ಡಿಕೆಶಿ ಜತೆ ಮಾತುಕತೆ ನಡೆಸಿದ್ದ ಮಾಜಿ ಶಾಸಕ ದಿಢೀರ್ ಜೆಡಿಎಸ್ ಸೇರ್ಪಡೆ !
ಕಾಂಗ್ರೆಸ್ ಸೇರಲು ನಿರ್ಧರಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿ ಚರ್ಚಿಸಿದ್ದ ಮಾಜಿ ಶಾಸಕ ರವಿಕಾಂತ ಪಾಟೀಲ್ ಇದೀಗ ವರಸೆ ಬದಲಿಸಿದ್ದಾರೆ.
ವಿಜಯಪುರ, (ಮಾ.24): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇಂಡಿ ಕ್ಷೇತ್ರದ ಮಾಜಿ ಶಾಸಕ ರವಿಕಾಂತ ಪಾಟೀಲ್ ಅವರು ಜೆಡಿಎಸ್ ಸೇರ್ಪಡೆ ಆಗಿದ್ದಾರೆ.
ಇಂದು (ಬುಧವಾರ) ಸಿಂದಗಿ ಪಟ್ಟಣದಲ್ಲಿ ಜರುಗಿದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರಿಂದ ಪಕ್ಷದ ಧ್ವಜ ಸ್ವೀಕಾರ ಮಾಡುವ ಮೂಲಕ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಜೊತೆಗೆ ಸಿಂದಗಿ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗುವ ಎಲ್ಲಾ ಸಾಧ್ಯತೆಗಳಿವೆ.
ಸಿಂಧಗಿ ಬೈ ಎಲೆಕ್ಷನ್: ಮನಗೂಳಿ ಸಾವಿನ ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್
ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವ ಬಗ್ಗೆ ಯೋಚಿಸಿದ್ದ ರವಿಕಾಂತ ಪಾಟೀಲ್, ಫೆ.24 ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಬೇಷರತ್ತಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದಾಗಿಯೂ ತಿಳಿಸಿದ್ದರು.
ಆದ್ರೆ, ಮಾಜಿ ಸಚಿವ ಮನಗೂಳಿ ಅವರ ಪುತ್ರ ಅಶೋಕ್ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದರು. ಅಲ್ಲದೇ ಅಶೋಕ್ ಅವರಿಗೆ ಕಾಂಗ್ರೆಸ್ ಟಿಕೆಟ್ ಫಿಕ್ಸ್ ಎನ್ನುವ ಸುದ್ದಿ ಕ್ಷೇತ್ರದಲ್ಲಿ ಹರಿದಾಡಿದೆ. ಈ ಹಿನ್ನೆಲೆಯಲ್ಲಿ ರವಿಕಾಂತ ಪಾಟೀಲ್ ಅವರು ದಿಢೀರನೇ ಹೊರೆ ಹೊತ್ತ ಮಹಿಳೆಯ ಪಕ್ಷಕ್ಕೆ ಸೇರ್ಪಡೆಯಾದರು.
ರವಿಕಾಂತ ಅವರು ಇಂಡಿ ಕ್ಷೇತ್ರದಿಂದ ಪಕ್ಷೇತರನಾಗಿ ಮೂರು ಬಾರಿ ಶಾಸಕರಾಗಿದ್ದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದರು. ನಂತರ ಬಿಜೆಪಿಗೆ ಸೇರಿದ್ದರು. 2018ರಲ್ಲಿ ಇಂಡಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಬೇಕೆಂಬ ಆಕಾಂಕ್ಷೆ ಹೊಂದಿದ್ದರು. ಆದರೆ ಟಿಕೆಟ್ ಸಿಕ್ಕಿರಲಿಲ್ಲ. ಅದಾದ ನಂತರ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿ ಸೋತಿದ್ದರು.