ಬೀದರ್ ವಿಮಾನ ಯಾನದ ಕನಸು ನನಸು: ಬಸ್‌ಗಿಂತ ಫ್ಲೈಟ್ ದರ ಅಗ್ಗ!
ಬೀದರ್‌ನಲ್ಲೀಗ ‘ಗುಬಾರ್’ ದರ್ಬಾರ್: ಆಗಸಕ್ಕೇರಿದ ನಿರೀಕ್ಷೆ| ಸಂಸದರ ಖೂಬಾ ಕೊಟ್ಟ ಮಾತು ಉಳಿಸಲಿದೆ ಸೂಪರ್ ಫಾಸ್ಟ್ ಕಾಮಗಾರಿ ಟ್ರೂ ಜೆಟ್ ಕಂಪನಿ ತನ್ನ 70 ಸೀಟುಗಳುಳ್ಳ ವಿಮಾನ ಹಾರಾಟಕ್ಕೆ ಸಜ್ಜಾಗಿದೆ | ಬಸ್‌ಗಿಂತಲೂ ಅಗ್ಗವಾದ ವಿಮಾನ ಪ್ರಯಾಣ ದರ, ಸಮಯ ಉಳಿತಾಯ|
ಅಪ್ಪಾರಾವ್ ಸೌದಿ
ಬೀದರ್(ಜ.23): ರಾಜ್ಯದಲ್ಲಿ ಮತ್ತೊಂದು ನಾಗರಿಕ ವಿಮಾನಯಾನ ಆರಂಭವಾಗುವುದರೊಂದಿಗೆ ಜಿಲ್ಲೆಯ ಒಂದು ದಶಕದ ಕನಸು ನನಸಾಗುವ ವಾತಾವರಣ ಮೂಡಿದ್ದು, ಸಂಸದರ ಘೋಷಣೆ ಹುಸಿಯಾಗದಿರಲು ಹಗಲು ರಾತ್ರಿ ಎನ್ನದೆ ಕಾಮಗಾರಿ ಸೂಪರ್ ಫಾಸ್ಟ್ ದಾರಿ ಹಿಡಿದಿದ್ದು ವಿಮಾನ ಪ್ರಯಾಣ ಸನ್ನಿಹಿತ ಎಂಬ ಭರವಸೆ ಮೂಡಿಸಿದೆ.
ಬೀದರ್‌ನಲ್ಲೀಗ ‘ಗುಬಾರ್’ದ್ದೇ ದರ್ಬಾರ್ ಆದಂತಾಗಿ ನಿರೀಕ್ಷೆಗಳು ಆಗಸಕ್ಕೇರಿವೆ. ಈಗಾಗಲೇ ಕಳೆದ ಆಗಸ್ಟ್ 15 ರಂದು ನಾಗರಿಕ ವಿಮಾನಯಾನ ಆರಂಭಿಸುವ ಭರವಸೆ ನೀಡಿ ಮತ್ತೊಂದು ದಿನಾಂಕಕ್ಕೆ (ಜ. 26) ಜಾರಿದ್ದ ಸಂಸದ ಖೂಬಾ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಈಡು ಮಾಡಿದ್ದವು. ಅದಲ್ಲದೆ ನಾಗರಿಕ ವಿಮಾನ ಸೇವೆ ಆರಂಭಕ್ಕೆ ಅಗತ್ಯವಿರುವ ಟರ್ಮಿನಲ್ ನಿರ್ಮಾಣ ಒಂದು ಸವಾಲು ಎಂಬಂತಾಗಿದ್ದಕ್ಕೀಗ ಶರವೇಗ ಕಂಡಿದೆ. ಗಣರಾಜ್ಯೋತ್ಸವದ ದಿನ ವಿಮಾನ ಹಾರಾಟಕ್ಕೆ ಭರ್ಪೂರ ತಯಾರಿ ನಡೆದಿದ್ದು ಇನ್ನೇನು ಜನರ ಆಕಾಂಕ್ಷೆಗೆ ದಿನಗಣನೆ ಮಾತ್ರ ಬಾಕಿ ಎಂದೆನ್ನಬಹುದಾಗಿದೆ.
