರಿಯಲ್ಲಿ ಸಂಚಾರ ಮಾಡಿದ ಆರೋಪದ ಮೇರೆಗೆ ದಂಡ ವಿಧಿಸಿದ್ದಾರೆ.

Latest Videos
Follow Us:
Download App:
  • android
  • ios