ಬೆಸ್ಕಾಂ ಸಿಬ್ಬಂದಿ ಜಾಗರೂಕತೆಯಿಂದ ಕೆಲಸ ಮಾಡಲು ಸೂಚನೆ

ಕಣ್ಣಿಗೆ ಕಾಣದಿರುವ ಶಕ್ತಿ ವಿದ್ಯುತ್ ಜೊತೆ ಕೆಲಸ ಮಾಡುವ ಬೆಸ್ಕಾಂ ನೌಕರರು ಕಾಮಗಾರಿ ವೇಳೆ ಬೇಜವಾಬ್ದಾರಿ, ಅತಿಯಾದ ಆತ್ಮವಿಶ್ವಾಸ ಬಿಟ್ಟು ಜಾಗರೂಕರಾಗಿ ಕೆಲಸ ಮಾಡುವ ಮೂಲಕ ಯಾವುದೇ ಅನಾವುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿ ಅಪಘಾತ ಮುಕ್ತ ಬೆಸ್ಕಾಂ ಕಂಪನಿಯನ್ನಾಗಿ ಮಾಡಬೇಕೆಂದು ತಿಪಟೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಜಿ. ಸೋಮಶೇಖರಗೌಡ ತಿಳಿಸಿದರು.

Bescom staff instructed to work cautiously snr

  ತಿಪಟೂರು :  ಕಣ್ಣಿಗೆ ಕಾಣದಿರುವ ಶಕ್ತಿ ವಿದ್ಯುತ್ ಜೊತೆ ಕೆಲಸ ಮಾಡುವ ಬೆಸ್ಕಾಂ ನೌಕರರು ಕಾಮಗಾರಿ ವೇಳೆ ಬೇಜವಾಬ್ದಾರಿ, ಅತಿಯಾದ ಆತ್ಮವಿಶ್ವಾಸ ಬಿಟ್ಟು ಜಾಗರೂಕರಾಗಿ ಕೆಲಸ ಮಾಡುವ ಮೂಲಕ ಯಾವುದೇ ಅನಾವುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿ ಅಪಘಾತ ಮುಕ್ತ ಬೆಸ್ಕಾಂ ಕಂಪನಿಯನ್ನಾಗಿ ಮಾಡಬೇಕೆಂದು ತಿಪಟೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಜಿ. ಸೋಮಶೇಖರಗೌಡ ತಿಳಿಸಿದರು.

ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಗುರುವಾರ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯುತ್ ಸುರಕ್ಷತಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಪವರ್‌ಮನ್‌ಗಳು ಮಾತ್ರ ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ವಿದ್ಯುತ್‌ ಪ್ರವಹಿಸುತ್ತಿರುವ ಸಂದರ್ಭದಲ್ಲಿ ಯಾವಾಗ ಹೇಗೆ ಯಾವ ಕೆಲಸ ಮಾಡಬೇಕೆಂದು ಗೊತ್ತಿದ್ದರೂ ಉದಾಸೀನದಿಂದ ಅಪಘಾತಕ್ಕೆ ಎಡೆ ಮಾಡಿಕೊಳ್ಳುತ್ತಿದ್ದೀರಾ. ನಿಮಗೆಷ್ಟೇ ಅರಿವು, ಜಾಗೃತಿ ಮೂಡಿಸುವ ಜೊತೆಗೆ ಕಂಪನಿ ಎಲ್ಲಾ ಸೌಲಭ್ಯ ನೀಡಿದರೂ ಕರ್ತವ್ಯದ ವೇಳೆ ಸುರಕ್ಷತಾ ಕವಚಗಳನ್ನು ಧರಿಸದೆ ಕೆಲಸಕ್ಕೆ ಮುಂದಾಗುತ್ತಿರುವುದು ನೋವಿನ ಸಂಗತಿ ಎಂದರು.

ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋದಾಗ ರೈತರು ಬೆಸ್ಕಾಂ ಇಲಾಖೆಗೆ ಮಾಹಿತಿ ನೀಡದೆ, ತಾವೇ ರಿಪೇರಿ ಮಾಡಲು ಮುಂದಾಗಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆಗಳು ನಡೆದಿದ್ದು ಅವಶ್ಯಕತೆ ಇದ್ದಾಗ ಬೆಸ್ಕಾಂಗೆ ದೂರವಾಣಿ ಮೂಲಕ ತಿಳಿಸಿ ವಿದ್ಯುತ್‌ನಿಂದ ಜಾಗರೂಕರಾಗಿ ಎಂದರು.

