ರಾಮನಗರ(ಮೇ.21): ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಸದಸ್ಯ ಭದ್ರಯ್ಯ ಗುರು​ವಾರ ನಡೆದ ಚುನಾ​ವ​ಣೆ​ಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕರ್ಮಭೂಮಿಯಲ್ಲಿಯೇ ಜೆಡಿಎಸ್‌ ಅಧಿಕಾರ ಕಳೆದುಕೊಂಡು ಮುಖಭಂಗ ಅನುಭವಿಸಿದೆ. 

ನಿಕಟಪೂರ್ವ ಅಧ್ಯಕ್ಷ ಗಾಣಕಲ್‌ ನಟರಾಜು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ತಾಪಂ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಜೆಡಿಎಸ್‌ನಲ್ಲಿ ಅಧ್ಯಕ್ಷ ಸ್ಥಾನ ಸಿಗುವುದಿಲ್ಲ ಎಂದು ಖಾತ್ರಿಯಾಗುತ್ತಿದ್ದಂತೆ ಬುಧವಾರ ಬೆಳಗ್ಗೆ 11ರ ಸುಮಾರಿಗೆ ಭದ್ರಯ್ಯ ಕಾಂಗ್ರೆಸ್‌ ಸೇರಿದರು. ಬಳಿಕ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಮಧ್ಯಾಹ್ನದ ಹೊತ್ತಿಗೆ ಅಧ್ಯಕ್ಷರಾದರು. ಜೆಡಿಎಸ್‌ನಲ್ಲಿದ್ದ ಎಸ್‌.ಪಿ.ಜಗದೀಶ್‌, ಡಿ.ಎಂ.ಮಹದೇವಯ್ಯ ಅವರು ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾದರು.

'ಡಿ.ಕೆ.​ಶಿ​ವ​ಕು​ಮಾರ್‌ ಸಿಎಂ ಮಾಡಲು ಎಚ್‌ಡಿಕೆ ಕೈಜೋ​ಡಿಸಲಿ'

14 ಸದಸ್ಯ ಬಲದ ತಾಪಂನಲ್ಲಿ ಜೆಡಿಎಸ್‌ 8, ಕಾಂಗ್ರೆಸ್‌ 6 ಸದಸ್ಯರಿದ್ದಾರೆ. ಜೆಡಿಎಸ್‌ನ ಮೂವರು ಗೈರಾಗಿದ್ದರು. ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾದ ನಂತರ ತವರು ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಸಿಕ್ಕ ಅವಕಾಶಗಳೆಲ್ಲವನ್ನು ಕಾಂಗ್ರೆಸ್‌ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕ್ಷೀಣಿಸುತ್ತಿರುವ ಜೆಡಿಎಸ್‌ಗೆ ಜಿಲ್ಲಾ ಕೇಂದ್ರದಲ್ಲಿಯೇ ದೊಡ್ಡ ಪೆಟ್ಟಾಗಿದೆ. ರಾಮನಗರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹಿಡಿತ ಸಡಿಲವಾಗುತ್ತಿರುವ ಲಕ್ಷಣಗಳು ಗೋಚರಿಸಲಾರಂಭಿಸಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ತಾಪಂ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿ​ದೆ.