Asianet Suvarna News Asianet Suvarna News

ಬಾಗಲಕೋಟೆಯಿಂದ ಹಾವೇರಿಗೆ ಹ್ಯಾಂಡಲ್‌ ಇಲ್ಲದ ಬೈಕಲ್ಲಿ ಬಂದ ಕನ್ನಡ ಪ್ರೇಮಿ: ಸಿದ್ದೇಶ್ವರ ಶ್ರೀ, ಪುನೀತ್‌ ಫೋಟೋ ಜತೆ ಸವಾರಿ

ಒಂದು ಕೈಯಲ್ಲಿ ‘ಬಳಸಬೇಕು ಕನ್ನಡ, ಉಳಿಸಬೇಕು ಕನ್ನಡ, ಬೆಳೆಸಬೇಕು ಕನ್ನಡ’ ಎಂಬ ನಾಮಫಲಕ ಮತ್ತೊಂದು ಕೈಯಲ್ಲಿ ಕನ್ನಡ ಧ್ವಜ ಹಿಡಿದು, ಕಾಲಿನಲ್ಲೇ ಬೈಕನ್ನು ಬ್ಯಾಲೆನ್ಸ್‌ ಮಾಡುತ್ತಾ ಬರೋಬ್ಬರಿ 360 ಕಿ.ಮೀ. ದೂರವನ್ನು 10 ತಾಸಿನಲ್ಲಿ ಕ್ರಮಿಸಿದ್ದಾರೆ.

bike ride from kannada lover from bagalot to haveri kannada sahitya sammelan without handle siddeshwara shree puneeth rajkumar photos ash
Author
First Published Jan 4, 2023, 9:51 PM IST

(ವರದಿ - ಪವನ್‌ ಕುಮಾರ್, ಹಾವೇರಿ )

ಹಾವೇರಿ, ಜನವರಿ 4, 2023: ಕೆಲವರಿಗೆ ನೆಟ್ಟಗಿರೋ ಬೈಕೇ ಓಡಿಸೋಕೆ ಬರಲ್ಲ. ಅಂಥಾದ್ರಲ್ಲಿ ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ ಸಾವಿರಾರು ಕಿಲೋ ಮೀಟರ್ ಬೈಕ್ ಓಡಿಸಿ ಸಾಹಸ ಮರೆದಿದ್ದಾರೆ ಇಲ್ಲೊಬ್ಬ ಗಂಡುಗಲಿ. ಕನ್ನಡಾಭಿಮಾನಿಯ ಸಾಹಸದ ಇಂಟರೆಸ್ಟಿಂಗ್ ಸ್ಟೋರಿ ಇದು. ಹೌದು, ಕರೆಕ್ಟಾಗಿರೋ ಬೈಕ್ ಓಡಿಸಿಕೊಂಡು ಹೋಗೋವಾಗಲೇ ಸ್ವಲ್ಪ ಬ್ಯಾಲೆನ್ಸ್ ತಪ್ಪಿದರೂ ಅಪಘಾತ ಆಗಿ ಬಿಡುತ್ವೆ. ಅಂಥಾದ್ರಲ್ಲಿ ಹ್ಯಾಂಡಲ್ಲೇ ಇಲ್ಲದ ಬೈಕ್ ಓಡಿಸಿ ಇಲ್ಲೊಬ್ಬ ಕನ್ನಡಾಭಿಮಾನಿ ಸಾಹಸ ಮೆರೆದಿದ್ದಾರೆ. ಏಲಕ್ಕಿ ಕಂಪಿನ ನಾಡು ಹಾವೇರಿ ಜಿಲ್ಲೆಯಲ್ಲಿ ಜನವರಿ 6 ರಿಂದ 8 ರವರೆಗೆ ನಡೆಯಲಿರೋ ಸಾಹಿತ್ಯ ಸಮ್ಮೇಳನಕ್ಕೆ ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ ಬಂದಿದ್ದಾರೆ ಈ ಸಾಹಸಿ. ಬಾಗಲಕೋಟೆಯಿಂದ ಹಾವೇರಿಗೆ ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ ಬಂದಿದ್ದಾರೆ ಅಪ್ಪಟ ಕನ್ನಡ ಪ್ರೇಮಿ, ಬೈಕ್‌ ಸಾಹಸಿ ಈರಣ್ಣ ಜಿ. ಕುಂದರಗಿಮಠ. 

