Asianet Suvarna News Asianet Suvarna News

'ಬಿಜೆಪಿ - ಜೆಡಿಎಸ್ ಸಖ್ಯ ಹಾಲು ಜೇನು : ಲೋಕಸಭೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು'

ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವುದು ಹಾಲು- ಜೇನು ಬೆರೆತಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

Big win for BJP in Lok Sabha Election Says R Ashok snr
Author
First Published Jan 19, 2024, 11:57 AM IST

 ನಾಗಮಂಗಲ :  ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವುದು ಹಾಲು- ಜೇನು ಬೆರೆತಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಕ್ಕು ದೆಸೆಯಿಲ್ಲದ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕರಿಲ್ಲ. ನಾಯಕತ್ವಕ್ಕಾಗಿ ಕಿತ್ತಾಡಿಕೊಳ್ಳುತ್ತಿರುವ ಆ ಪಕ್ಷಕ್ಕೆ ಒಂದು ಸಿದ್ದಾಂತವಿಲ್ಲ ಎಂದು ಜರಿದರು.

ರಾಜ್ಯದಲ್ಲಿ ಮೋದಿ ಅಲೆಯಿಂದ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿಯೂ ಗೆಲುವು ಸಾಧಿಸಲು ಎಲ್ಲ ತಯಾರಿ ನಡೆಸುತ್ತಿದ್ದೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೇವಲ ಒಂದು ಸ್ಥಾನ ಬಿಟ್ಟು ಕೊಡಲಾಗಿತ್ತು. ಮುಂಬರುವ ಚುನಾವಣೆಯಲ್ಲಿ ಅದನ್ನೂ ಸಹ ಬಿಟ್ಟುಕೊಡುವುದಿಲ್ಲ ಎಂದರು.

ರಾಜ್ಯದ 28 ಸ್ಥಾನಗಳ ಜೊತೆಗೆ ದೇಶದಲ್ಲಿ ನಿರೀಕ್ಷೆಗೂ ಮೀರಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಗೆಲುವಿಗೆ ಸಿದ್ದತೆ ನಡೆಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕಳೆದ ನಾಲ್ಕು ದಿನಗಳ ಹಿಂದೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಚರ್ಚೆ ನಡೆಸಿದ್ದಾರೆ. ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಅವರೂ ಸಹ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು.

ಹಿಂದೂ ಧರ್ಮವನ್ನು ಹೀಯಾಳಿಸುವ ಕಾಂಗ್ರೆಸ್ ಪಕ್ಷದ ನಾಯಕರು ಶ್ರೀರಾಮನ ಜನನ ಪ್ರಮಾಣ ಪತ್ರ ಕೇಳುವುದು, ಅಯೋಧ್ಯೆಯ ಶ್ರೀರಾಮನನ್ನು ವಿಗ್ರಹವನ್ನು ಒಂದು ಬೊಂಬೆಗೆ ಹೋಲಿಸುವ ಮೂಲಕ ಹಿರಣ್ಯ ಕಶ್ಯಪನಂತೆ ಮಾತನಾಡುತ್ತಿದ್ದಾರೆ. ಕಾಮಾಲೆ ಕಣ್ಣಿನ ಈ ನಾಯಕರಿಗೆ ಎಂದು ಬುದ್ದಿ ಬರುತ್ತದೋ ಗೊತ್ತಿಲ್ಲ ಎಂದು ಕಿಡಿಕಾರಿದರು.

ಈ ಹಿಂದೆ ಗುಜರಾತ್‌ನಲ್ಲಿ ಸೋಮನಾಥ ದೇವಾಲಯದ ಉದ್ಘಾಟನೆಗೆ ಜವಹರ್‌ಲಾಲ್ ನೆಹರು ಬಂದಿರಲಿಲ್ಲ. ಕಾಂಗ್ರೆಸ್ಸಿಗರ ರಕ್ತದ ಕಣ ಕಣದಲ್ಲಿಯೂ ಹಿಂದೂ ವಿರೋಧಿತನವೇ ಹರಿಯುತ್ತಿದೆ. ವಿನಾಕಾರಣ ಹಿಂದೂಗಳನ್ನು ದಮನ ಮಾಡುವುದು, ಕರ ಸೇವಕರನ್ನು ಬಂಧಿಸುವುದು ನಡೆಯುತ್ತಿದೆ ಎಂದು ದೂರಿದರು.

ಪ್ರಕರಣ ದಾಖಲಿಸುವ ಅವರಿಗೆ ಸಾಮಾನ್ಯ ಜ್ಞಾನವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ. ಸದನದಲ್ಲಿ ಪ್ರತಿಭಟಿಸುವ ವಿಪಕ್ಷ ನಾಯಕನೊಬ್ಬನ ಮೇಲೆ ಕೇಸ್ ಹಾಕಲು ನಾಚಿಕೆಯಾಗುವುದಿಲ್ಲವೇ ಎಂದು ಹರಿಹಾಯ್ದ ಅವರು, ಕಾಂಗ್ರೆಸ್‌ನವರು ಪ್ರಜಾಪ್ರಭುತ್ವದ ವಿರೋಧಿಗಳು ಎಂದು ಗುಡುಗಿದರು.

ತುರ್ತು ಪರಿಸ್ಥಿತಿಯನ್ನು ತಂದು ದೇಶವನ್ನು ಹಾಳು ಮಾಡಿದ ಕಾಂಗ್ರೆಸ್ಸಿಗರು ಶ್ರೀರಾಮನಿಗೆ ಅಪಮಾನ ಮಾಡುತ್ತಿದ್ದಾರೆ. ಇತಿಹಾಸದಲ್ಲಿ ರಾಮನ ಬಾಣ ಎಂದಿಗೂ ಗುರಿ ತಪ್ಪಿಲ್ಲ. ರಾಮಭಕ್ತ ಹನುಮಂತ ಹುಟ್ಟಿದ ನಾಡಿನಿಂದಲೇ ಶ್ರೀರಾಮನ ವಿಗ್ರಹಮೂರ್ತಿಯ ಕಲ್ಲು ಅಯೋಧ್ಯೆಗೆ ಹೋಗಿದೆ. ಇಷ್ಟಾದರೂ ಇವರಿಗೆ ಬುದ್ದಿ ಬಂದಿಲ್ಲವೆಂದರೆ ಈ ಜನ್ಮದಲ್ಲಿ ಕಾಂಗ್ರೆಸ್ ದೇಶದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀರಾಮನನ್ನು ಕೆಣಕಿರುವ ಇವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರೇ ತಕ್ಕ ಪಾಠ ಕಲಿಸುತ್ತಾರೆಂದು ಕೈ ಪಕ್ಷದ ವಿರುದ್ಧ ಕಿಡಿಕಾರಿದರು.

Latest Videos
Follow Us:
Download App:
  • android
  • ios