ಬೀದರ್: ರೋಗಿಗಳ ಸಾವಿನ ಮೂಲ ಕೋವಿಡ್ ಸೋಂಕಿಲ್ಲ, ತನಿಖೆಗೆ ಡಿಸಿ ಆದೇಶ
11 ಜನರ ಸಾವಿನ ತನಿಖೆಯಲ್ಲಿ ದೃಢ| ಬೀದರ್‌ನಲ್ಲಿ ಸಾವಿನ ಮೂಲ ತನಿಖೆಗೆ ತಜ್ಞರಿಗೆ ಜಿಲ್ಲಾಧಿಕಾರಿ ಆದೇಶ| ಸಾವನ್ನಪ್ಪಿದವರ ಪೈಕಿ 11 ಜನರಲ್ಲಿ ಕೊರೋನಾ ಸೋಂಕು ಸಾವಿಗೆ ಕಾರಣವಾಗಿಲ್ಲ ಎಂಬುವದು ದೃಢ|
ಅಪ್ಪಾರಾವ್ ಸೌದಿ
ಬೀದರ್(ಜು.13): ಸರಣಿ ಸಾವಿನ ಮೂಲಕ ದೇಶದ ಗಮನ ಸೆಳೆಯುತ್ತಿರುವ ಜಿಲ್ಲೆಯಲ್ಲಿ ರೋಗಿಗಳ ಸಾವಿನ ಮೂಲ ಕೋವಿಡ್ ಸೋಂಕಿಲ್ಲ ಎಂಬ ಅಂಶ ಬೆಳಕಿಗೆ ಬಂದಿದ್ದು, ಸಾವಿನ ಮೂಲದ ಬೆನ್ನಟ್ಟಿರುವ ಜಿಲ್ಲಾಡಳಿತ, ಕೋವಿಡ್-19 ಪಾಸಿಟಿವ್ ಹೊಂದಿದ್ದ ಎಲ್ಲ ಸಾವಿನ ಕುರಿತಾಗಿ ತನಿಖೆಗೆ ತಜ್ಞರ ಸಮಿತಿಗೆ ಆದೇಶಿದೆ.
ಕೊರೋನಾ ಸೋಂಕಿತರ ಸಂಖ್ಯೆ ಸಾವಿರದ ಅಂಕಿ ದಾಟಿ ರಾಜ್ಯದ 8ನೇ ಸ್ಥಾನದಲ್ಲಿದ್ದರೂ, ಜಿಲ್ಲೆಯ ಆಸ್ಪತ್ರೆಯಲ್ಲಿ ದಾಖಲಾಗಿ ಸಾವನ್ನಪ್ಪಿದ 53 ಜನ ರೋಗಿಗಳಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿ ದೇಶದ ಅಪಾಯಕಾರಿ ಜಿಲ್ಲೆಯ ಪಟ್ಟಿಯನ್ನು ಸೇರಿಕೊಂಡಿತ್ತು.
ರೋಗಿಗಳನ್ನು ಸಾಗಿಸಲೂ ಹಿಂದೇಟು:
ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ, ಜಿಲ್ಲಾ ಆಸ್ಪತ್ರೆಗೆ ಸಾಗಿಸಿದಾಗಲೇ ಸಾವನ್ನಪ್ಪಿದ ಕೆಲವರ ರಕ್ತ ಹಾಗೂ ಗಂಟಲು ಮಾದರಿ ತಪಾಸಣೆ ವರದಿಗಳ ಪ್ರಕಾರ ಅವರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಮಾರಣ ಹೋಮ ನಡೆದಿದೆ, ಕೊರೋನಾ ಜಿಲ್ಲೆಯನ್ನು ಬೆಂಬಿಡದೇ ಕಾಡುತ್ತಿದೆ ಎಂಬ ಆತಂಕ ಜನರಲ್ಲಿ ಸುತ್ತಿಕೊಂಡಿದೆ. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲೂ ಹಿಂದೇಟು ಹಾಕುತ್ತಿರುವಂಥ ಸನ್ನಿವೇಶ ನಿರ್ಮಾಣವಾಗಿದೆ.