ಒಂದು ಕೈಯಲ್ಲಿ ‘ಬಳಸಬೇಕು ಕನ್ನಡ, ಉಳಿಸಬೇಕು ಕನ್ನಡ, ಬೆಳೆಸಬೇಕು ಕನ್ನಡ’ ಎಂಬ ನಾಮಫಲಕ ಮತ್ತೊಂದು ಕೈಯಲ್ಲಿ ಕನ್ನಡ ಧ್ವಜ ಹಿಡಿದು, ಕಾಲಿನಲ್ಲೇ ಬೈಕನ್ನು ಬ್ಯಾಲೆನ್ಸ್‌ ಮಾಡುತ್ತಾ ಬರೋಬ್ಬರಿ 360 ಕಿ.ಮೀ. ದೂರವನ್ನು 10 ತಾಸಿನಲ್ಲಿ ಕ್ರಮಿಸಿದ್ದಾರೆ. ಬಾಗಲಕೋಟೆ ನಗರದಿಂದ ಶಿರೂರ, ಅಮೀನಗಡ, ಹುನಗುಂದ, ಇಳಕಲ್‌, ಕುಷ್ಟಗಿ, ಗಜೇಂದ್ರಗಡ, ನರೇಗಲ್, ಬೆಟಗೇರಿ, ಗದಗ, ಹುಲಕೋಟಿ, ಹುಬ್ಬಳ್ಳಿ ಚನ್ನಮ್ಮ ಸರ್ಕಲ್, ಬಂಕಾಪೂರ ಚೌಕ್, ಗಬ್ಬೂರು ಬೈಪಾಸ್‌, ರಾಷ್ಟ್ರೀಯ ಹೆದ್ದಾರಿ–48ರ ಮೂಲಕ ಶಿಗ್ಗಾವಿ ಮಾರ್ಗವಾಗಿ ಹಾವೇರಿ ತಲುಪಿದ್ದಾರೆ. ಎಷ್ಟೇ ಟ್ರಾಫಿಕ್‌ ಇದ್ದರೂ, ಲೀಲಾಜಾಲವಾಗಿ ಬೈಕ್‌ ಬ್ಯಾಲೆನ್ಸ್‌ ಮಾಡುವ ಕಲೆ ರೂಢಿಸಿಕೊಂಡಿದ್ದಾರೆ. ಕನ್ನಡ ನಾಡು–ನುಡಿಯ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬುದು ಈರಣ್ಣ ಜಿ. ಕುಂದರಗಿಮಠ ಅವರ ಮನದಾಳದ ಮಾತು.

ಇದನ್ನು ಓದಿ: Haveri: ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ ಭಕ್ಷ್ಯ ಭೋಜನ: ಈಗಾಗಲೇ ಸಿಹಿ ತಿಂಡಿ ತಯಾರಿ

ಇನ್ನು, ಹಾವೇರಿ ನಗರಕ್ಕೆ ಆಗಮಿಸಿದ ಈರಣ್ಣ ಅವರನ್ನು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಸ್ವಾಗತಿಸಿ ಆಶೀರ್ವದಿಸಿ ಹಾರೈಸಿದ್ದಾರೆ. ಕಳೆದ 15 ವರ್ಷಗಳಿಂದ ಬೈಕ್‌ ಮತ್ತು ಕಾರಿನ ಸಾಹಸ ಕ್ರೀಡೆಯಲ್ಲಿ ತೊಡಗಿಕೊಂಡಿದ್ದು, ಹಲವಾರು ದಾಖಲೆ ಮಾಡಿದ್ದಾರೆ. ಎರಡು ಬಾರಿ ‘ಲಿಮ್ಕಾ ದಾಖಲೆ’ ಹಾಗೂ ಇಂಡಿಯಾದ ‘ಬುಕ್ ಆಫ್ ರೆಕಾರ್ಡ್‌’ನಲ್ಲಿ ಇವರ ಸಾಧನೆ ದಾಖಲಾಗಿದೆ. ಇವರ ಸಾಹಸ ಕ್ರೀಡೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಮುಡಿಗೇರಿವೆ.

