ಅಪ್ಪಾರಾವ್ ಸೌದಿ 

ಬೀದರ್(ಜ.25): ಜಿಲ್ಲೆಯ ದಶಕದ ಕನಸಾಗಿರುವ ನಾಗರಿಕ ವಿಮಾನ ಯಾನ ಆರಂಭದ ದಿನಾಂಕ ಬಹುತೇಕ ನಿಗದಿಯಾಗಿ ಮುಂದಕ್ಕೆ ಹೋಗಿದೆ. ಜ.26ರ ಬದಲು ಮುಖ್ಯಮಂತ್ರಿಗಳ ಬರುವಿಕೆಗಾಗಿ ಫೆ. 7 ರಂದು ನಿಗದಿ ಮಾಡುವ ಅನಿವಾರ್ಯತೆಗೆ ನೂಕಲ್ಪಟ್ಟಿದ್ದು, ಏನೇಯಾಗಲಿ ಒಂದಷ್ಟು ದಿನ ಆಚೆ ಈಚೆಯಾದರೂ ವಿಮಾನ ಪ್ರಯಾಣ ಗ್ಯಾರಂಟಿ. 

ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನಿಂದ ಗಣ ರಾಜ್ಯೋತ್ಸವದ ದಿನದಂದು ಬೀದರ್‌ಗೆ ನಾಗರಿಕ ವಿಮಾನದಲ್ಲಿ ಆಗಮಿಸುವ ಮೂಲಕ ಚಾಲನೆ ನೀಡುವುದಕ್ಕೆ ದಿನ ನಿಗದಿಯಾಗಿತ್ತಾದರೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹಾಗೂ ಸಂಸದ ಭಗವಂತ ಖೂಬಾ ಅವರು ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿಸಿದ್ದಾರಾದರೆ ಅಂದು ಬಿಎಸ್‌ವೈ ಅವರ ಬಿಡುವಿಲ್ಲದ ಕಾರ್ಯ ಒತ್ತಡಗಳಿಂದಾಗಿ ವಿಮಾನಯಾನ ಕಾರ್ಯಾರಂಭ ಹತ್ತು ದಿನಗಳು ಮಾತ್ರ ಮುಂದಕ್ಕೆ ಹೋದಂತಾಗಿದೆ. 

ಸಿಎಂ ಸಮ್ಮುಖದಲ್ಲಿ ವಿಮಾನಯಾನ ಆರಂಭಿಸುವುದು ಸರ್ಕಾರದ ಪಾಲುದಾರ ಜನಪ್ರತಿನಿಧಿಗಳಿಗೆ ಪ್ರತಿಷ್ಠೆಯ ಸವಾಲು ಅಷ್ಟೇ ಅಲ್ಲ, ದಶಕದಿಂದ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣಕ್ಕೆ ಅಗತ್ಯ ಅನುದಾನ, ಮೂಲಸೌಲಭ್ಯ ಕಲ್ಪಿಸುವುದರೊಂದಿಗೆ ಕಗ್ಗಂಟಾಗಿದ್ದ ಜಿಎಂಆರ್ ಒಪ್ಪಂದ ಬದಲಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿರುವ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳ ಹೆಗ್ಗಳಿಕೆಯ ಬತ್ತಳಿಕೆಗೆ ಇದೊಂದು ಪ್ಲಸ್ ಪಾಯಿಂಟ್. 
ಈ ಕುರಿತಂತೆ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಜೊತೆ ಮಾತನಾಡಿ, ಸ್ಪಷ್ಟನೆ ನೀಡಿದ್ದು, ಜ.26 ಗಣರಾಜ್ಯೋತ್ಸವದ ನಿಮಿತ್ತ ಮುಖ್ಯಮಂತ್ರಿಗಳಿಗೆ ಬಹಳ ಒತ್ತಡವಿದೆ. ಅವರು ಅಂದು ಜಿಲ್ಲೆಗೆ ಆಗಮಿಸಿದರೆ ಮತ್ತೊಮ್ಮೆ ಫೆ.7 ರಂದು ನಿಗದಿ ಯಾಗಿರುವಕ ಆಗಮಿಸುವುದಿದೆ. ಇದು ಕಷ್ಟದ ವಿಚಾರ. ಹೀಗಾಗಿ ಅವರು ದಿನಾಂಕವನ್ನ ಕೊಂಚ ಮುಂದೂಡುವಂತೆ ಸೂಚಿಸಿದ್ದು ಅದರಂತೆ ಎಲ್ಲವೂ ನಡೆಯೋದು ಗ್ಯಾರಂಟಿ ಎಂದರು. 

ಬೀದರ್‌ ವಿಮಾನ ಯಾನದ ಕನಸು ನನಸು: ಬಸ್‌ಗಿಂತ ಫ್ಲೈಟ್‌ ದರ ಅಗ್ಗ!