ದೇಶದ 32 ಜಿಲ್ಲೆಗಳಲ್ಲಿ ಹೆಚ್ಚು ಕೊರೋನಾ ಮರಣ ಮೃದಂಗ: ಪಟ್ಟಿಯಲ್ಲಿ ಕರ್ನಾಟಕದ 2 ಜಿಲ್ಲೆಗಳು
ಹೆಚ್ಚು ಕೋವಿಡ್ ಸೋಂಕಿತರ ಸಾವಿನ ಪ್ರಕರಣಗಳನ್ನ ಎದುರಿಸುತ್ತಿರುವ ಜಿಲ್ಲೆಯ ಪಟ್ಟಿಯಲ್ಲಿ ಸ್ಥಾನ ಪಡೆದ ಮೇಲೆ ಜಿಲ್ಲೆಯ ಬಗ್ಗೆ ಭಾರಿ ಚರ್ಚೆಗಳು ಆರಂಭವಾಗಿವೆ. ಅಷ್ಟಕ್ಕೂ ಸಾವನ್ನಪ್ಪಿದವರಲ್ಲಿ ಕೊರೋನಾ ಇದ್ದರೂ, ಇದೇ ಸಾವಿಗೆ ಕಾರಣವಲ್ಲ ಎಂಬ ಅಂಶ 11 ರೋಗಿಗಳ ತಪಾಸಣೆ ತನಿಖೆಯಿಂದ ಬೆಳಕಿಗೆ ಬಂದಾಗಿದೆ.
ವರದಿಗೆ ಡಿಸಿ ಸೂಚನೆ:
ಜಿಲ್ಲೆಯಲ್ಲಿ ಸಾವನ್ನಪ್ಪಿರುವ, ಅವರಲ್ಲಿ ಕೋವಿಡ್-19 ಪಾಸಿಟಿವ್ ಬಂದಿರುವ ಅಂಶಗಳ ಕುರಿತಾಗಿ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಸಂಪೂರ್ಣ ಮಾಹಿತಿ ಕಲೆಹಾಕಿ ವರದಿ ಸಲ್ಲಿಸುವಂತೆ ತಜ್ಞರ ಸಮಿತಿಗೆ ಸೂಚನೆ ನೀಡಿದ್ದಾರೆ. ಮಹಾಮಾರಿ ಸಾವಿಗೆ ಪ್ರಮುಖ ಕಾರಣವಾಗಿದೆ ಎಂಬಂಶವನ್ನು ಹೊಡೆದು ಹಾಕಿ ಜಿಲ್ಲೆಯ ಜನರಲ್ಲಿ ಅಭಯ ಮೂಡಿಸುವ ಯತ್ನಕ್ಕೆ ಮುಂದಾಗಿದೆ. ಇಂಥದ್ದೊಂದು ಪ್ರಯತ್ನ, ನಿರ್ಧಾರ ಜಿಲ್ಲೆಯ ಜನರಷ್ಟೇ ಅಲ್ಲ ಹೊರ ಜಿಲ್ಲೆ, ಹೊರ ರಾಜ್ಯದವರಿಗೂ ಗಡಿ ಜಿಲ್ಲೆಯಾದ ಬೀದರ್ ಬಗೆಗಿನ ಭಯ ಹೋಗಲಾಡಿಸುವಲ್ಲಿ ಸಫಲವಾಗುವದರಲ್ಲಿ ಅನುಮಾನವಿಲ್ಲ.
ಬೀದರ್ ಜಿಲ್ಲೆಯಲ್ಲಿ ಕೋವಿಡ್-19 ಸೋಂಕುಳ್ಳುವರ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದು ತಪ್ಪು. ಸೋಂಕು ಅವರ ಸಾವಿಗೆ ಪ್ರಮುಖ ಕಾರಣವಾಗಿಲ್ಲ. ಸಾವನ್ನಪ್ಪಿದವರ ಪೈಕಿ 11 ಜನರಲ್ಲಿ ಸೋಂಕು ಸಾವಿಗೆ ಕಾರಣವಾಗಿಲ್ಲ ಎಂಬುವದು ದೃಢಪಟ್ಟಿದೆ. ಇನ್ನುಳಿದವರ ಸಾವಿನ ಕಾರಣಗಳನ್ನು ಅರಿಯಲು ತಜ್ಞರ ಸಮಿತಿಗೆ ಆದೇಶ ನೀಡಿದ್ದೇನೆ ಎಂದು ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ತಿಳಿಸಿದ್ದಾರೆ.