ಬೈಕ್‌ಗೆ ನಾಡದೇವಿ ಭುವನೇಶ್ವರಿ ದೇವಿ ಭಾವಚಿತ್ರವನ್ನು ಅಳವಡಿಸಿದ್ದಾರೆ. ಅಲ್ಲದೆ, ಬಾಳೆಹೊನ್ನೂರು ರಂಭಾಪುರಿ ಪೀಠದ ಶಿವಸ್ವರೂಪಿ ವೀರಗಂಗಾಧರ ಜಗದ್ಗುರುಗಳ ಭಾವಚಿತ್ರ, ಇಳಕಲ್ಲಿನ ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳ ಭಾವಚಿತ್ರ ಹಾಗೂ ಹಾನಗಲ್ ಕುಮಾರ ಶಿವಯೋಗಿಗಳ ಭಾವಚಿತ್ರ ಹಾಗೂ ತುಮಕೂರು ಸಿದ್ಧಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ, ಗದುಗಿನ ಡಾ. ಪಂ. ಪುಟ್ಟರಾಜ ಗವಾಯಿಗಳು, ವಿಜಯಪರದ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರವನ್ನು ಅಳವಡಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು ಹಾಗೂ ಡಾ.ಪುನೀತ್ ರಾಜಕುಮಾರ್‌ ಅವರ ಭಾವಚಿತ್ರವನ್ನು ಅಂಟಿಸಿಕೊಂಡು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹ್ಯಾಂಡಲ್‌ ಇಲ್ಲದ ಬೈಕ್‌ ಮೇಲೆ ಬಂದಿದ್ದಾರೆ.

ಇದನ್ನು ಓದಿ: ಸಾಹಿತ್ಯ ಸಮ್ಮೇಳನದ ವಸತಿ ವ್ಯವಸ್ಥೆ ಮಾಡಿರುವ ಶಾಲಾ-ಕಾಲೇಜುಗಳಿಗೆ ಜ.4ರಿಂದಲೇ ರಜೆ ಘೋಷಣೆ

ಬಾಗಲಕೋಟೆ ಜಿಲ್ಲೆಯ ಇಳಕಲ್‌ ನಗರದ ನಿವಾಸಿಯಾದ ಕುಂದರಗಿಮಠ ಅವರು ಮೂಲತಃ ಕೃಷಿ ಕುಟುಂಬದವರು. ಪಿಯುಸಿವರೆಗೆ ಓದಿದ್ದಾರೆ. 15ನೇ ವಯಸ್ಸಿನಲ್ಲೇ ಕಾರು ಮತ್ತು ಬೈಕ್‌ ಓಡಿಸುವ ಹವ್ಯಾಸ ರೂಢಿಸಿಕೊಂಡು, ಅದರಲ್ಲೇ ಸಾಹಸ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ. 2008ರಲ್ಲಿ ಬಾಗಲಕೋಟೆಯಿಂದ ಬೆಂಗಳೂರುವರೆಗೆ ಎರಡು ಕೈಗಳನ್ನು ಬಿಟ್ಟು, 500 ಕಿ.ಮೀ. ಬೈಕ್‌ ಓಡಿಸಿ ಸಾಹಸ ಮೆರೆದಿದ್ದಾರೆ. 2009ರಲ್ಲಿ ಬೆಂಗಳೂರಿನಿಂದ ದೆಹಲಿವರೆಗೆ 2500 ಕಿ.ಮೀ. ಅನ್ನು 5 ದಿನಗಳಲ್ಲಿ ತಲುಪಿದ ದಾಖಲೆ ಇವರದ್ದಾಗಿದೆ. ಸದ್ಯ ಹಾವೇರಿಗೆ ಸೇಫ್ ಆಗಿ ಬಂದ ಈರಣ್ಣ ಕನ್ನಡ ನಾಡು ನುಡಿ ಜಾಗೃತಿಯಲ್ಲಿ ತೊಡಗಿದ್ದಾರೆ.

ಇದನ್ನು ಓದಿ: ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಬೊಮ್ಮಾಯಿಗೆ ಆಹ್ವಾನ

Follow Us:
Download App:
  • android
  • ios