ಜನಪ್ರತಿನಿಧಿಗಳ ಮಾತು ಉಳಿಸಿಕೊಳ್ಳುವ ಧಾವಂತ, ಬೀದರ್‌ಗೆ ವರದಾನ:
ಬೀದರ್‌ನಿಂದ ನಾಗರಿಕ ವಿಮಾನಯಾನ ಆರಂಭಕ್ಕೆ ಹೈದ್ರಾಬಾದ್ ರಾಜೀವಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲುಸ್ತುವಾರಿ ವಹಿಸಿಕೊಂಡಿರುವ ಜಿಎಂಆರ್ ಏರಪೋರ್ಟ್ ಡೆವಲಪರ್ ಕಂಪನಿ ಹಲವು ವರ್ಷಗಳ ಅಡ್ಡಿಯಾಗಿದ್ದೀಗ ಕಳೆದ ತಿಂಗಳಷ್ಟೇ ಹಸಿರು ನಿಶಾನೆ ತೋರಿಸಿದ್ದು ಅದೇ ವೇಗದಲ್ಲಿ ರಾಜ್ಯ ಸರ್ಕಾರವೂ ಅನುದಾನ ಬಿಡುಗಡೆ, ಸದರಿ ಕಂಪನಿಯೊಂದಿಗೆ ಒಡಂಬಡಿಕೆ ಮತ್ತಿತರ ಕಾರ್ಯಗಳನ್ನು ನಡೆಸಿ ಟರ್ಮಿನಲ್‌ಗೆ ಅಗತ್ಯವಿರುವ ಜಮೀನು ಖರೀದಿಗೆ ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದು ಇಂದು ಬೀದರ್‌ಗೆ ವರವಾಗಿ ಪರಿಣಮಿಸಿದೆ ಎಂದೆನ್ನಬಹುದು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೀದರ್‌ನ ವಾಯು ಸೇನಾ ತರಬೇತಿ ಕೇಂದ್ರದ ರನ್ ವೇ ಬಳಸಲು ಈಗಾಗಲೇ ಪರವಾನಿಗೆ ಸಿಕ್ಕಿ ಆಗಿದ್ದು ಸದ್ಯ ಅದರ ಹರ ಭಾಗದಲ್ಲಿ ಟರ್ಮಿನಲ್ ನಿರ್ಮಾಣವಾಗುತ್ತಿದೆ. ಇತ್ತ ಟರ್ಮಿನಲ್ ಕಾಮಗಾರಿ ಭಾರಿ ವೇಗದಿಂದ ನಡೆದಿದ್ದೇ ತಡ ಟ್ರೂಜೆಟ್ ವಿಮಾನಯಾನ ಸಂಸ್ಥೆ ತನ್ನ ವಿಮಾನ ಹಾರಾಟಕ್ಕೆ ಅಧಿಕೃತ ಮೊಹರು ಒತ್ತಿ ಟಿಕೆಟ್‌ಗಳನ್ನು ಮಾರಾಟ ಮಾಡಲಾರಂಭಿಸಿರುವ ಮಾಹಿತಿಯನ್ನು ತನ್ನ ವೆಬ್ ಸೈಟ್‌ನಲ್ಲಿ ಹರಿಬಿಟ್ಟಿದ್ದು ಜಿಲ್ಲೆಯ ಜನರಲ್ಲಿ ಭಾರಿ ಖುಷಿಗೆ ಕಾರಣವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇಡೀ ದಿನದ ಚರ್ಚೆಗೆ ಕಾರಣವಾಗಿದೆ.
