ಬೀದರ್ ಜಿಲ್ಲೆ ಹುಮನಾಬಾದ್ ಬಳಿ ಬೈಕ್ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ, ನೆಂಟರ ಮನೆಯಿಂದ ವಾಪಸಾಗುತ್ತಿದ್ದ ಒಂದೇ ಕುಟುಂಬದ ಪತಿ, ಪತ್ನಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ ಮತ್ತೊಬ್ಬ ಬಾಲಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬೀದರ್ (ಫೆ.08): ಸಂತೋಷದಿಂದ ನೆಂಟರ ಮನೆಗೆ ಹೋಗಿ, ನಗುನಗುತ್ತಾ ವಾಪಸಾಗುತ್ತಿದ್ದ ಕುಟುಂಬವೊಂದಕ್ಕೆ ವಿಧಿ ಮರಣ ಶಾಸನ ಬರೆದಿದೆ. ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಸೇತುವೆಗೆ (ಬ್ರಿಡ್ಜ್) ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಪತಿ, ಪತ್ನಿ ಹಾಗೂ ಮಗಳು ಸಾವನ್ನಪ್ಪಿದ ದಾರುಣ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಬಳಿ ನಡೆದಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಗ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಘಟನೆಯ ವಿವರ:

ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ನಿವಾಸಿಗಳಾದ ವೆಂಕಟ್ ಕರಟ್ಮಲ್ (40), ಅವರ ಪತ್ನಿ ಶಿಲ್ಪಾ (35) ಮತ್ತು ಮಗಳು ರಕ್ಷಿತಾ (12) ಮೃತ ದುರ್ದೈವಿಗಳು. ಇವರೊಂದಿಗೆ ಬೈಕ್‌ನಲ್ಲಿದ್ದ ಮಗ ದಿಗಂಬರ್ (15) ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಗಂಭೀರ ಸ್ಥಿತಿಯಲ್ಲಿದ್ದಾನೆ.

ನೆಂಟರ ಮನೆಗೆ ಹೋಗಿ ಬರುವಾಗ ದುರಂತ

ವೆಂಕಟ್ ಕರಟ್ಮಲ್ ಅವರು ತಮ್ಮ ಕುಟುಂಬದೊಂದಿಗೆ (ಪತ್ನಿ ಮತ್ತು ಇಬ್ಬರು ಮಕ್ಕಳ ಸಮೇತ) ಒಂದೇ ಬೈಕ್‌ನಲ್ಲಿ ಬೀದರ್‌ಗೆ ತೆರಳಿದ್ದರು. ಬೀದರ್‌ನಲ್ಲಿದ್ದ ತಮ್ಮ ಸೋದರ ಅಳಿಯನ ಮಗಳನ್ನು ನೋಡಲೆಂದು ಇಡೀ ಕುಟುಂಬ ಅಲ್ಲಿಗೆ ಹೋಗಿತ್ತು. ಮಗುವನ್ನು ಮಾತನಾಡಿಸಿ, ಸಂಬಂಧಿಕರೊಂದಿಗೆ ಕಾಲ ಕಳೆದು ಭಾನುವಾರ ವಾಪಸ್ ತಮ್ಮ ಊರಾದ ರಾಜೇಶ್ವರ ಗ್ರಾಮಕ್ಕೆ ಮರಳುತ್ತಿದ್ದರು. ಆದರೆ, ಹುಮನಾಬಾದ್ ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದ ನಾಗಣ್ಣ ಕ್ರಾಸ್ ಬಳಿ ಬರುತ್ತಿದ್ದಂತೆ ಬೈಕ್ ಚಾಲಕನ ನಿಯಂತ್ರಣ ತಪ್ಪಿದೆ. ಅತಿಯಾದ ವೇಗವೋ ಅಥವಾ ನಿಯಂತ್ರಣ ದೋಷವೋ ತಿಳಿಯದು, ಬೈಕ್ ನೇರವಾಗಿ ರಸ್ತೆ ಪಕ್ಕದಲ್ಲಿದ್ದ ಬ್ರಿಡ್ಜ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಸ್ಥಳದಲ್ಲೇ ಪ್ರಾಣಬಿಟ್ಟ ಮೂವರು

ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ನಾಲ್ವರೂ ಕೆಳಗೆ ಬಿದ್ದಿದ್ದಾರೆ. ತಲೆಗೆ ಮತ್ತು ಎದೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ವೆಂಕಟ್, ಶಿಲ್ಪಾ ಮತ್ತು ಬಾಲಕಿ ರಕ್ಷಿತಾ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಒಂದೇ ಕುಟುಂಬದ ಮೂವರ ಸಾವು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಬೈಕ್‌ನಲ್ಲಿದ್ದ 15 ವರ್ಷದ ಬಾಲಕ ದಿಗಂಬರ್ ತಲೆಗೆ ಗಂಭೀರ ಗಾಯವಾಗಿದ್ದು, ಆತನನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಬೀದರ್‌ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕುಟುಂಬಸ್ಥರ ಆಕ್ರಂದನ

ವಿಷಯ ತಿಳಿದು ಮೃತರ ಸಂಬಂಧಿಕರು ಆಸ್ಪತ್ರೆಗೆ ದೌಡಾಯಿಸಿದ್ದು, ಬ್ರಿಮ್ಸ್ ಆಸ್ಪತ್ರೆ ಮತ್ತು ಹಳ್ಳಿಖೇಡ ಆಸ್ಪತ್ರೆಯ ಶವಾಗಾರದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದದ್ದು ಕೂಡ ಅಪಘಾತದ ತೀವ್ರತೆ ಹೆಚ್ಚಲು ಮತ್ತು ನಿಯಂತ್ರಣ ತಪ್ಪಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಹಳ್ಳಿಖೇಡ(ಬಿ) ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹಳ್ಳಿಖೇಡ್(ಬಿ) ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಹಳ್ಳಿಖೇಡ(ಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕ್ಷಣಾರ್ಧದಲ್ಲಿ ನಗುತ್ತಿದ್ದ ಕುಟುಂಬವೊಂದು ಸ್ಮಶಾನ ಸೇರಿದಂತಾಗಿದ್ದು, ರಾಜೇಶ್ವರ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.