ಮೈ- ಬೆಂ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಹಗಲು ದರೋಡೆ
ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರ ವಿರೋಧದ ನಡುವೆಯೂ ಟೋಲ್ ಸಂಗ್ರಹ ಮಾಡುತ್ತಿರುವುದು ಹಗಲು ದರೋಡೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಕಿಡಿಕಾರಿದರು.
ಮೈಸೂರು : ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರ ವಿರೋಧದ ನಡುವೆಯೂ ಟೋಲ್ ಸಂಗ್ರಹ ಮಾಡುತ್ತಿರುವುದು ಹಗಲು ದರೋಡೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಕಿಡಿಕಾರಿದರು.
ಕಾಂಗ್ರೆಸ್ ಭವನದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಿಂದ ಬೆಂಗಳೂರು ಹೋಗೋಕೆ . 660 ಟೋಲ್ ಕೊಡಬೇಕು. ಮರಳಿ ಬರಲು . 660 ಪಾವತಿಸಬೇಕು. ಮಂಡ್ಯ ಬಳಿ ಪ್ರವೇಶಕ್ಕೆ . 330, ರಾಮನಗರ ಬಳಿ ನಿರ್ಗಮನಕ್ಕೆ . 330 ಕೊಡಬೇಕಿದೆ. ಇದು ದರೋಡೆಯಲ್ಲವೇ ಎಂದು ವಾಗ್ದಾಳಿ ನಡೆಸಿದರು.
ಇತರೆ ರಾಜ್ಯಗಳಲ್ಲಿ ಒಂದು ಕಿ.ಮೀ.ಗೆ . 1.48 ಟೋಲ್ ದರ ಇದೆ. ಆದರೆ, ಕರ್ನಾಟಕದಲ್ಲಿ 1 ಕಿ.ಮೀಗೆ . 3.80 ವಸೂಲಿ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಎಕ್ಸ್‌ಪ್ರೆಸ್ ವೇನಲ್ಲಿ 456 ಅಪಘಾತವಾಗಿದ್ದು, 189 ಜನರು ಮೃತಪಟ್ಟಿದ್ದಾರೆ. 8 ತಿಂಗಳಿಗೆ ಈಗಾಗಲೇ 3 ಬಾರಿ ಟೋಲ್ ಏರಿಕೆ ಮಾಡಲಾಗಿದೆ. ಇದರಲ್ಲಿ ಸಂಸದ ಪ್ರತಾಪ್ ಸಿಂಹ ಪಾತ್ರ ಏನು ಎಂದು ಅವರು ಪ್ರಶ್ನಿಸಿದರು.
ಈ ರಸ್ತೆಯಲ್ಲಿ ಪ್ರತಿನಿತ್ಯ ಲಕ್ಷ ವಾಹನಗಳು ದಿನಕ್ಕೆ ಓಡಾಡುತ್ತವೆ ಎಂದು ಅಂದಾಜು ಮಾಡಲಾಗುತ್ತಿದೆ. 2 ಟೋಲ್‌ಗಳಿಂದ ದಿನಕ್ಕೆ . 10 ಕೋಟಿ ಸಂಗ್ರಹ ಆಗುತ್ತದೆ. 30 ವರ್ಷಕ್ಕೆ ಟೋಲ್ ಸಂಗ್ರಹಕ್ಕೆ ಟೆಂಡರ್ ನೀಡಲಾಗಿದೆ. ವರ್ಷಕ್ಕೆ . 3650 ಕೋಟಿಯಂತೆ 10 ವರ್ಷಕ್ಕೆ . 36500 ಕೋಟಿ ಸಂಗ್ರಹ ಆಗುತ್ತದೆ. 30 ವರ್ಷಕ್ಕೆ . 1 ಲಕ್ಷ ಕೋಟಿ ಸಂಗ್ರಹ ಮಾಡಲಾಗುತ್ತದೆ. ಆದರೆ, ರಸ್ತೆಗೆ ಖರ್ಚು ಮಾಡಿರೋ ವೆಚ್ಚ . 9550. ಇದು ಕೇಂದ್ರ ಸರ್ಕಾರ ಮಾಡುತ್ತಿರುವ ರೋಡ್ ರಾಬರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ ನೀರಿಲ್ಲ
ರಾಜ್ಯದಲ್ಲಿ ಮಳೆಯ ಅಭಾವ ಇದೆ. ಜುಲೈ ತಿಂಗಳಿಂದ ಮಳೆಯಾಗುವ ಸಾಧ್ಯತೆ ಇದೆ. ಸದ್ಯ ಕುಡಿಯುವ ನೀರಿಗೆ ಸಮಸ್ಯೆಯಾಗುವ ವಾತಾವರಣ ಇದೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ತಮಿಳುನಾಡಿಗೆ ಈ ಬಾರಿ ನೀರು ಕೊಡಲು ಸಾಧ್ಯವಾಗಲ್ಲ ಎಂದರು.
