ದೂರ ಶಿಕ್ಷಣ ಪ್ರಸ್ತುತ ಭಾರತೀಯ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಉತ್ತಮ ಪರಿಣಾಮ ಬೀರಿದೆ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ತಿಳಿಸಿದರು.

 ಮೈಸೂರು : ದೂರ ಶಿಕ್ಷಣ ಪ್ರಸ್ತುತ ಭಾರತೀಯ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಉತ್ತಮ ಪರಿಣಾಮ ಬೀರಿದೆ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ತಿಳಿಸಿದರು.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಭಾನುವಾರ ನಡೆದ ರಾಜ್ಯ ಮುಕ್ತ ವಿವಿಯ 18ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣವು ಎಲ್ಲರಿಗೂ ಹಾಗೂ ಎಲ್ಲಾ ಕಡೆಯೂ ದೊರೆಯಬೇಕು. ಈ ಉದ್ದೇಶದಿಂದಲೇ ಮುಕ್ತ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಯಿತು ಎಂದರು.

ಮುಕ್ತ ವಿವಿಗಳು ದೂರ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕರ್ನಾಟಕ ರಾಜ್ಯ ಮುಕ್ತ ವಿವಿ ಕಳೆದ ಎರಡೂವರೆ ದಶಕಗಳಲ್ಲಿ ದೂರ ಶಿಕ್ಷಣದ ಮೂಲಕ ದೇಶದಾದ್ಯಂತ ಉನ್ನತ ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ನ್ಯಾಕ್‌ ಸಂಸ್ಥೆಯಿಂದ ಎ ಪ್ಲಸ್‌ ಮಾನ್ಯತೆ ಪಡೆದಿದೆ ಎಂದು ಅವರು ಶ್ಲಾಘಿಸಿದರು.

ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಂದ ಬಂದ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಮುಕ್ತ ವಿವಿಗಳು ಕಾರಣವಾಗಿವೆ. ಇಂದು ಮಹಿಳೆಯರು ಹೆಚ್ಚು ಪದಕಗಳನ್ನು ಪಡೆದಿರುವುದು ಮಹಿಳಾ ಸಬಲೀಕರಣದ ಪ್ರತೀಕವಾಗಿದೆ ಎಂದರು.

ಗುಣಮಟ್ಟದ ಶಿಕ್ಷಣ, ಮಾರ್ಗದರ್ಶನ, ಕೌಶಲ್ಯ, ಗುಣಾತ್ಮಕ ಚಿಂತನೆ ಮತ್ತು ಭವಿಷ್ಯ ನಿರ್ಮಾಣ ಇವೆಲ್ಲವೂ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತವೆ. ರಾಷ್ಟ್ರದ ಪ್ರಗತಿಯಲ್ಲಿ ಪ್ರತಿಯೊಬ್ಬ ಸಾರ್ವಜನಿಕರ ಕೊಡುಗೆ ಅಗತ್ಯ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಸಾರ್ವಭೌಮ ರಾಷ್ಟ್ರ. ವಿಶ್ವಕಲ್ಯಾಣ ಮತ್ತು ವಿಶ್ವಶಾಂತಿಯನ್ನು ಭಾರತ ದೇಶ ಸಾರುತ್ತಿದೆ ಎಂದು ಅವರು ಹೇಳಿದರು.

ಪ್ರಸ್ತುತ ಇಡೀ ವಿಶ್ವವೇ ಪರಿಸರದ ಸಮಸ್ಯೆಗಳನ್ನು ಎದುರಿಸುತ್ತಿದೆ. ಪರಿಸರವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಪ್ಲಾಸ್ಟಿಕ್‌ ಮುಕ್ತ ವಲಯಗಳನ್ನಾಗಿ ಮಾಡುವುದು, ಮಳೆ ನೀರು ಕೊಯ್ಲುಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಇನ್ನಿತರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸರ ಸಂರಕ್ಷಣೆಯ ಆದ್ಯ ಕರ್ತವ್ಯ ಎಲ್ಲರ ಮೇಲಿದೆ ಎಂದರು.

ಕೌಶಲ್ಯಾಧಾರಿತ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ:

ಘಟಿಕೋತ್ಸವ ಭಾಷಣ ಮಾಡಿದ ಕರ್ನಾಟಕ ಹೈಕೋರ್ಚ್‌ ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಕೋರ್ಸ್‌ಗಳಿಂದ ಉದ್ಯೋಗ ಪಡೆದುಕೊಳ್ಳುವುದು ಸಾಧ್ಯವಿಲ್ಲ. ಇದರ ಜೊತೆಗೆ ಕೌಶಲ್ಯಾಧಾರಿತ ಶಿಕ್ಷಣದ ಅವಶ್ಯಕತೆ ಹೆಚ್ಚಿರುತ್ತದೆ. ಇದನ್ನು ಮನಗಂಡ ನಮ್ಮ ವಿವಿ ದೂರ ಶಿಕ್ಷಣದಡಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವಂತ ವಿವಿಧ ಕೌಶಲ್ಯಾಧಾರಿತ ಶಿಕ್ಷಣಗಳನ್ನು ನೀಡುವುದರೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಕಾರ್ಯೋನ್ಮುಖವಾಗಿದೆ. ಪ್ರತಿಯೊಬ್ಬರು ತಮ್ಮ ಉತ್ತಮ ವೃತ್ತಿ ಜೀವನಕ್ಕಾಗಿ ಉನ್ನತ ಶಿಕ್ಷಣವನ್ನು ಪಡೆಯಲು ಹಂಬಲಿಸುತ್ತಾರೆ ಎಂದು ಹೇಳಿದರು.