ನಾಗರಿಕ ವಿಮಾನಯಾನಕ್ಕಾಗಿ ಅಗತ್ಯ ಸೌಲಭ್ಯ ಕಲ್ಪಿಸುವುದಕ್ಕೆ ಸರ್ಕಾರ ಮುತುವರ್ಜಿ ವಹಿಸಿ ಸಹಕರಿಸಿದೆ. ಅನುದಾನ ಬಿಡುಗಡೆ ಮಾಡುವುದಲ್ಲದೆ ಕಟ್ಟಡ ಕಾಮಗಾರಿಯನ್ನೂ ಅತ್ಯಂತ ವೇಗದಲ್ಲಿ ನಡೆಸಿ ಅಂತಿಮ ಹಂತಕ್ಕೆ ತಂದಿದೆ. ಒಂದು ದಶಕಕ್ಕೂ ಹೆಚ್ಚು ದಿನಗಳಿಂದ ಜಿಲ್ಲೆಯ ಜನತೆ ನಾಗರಿಕ ವಿಮಾನಯಾನದ ಕನಸನ್ನು ಹೊತ್ತಿದ್ದಾರೆ. ಅದನ್ನು ನಾವು ನನಸಾಗಿಸುತ್ತಿದ್ದೇವೆ. ನಮ್ಮ ಜವಾಬ್ದಾರಿ ಕೂಡ ಹೌದು ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದರು. 
ಸಂಸದ ಭಗವಂತ ಖೂಬಾ ಈ ಕುರಿತಂತೆ ಅವರೂ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಜೊತೆ ಮಾತನಾಡಿ, ಈ ಮೊದಲು ಜ. 26 ರಂದು ನಾಗರಿಕ ವಿಮಾನಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ನಾನು ಹೇಳಿದ್ದರ ಪರಿಣಾಮವಾಗಿ ಕಾಮಗಾರಿಗಳು, ಸರ್ಕಾರದಲ್ಲಿ ಕಡತ ವಿಲೇವಾರಿ ವೇಗ ಪಡೆಯಿತು. ನಿಗದಿಕ್ಕಿಂತ ಕೆಲವೇ ದಿನಗಳು ಮಾತ್ರ ಮುಂದಕ್ಕೆ ಹೋಗಿದೆ. ದಶಕದ ಕನಸನ್ನು ನನಸು ಮಾಡುವುದು ನಮ್ಮ ಆಧ್ಯತೆಯಾಗಿದೆ ಎಂದು ಖೂಬಾ ತಿಳಿಸಿದರು. 

ಇನ್ನು ಬೀದರ್‌ನಿಂದ ಬೆಂಗಳೂರಿಗೆ ವಿಮಾನ ಯಾನ ಸೇವೆಯನ್ನು ಕಲ್ಪಿಸುತ್ತಿರುವ ಟ್ರೂಜೆಟ್ ವಿಮಾನ ಕಂಪನಿ ಜ. 26 ರಂದು ಕೇವಲ ಒಂದು ದಿನದ ತಾತ್ಕಾಲಿಕ ಹಾರಾಟ ನಡೆಸಿ ಫೆ. 7 ರಿಂದ ನಿರಂತರ ಸೇವೆಗೆ ತನ್ನ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕಿಂಗ್ ಸೇವೆಯನ್ನು ತೋರಿಸಿತ್ತು. ಅದರಂತೆ ಮುಖ್ಯಮಂತ್ರಿಗಳು ಅಂದು ಉದ್ಘಾಟನೆ ಮಾಡಿದ್ದೆಯಾದಲ್ಲಿ ನಂತರದ ದಿನದಿಂದ ನಾಗರಿಕ ವಿಮಾನಯಾನದ ನಿರಂತರ ಸೇವೆ ಜಿಲ್ಲೆಯ ಜನತೆಗೆ ಸಿಗುತ್ತದೆ ಎಂಬುವುದು ಸಹ ಪ್ರಮುಖ ಅಂಶವಾಗಿದೆ.

ಫೆ. 7ರಿಂದ ನಾಗರಿಕ ವಿಮಾನಯಾನಕ್ಕೆ ಚಾಲನೆಯನ್ನು ಮುಖ್ಯಮಂತ್ರಿಗಳು ನೀಡಲಿದ್ದಾರೆ. ನಿಗದಿಯಂತೆ ಜ. 26ಕ್ಕೆ ಕಾರ್ಯಾರಂಭ ಮಾಡಿಸಲು ಸಿಎಂ ಅವರಿಗೆ ಬಿಡುವಿಲ್ಲದ್ದರಿಂದ ಅವರ ಗೈರು ಹಾಜರಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಹಾಗೂ ಮಹತ್ವದ ಯೋಜನೆಯಾದ ವಿಮಾನಯಾನ ಆರಂಭಿಸುವುದಕ್ಕೆ ಜಿಲ್ಲೆಯ ಜನರೂ ಒಪ್ಪಲ್ಲ, ಅದಕ್ಕಾಗಿ ಸಿಎಂ ಅವರ ಸಮ್ಮುಖದಲ್ಲಿ ಇದಕ್ಕೆ ಚಾಲನೆ ನೀಡುತ್ತೇವೆ ಎಂದು ಸಂಸದ ಭಗವಂತ ಖೂಬಾ ಅವರು ತಿಳಿಸಿದ್ದಾರೆ. 

ನಾಗರಿಕ ವಿಮಾನಯಾನ ಆರಂಭಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಸಮಯ ಕೇಳಿದ್ದು ಅವರು ಬರುವ ಫೆಬ್ರವರಿ 7 ರಂದು ಬರುವ ಭರವಸೆ ನೀಡಿದ್ದಾರೆ ಅದರಂತೆ ಅಂದು ನಾಗರಿಕ ವಿಮಾನಯಾನ ಅಧಿಕೃತವಾಗಿ ಆರಂಭವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.