ನಾಲ್ಕು ಜಲಾನಯನ ಪ್ರದೇಶಗಳಾದ ಕಾವೇರಿ, ಕಬಿನಿ, ಹಾರಂಗಿ, ಹೇಮಾವತಿಯಲ್ಲಿ 7 ಟಿಎಂಸಿ ನೀರು ಮಾತ್ರ ಸಂಗ್ರಹ ಇದೆ. ಕೆಆರ್‌ಎಸ್‌ನಲ್ಲಿ 2.825, ಹಾರಂಗಿಯಲ್ಲಿ 1.556, ಕಬಿನಿಯಲ್ಲಿ 0.68, ಹೇಮಾವತಿಯಲ್ಲಿ 2 ಟಿಎಂಸಿ ನೀರಿದೆ. ಬೆಂಗಳೂರು ನಗರ ಒಂದಕ್ಕೆ ಮೂರೂವರೆ ಟಿಎಂಸಿ ನೀರು ಬೇಕು. ಹಾಸನ, ಮಡಿಕೇರಿ, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರಕ್ಕೆ ಎರಡೂವರೆ ಟಿಎಂಸಿ ನೀರು ಬೇಕು ಎಂದು ಅವರು ವಿವರಿಸಿದರು.
ಕೃಷಿಗೆ 5 ಟಿಎಂಸಿ ನೀರು ಬೇಕು. ನಾವೂ ತಮಿಳುನಾಡಿಗೆ 3.5 ಟಿಎಂಸಿ ನೀರು ಬಿಡಬೇಕು. ನಮ್ಮಲ್ಲಿ ಇರೋದು 7 ಟಿಎಂಸಿ ನೀರು ಮಾತ್ರ. ತಮಿಳುನಾಡಿಗೆ ನೀರು ಬಿಟ್ಟರೆ ಬಹಳ ಸಮಸ್ಯೆ ಆಗುತ್ತದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲಾಗಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಪಂ ಮಾಜಿ ಅದ್ಯಕ್ಷ ಬಿ.ಎಂ. ರಾಮು, ಕಾಂಗ್ರೆಸ್ ನಗರ ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಕಾರ್ಯದರ್ಶಿ ಗಿರೀಶ್, ಮಾಧ್ಯಮ ವಕ್ತಾರ ಎಂ. ಮಹೇಶ್ ಇದ್ದರು.
ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾಯಿತು. ಬಿಜೆಪಿಯವರು ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ನಾಯಕರು ಟೀಕಿಸುವ ಮೊದಲು ವಿರೋಧ ಪಕ್ಷದ ನಾಯಕ ಯಾರೆಂಬದು ತಿಳಿಸಬೇಕು. ಕಾಂಗ್ರೆಸ್ ನಾಯಕರನ್ನು ಎಷ್ಟುನಿಮಿಷ ಬೈದಿರುವ ಆಧಾರದ ಮೇಲೆ ವಿರೋಧ ಪಕ್ಷ ನಾಯಕ ಮಾಡಲಾಗುತ್ತದೆಯೇ?
- ಎಂ. ಲಕ್ಷ್ಮಣ, ಕೆಪಿಸಿಸಿ ವಕ್ತಾರ