ಶಿಕ್ಷಣವು ಯಾವಾಗಲೂ ಸಾಮಾಜಿಕ ಪರಿವರ್ತನೆಗೆ ಪ್ರಬಲ ಸಾಧನವಾಗಿದೆ. ಇದು ನಾಗರಿಕತೆಯ ಪ್ರಾರಂಭದಿಂದಲೂ ಇದೆ. ದೂರ ಶಿಕ್ಷಣದಿಂದಾಗಿ ಭಾರತದ ಶಿಕ್ಷಣ ವ್ಯವಸ್ಥೆಯು ಹೊಸ ಆಯಾಮವನ್ನು ಪಡೆದುಕೊಂಡಿದೆ. ಈ ದೂರ ಶಿಕ್ಷಣ ಮತ್ತು ಮುಕ್ತ ಕಲಿಕೆಯ ಮೂಲಕ ಮಾತ್ರ ಬೇಡಿಕೆ. ಪ್ರಸ್ತುತ ಭಾರತೀಯ ಸಮಾಜದ ಹೆಚ್ಚಿನ ಭಾಗಕ್ಕೆ ಶಿಕ್ಷಣವನ್ನು ಪೂರೈಸಬಹುದು ಎಂದರು.

ಗೌರವ ಡಾಕ್ಟರೇಟ್‌ ಪ್ರದಾನ:

ಧನ್ವಂತ್ರಿ ಎಜುಕೇಶನಲ್‌ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಶ್ರೀ ಲಕ್ಷ್ಮಿ ಶಿಕ್ಷಣ ಸಂಸ್ಥೆಗಳ ಸಮೂಹದ ಮುಖ್ಯಸ್ಥ ಎನ್‌. ರಾಮಚಂದ್ರಯ್ಯ ಹಾಗೂ ಚಿಲ್ಡ್ರನ್ಸ್‌ ಎಜುಕೇಶನ್‌ ಸೊಸೈಟಿ ಹಾಗೂ ಆಕ್ಸಫರ್ಡ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್‌.ಎನ್‌. ವೆಂಕಟಲಕ್ಷ್ಮಿ ನರಸಿಂಹರಾಜು ಅವರಿಗೆ ಗೌರವ ಡಾಕ್ಟರೇಟ್‌ ಅನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ಪ್ರದಾನ ಮಾಡಿದರು.

ಅವಕಾಶ ಸಿಕ್ಕರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜಭವನದಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು ಎಂದು ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.

8722 ಮಂದಿಗೆ ಪದವಿ

ಎಂಎ ಕನ್ನಡದಲ್ಲಿ ಎಚ್‌.ಎಂ. ಸೌಭಾಗ್ಯ 2 ಚಿನ್ನದ ಪದಕ, 1 ನಗದು ಬಹುಮಾನ ಪಡೆದರು. ಹಾಗೆಯೇ, ಎಂಎ ಉರ್ದುನಲ್ಲಿ ಆಯೇಷಾ ಸಿದ್ದಿಕ್‌ ಕೌಸರ್‌ ಮತ್ತು ಫಾತಿಮಾ ಜಹ್‌್ರ ತಲಾ 2 ಚಿನ್ನದ ಪದಕ ಪಡೆದರು. ಒಟ್ಟಾರೆಯಾಗಿ 52 ವಿದ್ಯಾರ್ಥಿಗಳಿಗೆ 44 ಚಿನ್ನದ ಪದಕಗಳನ್ನು ಹಾಗೂ 27 ನಗದು ಬಹುಮಾನಗಳನ್ನು ಪಡೆದರು.

ಒಬ್ಬ ಸಂಶೋಧನಾ ವಿದ್ಯಾರ್ಥಿಗೆ ಪಿಎಚ್‌ಡಿ, 44 ವಿವಿಧ ಪದವಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು 48 ವಿವಿಧ ಪದವಿ ವಿದ್ಯಾರ್ಥಿಗಳಿಗೆ ರಾರ‍ಯಂಕ್‌ಗಳನ್ನು ಮತ್ತು 27 ವಿವಿಧ ಪದವಿಗಳ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ಪ್ರಧಾನ ಮಾಡಲಾಯಿತು. 5240 ಮಹಿಳೆಯರು ಸೇರಿದಂತೆ ಒಟ್ಟು 8721 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತ್ತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಎಲ್‌.ಎನ್‌. ಮೂರ್ತಿ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ ಮೊದಲಾದವರು ಇದ್ದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಹೊಸ 12 ಪದವಿ ಕಾರ್ಯಕ್ರಮಗಳಿಗೆ ಯುಜಿಸಿ ಮಾನ್ಯತೆಯನ್ನು ಶೀಘ್ರದಲ್ಲಿ ನಿರೀಕ್ಷಿಸಲಾಗಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷ 2023-24 ರಿಂದ ಹೊಸದಾಗಿ 13 ಆನ್‌ಲೈನ್‌ ಶಿಕ್ಷಣ ಕ್ರಮಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

- ಪ್ರೊ. ಶರಣಪ್ಪ ವಿ. ಹಲಸೆ, ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