ಟ್ರೂ ಜೆಟ್ ಕಂಪನಿ ತನ್ನ 70 ಸೀಟುಗಳುಳ್ಳ ವಿಮಾನ ಹಾರಾಟಕ್ಕೆ ಸಜ್ಜಾಗಿದೆ:
ಟ್ರೂ ಜೆಟ್ ಕಂಪನಿ ತನ್ನ 70 ಸೀಟುಗಳುಳ್ಳ ವಿಮಾನ ಹಾರಾಟಕ್ಕೆ ಮುಂದಾಗಿದ್ದು ಗಣರಾಜ್ಯೋತ್ಸವದ ದಿನದಂದು ಜ. 26ಕ್ಕೆ ಮೊದಲ ವಿಮಾನ ಹಾರಾಟ ಮಾಡಲು ಉದ್ದೇಶಿಸಿದೆ. ಆ ದಿನದ ಎಲ್ಲ ಟಿಕೆಟ್‌ಗಳೂ ಸಂಪೂರ್ಣ ಬುಕ್ ಆಗಿವೆ ಎಂದು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಅಂದು ಬೆಳಿಗ್ಗೆ 11.25 ಕ್ಕೆ ಬೆಂಗಳೂರಿನಿಂದ ಹೊರಟು 1.05 ಕ್ಕೆ ಬೀದರ್ ವಾಯು ಸೇನಾ ತರಬೇತಿ ಕೇಂದ್ರದ ರನ್ ವೇಗೆ ಬಂದಿಳಿಯಲಿದೆ. ಅದೇ ದಿನ ಮಧ್ಯಾಹ್ನ 1.35 ಕ್ಕೆ ಬೀದರ್‌ನಿಂದ ಬೆಂಗಳೂರಿಗೆ ಹೊರಟು ಅಲ್ಲಿ 3.15 ಕ್ಕೆ ತಲುಪಲಿದೆ. ಒಟ್ಟಾರೆ 1.40 ಗಂಟೆಯ ಪ್ರಯಾಣ ಇದಾಗಲಿದೆ.
ಬಸ್‌ಗಿಂತಲೂ ಅಗ್ಗವಾದ ವಿಮಾನ ಪ್ರಯಾಣ ದರ, ಸಮಯ ಉಳಿತಾಯ:
ಬೀದರ್‌ನಿಂದ ಬೆಂಗಳೂರಿಗೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹವಾನಿಯಂತ್ರಿತವಲ್ಲದ ಸ್ಲೀಪರ್ ಬಸ್‌ನಲ್ಲಿ 15 ಗಂಟೆಗಳ ಕಾಲ ಪ್ರಯಾಣಿಸಿ ಅದಕ್ಕೆ ಪ್ರಯಾಣಿಕ 1250 ರು. ಪಾವತಿಸಬೇಕು (ಭಾನುವಾರ 1440 ರು.) ಆದರೆ ಹವಾನಿಯಂತ್ರಿತ 1.40 ಗಂಟೆಗಳಲ್ಲಿ ಬೆಂಗಳೂರಿಗೆ ತಲುಪಿಸುವ ಟ್ರೂಜೆಟ್ ವಿಮಾನ ಪ್ರಯಾಣಕ್ಕೆ 1299 ರು. ಪಾವತಿಸಬೇಕು. ಇಲ್ಲಿ ಪ್ರಯಾಣದ ಮೂಲ ದರ 951 ರು. ಆಗಿದ್ದು ಇನ್ನುಳಿದದ್ದು ತೆರಿಗೆಯಾಗಿದೆ.
ಶರವೇಗದಲ್ಲಿ ಕಾಮಗಾರಿ, ಹಗಲು ರಾತ್ರಿಯೆನ್ನದೆ 200 ಕಾರ್ಮಿಕರ ಶ್ರಮ:
ಲೋಕೋಪಯೋಗಿ ಇಲಾಖೆಯ ಮೂಲಕ ಕೊಳ್ಳೂರ ಗುರುನಾಥ ಇನ್ಫ್ರಾ ಪ್ರೈ.ಲಿ. ಸಂಸ್ಥೆಯು ಬೀದರ್‌ನ ಈ ಏರ್ ಪೋರ್ಟ್ ಟರ್ಮಿನಲ್ ನಿರ್ಮಾಣದ ಕಾಮಗಾರಿ ವಹಿಸಿ ಕೊಂಡಿದೆ. ಇದೇ ಜ. 17 ರಂದು ಕಾಮಗಾರಿಯನ್ನು ಆರಂಭಿಸಿರುವ ಈ ಸಂಸ್ಥೆಯ ಮುಖ್ಯಸ್ಥರಾದ ಸಚಿವ ಕೊಳ್ಳೂರ್ ಹಾಗೂ ಅವರ ತಂಡ ಗುಜರಾತ್, ಹೈದ್ರಾಬಾದ್ ಸೇರಿದಂತೆ ಮತ್ತಿತರ ಕಡೆಗಳಿಂದ ಸುಮಾರು 200 ನುರಿತ ಕಾರ್ಮಿಕರನ್ನು ಕರೆಯಿಸಿ ಕೆಲಸ ಆರಂಭಿಸಿದ್ದು ಶರವೇಗದಂತಿದೆ.