ಕೆಪಿಟಿಸಿಎಲ್ ಟಿಎಕ್ಯೂಸಿ ತುಮಕೂರಿನ ಎಇಇ ಪುರುಷೋತ್ತಮ ಮಾತನಾಡಿ, ವಿದ್ಯುತ್ ಅಪರಾಧಗಳನ್ನು ತಡೆಯಲು ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಸಹಯೋಗದಲ್ಲಿ ಜಾಥಾ ನಡೆಸಲಾಗುತ್ತಿದೆ. ನೌಕರರು ಕಂಪನಿಯ ಆಸ್ತಿಯಾಗಿದ್ದು ಕೆಲಸದ ಸ್ಥಳದಲ್ಲಿ ಜಾಗರೂಕತೆಯಿಂದಿರಬೇಕು. ಅತಿಯಾದ ಆತ್ಮವಿಶ್ವಾಸವೇ ಕೆಲವು ಬಾರಿ ಅವಘಡಗಳಿಗೆ ದಾರಿ ಮಾಡಿಕೊಟ್ಟಿದ್ದು ಹೆಲ್ಮೆಟ್, ಹ್ಯಾಂಡ್‌ಗ್ಲೌಸ್, ಶೂಗಳನ್ನು ಧರಿಸಬೇಕು. ಗಡಿಬಿಡಿಯಿಂದ ಅಥವಾ ಯಾವುದೇ ಒತ್ತಡದಿಂದ ವಿದ್ಯುತ್ ಕಂಬವೇರಿ ಕೆಲಸ ಮಾಡಬೇಡಿ ಕಡ್ಡಾಯವಾಗಿ ಸುರಕ್ಷತಾ ಕವಚಗಳನ್ನು ಧರಿಸಿ ಎಂದರು

ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮನೋಹರ್ ಮಾತನಾಡಿ, ದೇಶದ ಪ್ರಗತಿ ವಿದ್ಯುತ್ ಮೇಲೆ ಅವಲಂಬಿತವಾಗಿದ್ದು, ಅದನ್ನು ಸಮರ್ಪಕವಾಗಿ ಗ್ರಾಹಕರಿಗೆ ಸರಬರಾಜು ಮಾಡುವ ಜವಾಬ್ದಾರಿ ಬೆಸ್ಕಾಂದ್ದಾಗಿದೆ. ಸರ್ಕಾರ ಮತ್ತು ಬೆಸ್ಕಾಂ ಇಲಾಖೆಯ ನಿರ್ದೇಶನದಂತೆ ಸಾರ್ವಜನಿಕರಲ್ಲಿ ಹಾಗೂ ಬೆಸ್ಕಾಂ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯುತ್ ಸುರಕ್ಷತಾ ಸಪ್ತಾಹ ಆಯೋಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಅಪಘಾತಗಳು ಸಂಭವಿಸುತ್ತಿದ್ದು ಪೋಸ್ಟರ್‌ಗಳ ಮೂಲಕ ಅರಿವು ಮೂಡಿಸುವ ಜಾಥಾ ನಡೆಸಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿಯೂ ಅರಿವು ಮೂಡಿಸಲಾಗುವುದು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದೇವತೆ ತಿಪಟೂರು ಕೆಂಪಮ್ಮದೇವಿ ದೇವಸ್ಥಾನದಿಂದ ಹಾಸನ ಸರ್ಕಲ್‌ವರೆಗೂ ಜಾಥಾ ನಡೆಸಲಾಯಿತು.

ಸಭೆಯಲ್ಲಿ ತುಮಕೂರು ಬೆಸ್ಕಾಂ ಎಇಇ ಮಲ್ಲಣ್ಣ, ಬೆಸ್ಕಾಂ ಉಪವಿಭಾಗದ ಎಇಇ ಕೆ.ಪಿ. ಜಯಪ್ಪ, ಕೆ.ಬಿ.ಕ್ರಾಸ್ ಸಹಾಯಕ ಅಭಿಯಂತರರಾದ ಕಾಂತಲಕ್ಷ್ಮಿ, ಲೆಕ್ಕಾಧಿಕಾರಿ ಕುಮಾರಸ್ವಾಮಿ, ನೋಡಲ್ ಅಧಿಕಾರಿ ನಾಗೇಂದ್ರಪ್ಪ, ಆಂತರಿಕ ಪರಿಶೋಧನಾ ಲೆಕ್ಕಾಧಿಕಾರಿ ಪ್ರಕಾಶ್, ಪ್ರಧಾನ ಎಇಇ ರಾಘವೇಂದ್ರ, ಕೇಂದ್ರ ಸಮಿತಿ ಸದಸ್ಯ ನರಸಿಂಹಮೂರ್ತಿ, ಪರಿಶಿಷ್ಟ ಜಾತಿ ವರ್ಗಗಳ ಕಲ್ಯಾಣ ಸಮಿತಿ ಉಪಾಧ್ಯಕ್ಷ ನಂದೀಶ್, ಸ್ಥಳೀಯ ಸಮಿತಿ ಅಧ್ಯಕ್ಷ ಮರುಳಸಿದ್ದಪ್ಪ, ಸಹಾಯಕ ಲೆಕ್ಕಾಧಿಕಾರಿ ಯೋಗಾನಂದ್, ಹೋಬಳಿಗಳ ಎಸ್‌ಓ, ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಇಲಾಖೆಯ ಸಿಬ್ಬಂದಿ, ಲೈನ್‌ಮನ್‌ಗಳು, ನೌಕರರು ಭಾಗವಹಿಸಿದ್ದರು. ನಂತರ ಪತ್ರಿಜ್ಞಾವಿಧಿ ಬೋಧಿಸಲಾಯಿತು. 

Latest Videos
Follow Us:
Download App:
  • android
  • ios