ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್‌ ನಿರಾಳ| ಉಳಿದೆರಡು ಪಕ್ಷದಲ್ಲಿ ತೀವ್ರ ಗೊಂದಲ| ಬಿಜೆಪಿ ಟಿಕೆಟ್‌ ಡಿಸಿಎಂ ಲಕ್ಷ್ಮಣ ಸವದಿಗೋ? ಮಾಜಿ ಶಾಸಕ ರಮೇಶ ಭೂಸನೂರಗೋ?| 

ರುದ್ರಪ್ಪ ಆಸಂಗಿ 

ವಿಜಯಪುರ(ಮಾ.26): ಜೆಡಿಎಸ್‌ ಮಾಜಿ ಸಚಿವ ಎಂ.ಸಿ.ಮನಗೂಳಿ ನಿಧನದಿಂದ ತೆರವಾಗಿದ್ದ ಸಿಂದಗಿ ವಿಧಾನಸಭೆ ಉಪಚುನಾವಣೆ ದಿನಾಂಕವನ್ನು ಚುನಾವಣೆ ಆಯೋಗ ನಿಗದಿಪಡಿಸದಿದ್ದರೂ ರಾಜಕೀಯ ಚಟುವಟಿಕೆಗಳು ಮಾತ್ರ ಚುರುಕುಗೊಂಡಿವೆ. ಕಾಂಗ್ರೆಸ್‌ನಲ್ಲಿ ಅಶೋಕ ಮನಗೂಳಿ ಅಂತಿಮವಾಗಿದೆ. ಆದರೆ ಜೆಡಿಎಸ್‌ನಲ್ಲಿ ರವಿಕಾಂತ ಪಾಟೀಲ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು ನಡೆಯುತ್ತಿದೆ.

ಕಾಂಗ್ರೆಸಿನಲ್ಲಿ ಟಿಕೆಟ್‌ ಆಕಾಂಕ್ಷಿಗಳ ದೊಡ್ಡಪಟ್ಟಿಯೇ ಇತ್ತು. ಟಿಕೆಟ್‌ ಫೈನಲ್‌ ಮಾಡುವ ಸವಾಲು ದೊಡ್ಡದಾಗಿತ್ತು. ಆದರೆ ಮಾಜಿ ಸಚಿವ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದಲ್ಲದೆ, ಕಾಂಗ್ರೆಸ್‌ ಟಿಕೆಟ್‌ ಅನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿ ಯಾರೂ ಇಲ್ಲ ಎನ್ನುತ್ತಿರುವಾಗಲೇ ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲರು ಸಿಂದಗಿಯಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಜೆಡಿಎಸ್‌ ಸೇರಿ ಸಿಂದಗಿ ಉಪ ಚುನಾವಣೆ ರಂಗ ಪ್ರವೇಶ ಮಾಡುವ ಮೂಲಕ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ. ಹಾಗಾಗಿ ಜೆಡಿಎಸ್‌ಗೆ ರವಿಕಾಂತ ಪಾಟೀಲ ಅವರಿಗಿಂತಲೂ ಪ್ರಬಲ ಅಭ್ಯರ್ಥಿ ಇಲ್ಲ ಎಂದೇ ಹೇಳಲಾಗುತ್ತಿದೆ. ಜೆಡಿಎಸ್‌ ಪಕ್ಷ ರವಿಕಾಂತ ಪಾಟೀಲ ಅವರಿಗೇ ಟಿಕೆಟ್‌ ಫೈನಲ್‌ ಮಾಡುವುದರಲ್ಲಿ ಎರಡೂ ಮಾತಿಲ್ಲ. ಇದರಿಂದಾಗಿ ಕಾಂಗ್ರೆಸ್‌, ಜೆಡಿಎಸ್‌ ಪಕ್ಷದಲ್ಲಿ ಟಿಕೆಟ್‌ ಟೆನ್ಷನ್‌ ಇಲ್ಲವೆಂದೇ ಹೇಳಬೇಕು.

ಬಿಜೆಪಿಯಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಸಿದ್ದನಗೌಡ ಬಿರಾದಾರ ಅಡಕಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಮುತ್ತು ಶಾಬಾದಿ ಮತ್ತಿತರ ಪ್ರಮುಖರ ಹೆಸರುಗಳು ಕೇಳಿ ಬರುತ್ತಿವೆ. ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿದೊಡ್ಡದಿದೆ. ಅಭ್ಯರ್ಥಿಗಳ ಲಾಬಿ ಹೆಚ್ಚಾಗಿದೆ ಎಂಬ ಕಾರಣಕ್ಕೆ ಟಿಕೆಟ್‌ ಫೈನಲ್‌ ಆಗಿಲ್ಲ ಎಂದು ಹೇಳುವಂತಿಲ್ಲ. ಅದಕ್ಕೆ ಬೇರೆ ಕಾರಣವೇ ಇದೆ. ಕಾಂಗ್ರೆಸ್‌, ಜೆಡಿಎಸ್‌ ಪಕ್ಷ ಯಾವ ಅಭ್ಯರ್ಥಿಗಳನ್ನು ಹಾಕುತ್ತಾರೆಯೋ ಕಾದು ನೋಡಿ ಆನಂತರ ಎರಡೂ ಪಕ್ಷಗಳಿಗಿಂತ ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ರಣತಂತ್ರ ಹೆಣೆದಿದೆ. ಹಾಗಾಗಿ ಬಿಜೆಪಿಯಲ್ಲಿ ಇನ್ನೂ ಟಿಕೆಟ್‌ ಲಾಬಿ ಮುಂದುವರಿದಿದೆ.