ಕೇವಲ 5 ದಿನಗಳಲ್ಲಿ ಟರ್ಮಿನಲ್‌ನ ಚಿತ್ರಣವೇ ಬದಲಾಗಿ ಬೆರಳೆಣಿಕೆ ದಿನಗಳಲ್ಲಿ ಟರ್ಮಿನಲ್ ಸಂಪೂರ್ಣವಾಗಿ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಟರ್ಮಿನಲ್‌ಗೆ ಆಗಮಿಸುತ್ತಿದ್ದರೆ ಸುಂದರ ವಾತಾವರಣ ಇರಬೇಕೆಂದು ರಸ್ತೆ ವಿಭಜಕಗಳ ನಿರ್ಮಾಣ, ಅತ್ಯುತ್ತಮ ವಿದ್ಯುತ್ ದೀಪಗಳಿಂದ ಅಲಂಕಾರ, ಆಕರ್ಷಕ ಬೋರ್ಡ್, ಸುಮಾರು 100 ಅಡಿಗಳಷ್ಟು ಅಗಲದ ರಸ್ತೆ ನಿರ್ಮಾಣವಾಗುತ್ತಿದೆ. ಇದಲ್ಲದೆ ಟರ್ಮಿನಲ್ ಒಳಗಡೆ ವಿಐಪಿ ಲಾಂಜ್, ಸಾಮಾನ್ಯರಿಗೆ ವಿಶ್ರಾಂತಿ ಕೋಣೆ, ಟಿಕೆಟ್ ಕೌಂಟರ್, ಬ್ಯಾಗೇಜ್ ಕೌಂಟರ್ ಹೀಗೆಯೇ ಮತ್ತಿತರ ಕಾಮಗಾರಿಗಳು ವೇಗದಲ್ಲಿ ನಡೆಯುತ್ತಿವೆ.
ಈ ಬಗ್ಗೆ ಮಾತನಾಡಿದ ಬೀದರ್ ಸಂಸದ ಭಗವಂತ ಖೂಬಾ ಅವರು, ಬೀದರ್ ಕ್ಷೇತ್ರದ ಅಭಿವೃದ್ಧಿಗೆ ಮಾತು ಕೊಟ್ಟಂತೆ ನಡೆದಿದ್ದೇನೆ. ಐದಾರು ವರ್ಷಗಳ ಹಿಂದೆ ನೀಡಿದ್ದ ಭರವಸೆಗಳು ಇದೀಗ ಈಡೇರುತ್ತಿವೆ. ನಾಗರಿಕ ವಿಮಾನಯಾನ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ. ಇದೇ ಜ. 29ರಂದು ಹೈದ್ರಾಬಾದ್‌ನಲ್ಲಿ ಕರ್ನಾಟಕ ಸರ್ಕಾರದಿಂದ ನಡೆಯುತ್ತಿರುವ ಉದ್ಯಮಿಗಳ ಕೂಟದಲ್ಲಿ ಪಾಲ್ಗೊಂಡು, ಬೀದರ್‌ಗೆ ಕೈಗಾರಿಕೋದ್ಯಮವನ್ನು ಸೆಳೆಯುವ ಪ್ರಯತ್ನ ಮಾಡ್ತೇನೆ. ಜ. 26ಕ್ಕೆ ನಾಗರಿಕ ವಿಮಾನಯಾನ ಆರಂಭವಾಗಲಿದ್ದು ಮುಖ್ಯಮಂತ್ರಿಗಳನ್ನು ಕರೆತರುವ ಪ್ರಯತ್ನ ಮಾಡ್ತೇವೆ ಎಂದು ತಿಳಿಸಿದ್ದಾರೆ.