ಕಾರವಾರ [ಡಿ.17]:  ಮಾಜಿ ಸಂಸದೆ, ಸಚಿವೆ, ರಾಜ್ಯಪಾಲೆ ಮಾರ್ಗರೆಟ್ ಆಳ್ವ ಈಗ ಉತ್ತರ ಕನ್ನಡದ ಕಾಂಗ್ರೆಸ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮೇಲೆ ಹರಿಹಾಯುತ್ತಿದ್ದಾರೆ. ಹಠಾತ್ತಾಗಿ ಮ್ಯಾಗಿ ಸ್ವಪಕ್ಷೀಯರ ಮೇಲೆ ಮುಗಿಬಿದ್ದಿರುವುದು ಅಚ್ಚರಿ ಹುಟ್ಟಿಸಿದೆ. 

ದಶಕದಿಂದ ಜಿಲ್ಲೆಯ ರಾಜಕೀಯದ ಬಗ್ಗೆ ತಲೆ ಹಾಕದ ಮಾರ್ಗರೆಟ್ ಭಾನುವಾರ ಶಿರಸಿಯ ಸಮಾರಂಭವೊಂದರಲ್ಲಿ ಪಾಲ್ಗೊಂಡು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಪ್ರಸ್ತಾಪಿಸಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ವಿರುದ್ಧವೇ ಹರಿಹಾಯ್ದರು. ಶಿರಸಿ ಕ್ಷೇತ್ರದಲ್ಲಿ ಸೋತವರಿಗೆ ಯಲ್ಲಾಪುರದಲ್ಲಿ ಟಿಕೆಟ್ ನೀಡಲಾಗುತ್ತದೆ. ಅಲ್ಲಿಯೂ ಸೋತವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. 

ಸೋತವರಿಗೆ ಮಣೆ ಹಾಕುವುದು ಎಷ್ಟರಮಟ್ಟಿಗೆ ಸರಿ, ಕೂಡಲೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ನಾಯ್ಕ ಅವರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.  ಸೋಮವಾರ ಭೀಮಣ್ಣ ನಾಯ್ಕ ಸುದ್ದಿಗೋಷ್ಠಿ ನಡೆಸಿ ಮ್ಯಾಗಿ ವಿರುದ್ಧ ಹರಿಹಾಯ್ದರು. ತಾವು ಪಕ್ಷದ ರಾಜ್ಯ ಮುಖಂಡರ ಅಣತಿಯಂತೆ ನಡೆಯುತ್ತಿದ್ದು, ಈಗ ಏಕಾಏಕಿ ಬಂದು ಹೀಗೆ ಆಪಾದಿಸುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ ಎಂದರು.

ಮಾರ್ಗರೆಟ್ ಉದ್ದೇಶವೇನು?: ನಿವೇದಿತ್ ಆಳ್ವ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಥವಾ ಕಾಂಗ್ರೆಸ್‌ನಲ್ಲಿ ಮುಂಚೂಣಿಯಲ್ಲಿ ತಂದು ನಿಲ್ಲಿಸುವ ಉದ್ದೇಶ ಮಾರ್ಗರೆಟ್ ಅವರ ಈ ಆಪಾದನೆಗಳ ಹಿಂದಿರುವ ಸಂಗತಿ ಎಂದು ಪಕ್ಷದ ಕೆಲವರು ಆಂತರಂಗದಲ್ಲಿ ಹೇಳುತ್ತಿದ್ದಾರೆ. ಹಿಂದೆ ಎರಡು ಬಾರಿ ನಿವೇದಿತ್ ಅವರನ್ನು ಚುನಾವಣೆಗೆ ನಿಲ್ಲಿಸುವ ಪ್ರಯತ್ನ ನಡೆದರೂ ಟಿಕೆಟ್ ನೀಡಲಿಲ್ಲ. 

ಡಿಕೆ ಸಹೋದರರ ಕ್ಷೇತ್ರದಲ್ಲಿ ಚುನಾವಣೆ : ಇಬ್ಬರಲ್ಲಿ ಯಾರಿಗೆ ಮತದಾರನ ಮಣೆ...

ಈಗ ಕಾಂಗ್ರೆಸ್ ಸಂಘಟನೆ ಜಿಲ್ಲೆಯಲ್ಲಿ ಮೊದಲಿನಷ್ಟು ಬಲಿಷ್ಠವಾಗಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಯಲ್ಲಾಪುರ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಶಿವರಾಮ ಹೆಬ್ಬಾರ್ ಬಿಜೆಪಿ ಸೇರಿ ಜಯಭೇರಿ ಬಾರಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ನಿವೇದಿತ್ ಆಳ್ವ ಅವರನ್ನು ಪ್ರತಿಷ್ಠಾಪಿಸಿ ಅವರಿಗೆ ರಾಜಕೀಯ ಭವಿಷ್ಯ ಕಲ್ಪಿಸುವುದು ಮ್ಯಾಗಿ ಮೇಡಮ್ ಉದ್ದೇಶವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪಕ್ಷಕ್ಕೆ ರೆಕ್ಕೆಪುಕ್ಕ: ಆದರೆ ಜಿಲ್ಲೆಯಲ್ಲಿ ಪಕ್ಷ ಬಲಿಷ್ಠ ಪಡಿಸುವ ಉದ್ದೇಶದಿಂದ ಮ್ಯಾಗಿ ಪ್ರಯತ್ನ ಆರಂಭಿಸಿದ್ದರೆ, ಅದು ನಿಜವಾಗಿಯೂ ಕಾಂಗ್ರೆಸ್‌ಗೆ ಒಳಿತಾಗಲಿದೆ. ಆಳ್ವ ಹುಟ್ಟುಹಾಕಿದ ಸ್ಥಳೀಯ ಮುಖಂಡರು ಕಾಂಗ್ರೆಸ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರನ್ನು ಬಳಸಿಕೊಂಡು ಪಕ್ಷಕ್ಕೆ ಹೊಸರೂಪ ನೀಡಲು ಮ್ಯಾಗಿ ಮುಂದಾದರೆ ಪಕ್ಷಕ್ಕೆ ರೆಕ್ಕೆಪುಕ್ಕ ಬರುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡಿನಲ್ಲಿ ಮಾರ್ಗರೆಟ್ ತಮ್ಮ ಪ್ರಭಾವವನ್ನು ಬೀರುವ ಸಾಧ್ಯತೆ ಇದೆ. ಈಗ ಮತ್ತೆ ಮಾರ್ಗರೆಟ್ ಹಾಗೂ ದೇಶಪಾಂಡೆ ಬಣಗಳ ನಡುವೆ ತಿಕ್ಕಾಟ ಆರಂಭವಾಗುವ ಸಾಧ್ಯತೆಯೂ ಇದೆ. ಕಾಂಗ್ರೆಸ್‌ನಲ್ಲಿ ಆಳ್ವ ಹುಟ್ಟುಹಾಕಿರುವ ಬಿರುಗಾಳಿ ಏನಾಗಲಿದೆ ಎನ್ನುವ ಕುತೂಹಲ ಉಂಟಾಗಿದೆ.