ಡಿಕೆಶಿ ಜತೆ ಮಾತುಕತೆ ನಡೆಸಿದ್ದ ಮಾಜಿ ಶಾಸಕ ದಿಢೀರ್ ಜೆಡಿಎಸ್‌ ಸೇರ್ಪಡೆ !

ಮಾಜಿ ಶಾಸಕ ರಮೇಶ ಭೂಸನೂರ ಅವರು ಕಳೆದ ಎರಡು ಬಾರಿ ಚುನಾವಣೆ ಗೆಲುವ ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ಈಗ ಮತ್ತೆ ಅವರು ಮೂರನೇ ಬಾರಿಗೆ ಟಿಕೆಟ್‌ ಕೇಳುತ್ತಿದ್ದಾರೆ. ಪಕ್ಷದಲ್ಲಿ ಟಿಕೆಟ್‌ ಹಂಚಿಕೆ ಮೊದಲ ಸ್ತರದಲ್ಲಿ ರಮೇಶ ಭೂಸನೂರ ಇದ್ದಾರೆ ಎಂದು ಹೇಳಬಹುದು. ಆದರೆ ಕೊನೆಯ ಗಳಿಗೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರ ಹೆಸರೂ ಕೇಳಿ ಬರುತ್ತಿದೆ. ಲಕ್ಷ್ಮಣ ಸವದಿ ಅವರು ಸಿಂದಗಿ ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲು ಆಸಕ್ತಿ ಹೊಂದಿಲ್ಲ ಎಂದು ಹೇಳುತ್ತಿದ್ದರೂ ಕ್ಷಿಪ್ರ ರಾಜಕೀಯ ಬೆಳಣಿಗೆಯಲ್ಲಿ ಹೈಕಮಾಂಡ್‌ ಲಕ್ಷ್ಮಣ ಸವದಿಗೆ ಸ್ಪರ್ಧಿಸಲು ಸೂಚಿಸಿದರೆ ಅವರೇ ಫೈನಲ್‌ ಅಭ್ಯರ್ಥಿ ಆಗುವುದರಲ್ಲಿ ನೋ ಡೌಟ್‌.

ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಇಂಡಿ ಕ್ಷೇತ್ರದಿಂದ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ನಂತರ ಬಿಜೆಪಿ ಸೇರಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಪ್ತ ಬಳಗದಲ್ಲಿ ರವಿಕಾಂತ ಪಾಟೀಲ ಗುರುತಿಸಿಕೊಂಡಿದ್ದರು. 2018ರಲ್ಲಿ ಬಿಜೆಪಿಯಿಂದ ಇಂಡಿ ಕ್ಷೇತ್ರಕ್ಕೆ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ಸಿಗದೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಹಾಗಾಗಿ ಜೆಡಿಎಸ್‌ ಪ್ರಬಲ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಪೈಪೋಟಿ ನೀಡುವ ಸಾಧ್ಯತೆ ಇದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ: ಕಾರಜೋಳ

ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ, ಜೆಡಿಎಸ್‌ನ ಟಿಕೆಟ್‌ ಆಕಾಂಕ್ಷಿ ರವಿಕಾಂತ ಪಾಟೀಲ ಅವರು ಪಂಚಮಸಾಲಿ ಸಮಾಜಕ್ಕೆ ಸೇರಿದ್ದಾರೆ. ಕ್ಷೇತ್ರ ಪುನರ್‌ ವಿಂಗಡಣೆ ಸಂದಭÜರ್‍ದಲ್ಲಿ ಇಂಡಿ 40 ಹಳ್ಳಿಗಳು ಸಿಂದಗಿ ಮತ ಕ್ಷೇತ್ರಕ್ಕೆ ಬಂದಿವೆ. ಹಾಗಾಗಿ ರವಿಕಾಂತ ಪಾಟೀಲ ಅವರು ಗೆಲ್ಲುವ ಇರಾದೆ ಇಟ್ಟುಕೊಂಡು ಜೆಡಿಎಸ್‌ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಮಾಜಿ ಸಚಿವ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರನ್ನು ಸಿಂದಗಿ ಉಪ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇನ್ನು ಚುನಾವಣೆ ದಿನಾಂಕ ಪ್ರಕಟವಾದ ನಂತರ ಬಿ ಫಾಮ್‌ರ್‍ ನೀಡುವುದಷ್ಟೇ ಬಾಕಿ. ಕಾಂಗ್ರೆಸ್‌ ಪಕ್ಷಕ್ಕೆ ನಿಶ್ಚಿತ ಗೆಲುವು ದೊರೆಯಲಿದೆ ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್‌ ರಾಜು ಆಲಗೂರ, ಅಧ್ಯಕ್ಷ ತಿಳಿಸಿದ್ದಾರೆ.

ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ರವಾನಿಸಲಾಗಿದೆ. ಪಕ್ಷದ ವರಿಷ್ಠರು ಸಿಂದಗಿ ಉಪ ಚುನಾವಣೆಗೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬುವುದನ್ನು ತೂಗಿ, ಅಳೆದು ನಿರ್ಧರಿಸಲಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಶೀಘ್ರದಲ್ಲಿಯೇ ಅಭ್ಯರ್ಥಿ ಫೈನಲ್‌ ಮಾಡಲಾಗುವುದು ಎಂದು ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಹೇಳಿದ್ದಾರೆ.