ಮಲ್ಲೇಶ್ವರದ ಮಾರುಕಟ್ಟೆ ಕಾಮಗಾರಿ ಪೂರ್ಣಗೊಳಿಸುವ ಡೆಡ್‌ಲೈನ್‌ 2023ರ ಮೇ ತಿಂಗಳಿಗೆ ವಿಸ್ತರಣೆಯಾಗಿದೆ. ಈ ವರ್ಷಾಂತ್ಯದಲ್ಲಿ ಕಾಮಗಾರಿ ಮುಗಿವ ನಿರೀಕ್ಷೆ ಹುಸಿಯಾಗಿದ್ದು, ಏಳೆಂಟು ವರ್ಷದಿಂದ ಬೀದಿಯಲ್ಲಿರುವ ವ್ಯಾಪಾರಿಗಳು ಬೇಸರಕ್ಕೆ ಕಾರಣವಾಗಿದೆ.

ಮಯೂರ ಹೆಗಡೆ

ಬೆಂಗಳೂರು (ಅ.07): ಮಲ್ಲೇಶ್ವರದ ಮಾರುಕಟ್ಟೆ ಕಾಮಗಾರಿ ಪೂರ್ಣಗೊಳಿಸುವ ಡೆಡ್‌ಲೈನ್‌ 2023ರ ಮೇ ತಿಂಗಳಿಗೆ ವಿಸ್ತರಣೆಯಾಗಿದೆ. ಈ ವರ್ಷಾಂತ್ಯದಲ್ಲಿ ಕಾಮಗಾರಿ ಮುಗಿವ ನಿರೀಕ್ಷೆ ಹುಸಿಯಾಗಿದ್ದು, ಏಳೆಂಟು ವರ್ಷದಿಂದ ಬೀದಿಯಲ್ಲಿರುವ ವ್ಯಾಪಾರಿಗಳು ಬೇಸರಕ್ಕೆ ಕಾರಣವಾಗಿದೆ. ಸಂಪಿಗೆ ರಸ್ತೆ 11ನೇ ಕ್ರಾಸ್‌ ಬಳಿ .147 ಕೋಟಿ ಮೊತ್ತದ ನೂತನ ಮಾರುಕಟ್ಟೆಕಟ್ಟಡ ಕಾಮಗಾರಿ ಪೂರ್ಣಕ್ಕೆ ಇನ್ನೂ ಏಳು ತಿಂಗಳು ಕಾಯುವುದು ಅನಿವಾರ್ಯ. ಕಳೆದ ಫೆಬ್ರವರಿಯಲ್ಲಿ ಮಾರುಕಟ್ಟೆ ನಿರ್ಮಾಣ ಪರಿಶೀಲಿಸಿದ್ದ ಸಚಿವ ಡಾ.ಅಶ್ವತ್ಥನಾರಾಯಣ ಅವರು ಡಿಸೆಂಬರ್‌ ಒಳಗೆ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದ್ದರು. 

ಆದರೆ, ಸಾಕಷ್ಟು ಕಾಮಗಾರಿ ಬಾಕಿ ಇರುವುದರಿಂದ ಪುನಃ ಯೋಜನೆ ಅವಧಿ ಪುನಃ ವಿಸ್ತರಿಸಲಾಗಿದೆ. ನಿರ್ಮಾಣ ಹಂತದ ಕಟ್ಟಡದ ಹಿಂಭಾಗದ ರಸ್ತೆಯಲ್ಲಿ ತಾತ್ಕಾಲಿಕ ಶೆಡ್‌ನಲ್ಲಿ ವ್ಯಾಪಾರಿಗಳು ಹೂ-ಹಣ್ಣು ವಹಿವಾಟು ನಡೆಸುತ್ತಿದ್ದಾರೆ. ಇಲ್ಲಿ ಮೂಲಭೂತ ಸೌಕರ್ಯ ಇಲ್ಲದಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ದಸರಾದ ವ್ಯಾಪಾರ ಜನದಟ್ಟಣೆ ಸಂಚಾರಿ ಸಮಸ್ಯೆ ಇದೆ. ವಿಳಂಬ ಕಾಮಗಾರಿಗೆ ಬೇಸರಗೊಂಡ ವ್ಯಾಪಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 2014ರಲ್ಲೇ ಇಲ್ಲಿದ್ದ ಹಳೆ ಮಾರುಕಟ್ಟೆಕೆಡವಿ 247 ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗಿದೆ. ಬಳಿಕ ವ್ಯಾಪಾರಿಗಳು ಕೋರ್ಚ್‌ ಮೆಟ್ಟಿಲೇರಿದ್ದು, ಮರು ಟೆಂಡರ್‌ ಸೇರಿ ತಾಂತ್ರಿಕ ಕಾರಣದಿಂದ ಕಾಮಗಾರಿ ಆರಂಭ ಕೈಗೂಡಲಿಲ್ಲ. 

Bengaluru: ಅ.10ರಿಂದ ರಾಜಕಾಲುವೆ ಒತ್ತುವರಿ ತೆರವು ಕಾರ‍್ಯಕ್ಕೆ ಚುರುಕು: ಪಾಲಿಕೆ

ಐದು ವರ್ಷದ ಬಳಿಕ 2019ರಲ್ಲಿ ಬಿಬಿಎಂಪಿ, ಬಿಡಿಎ ಜಂಟಿಯಾಗಿ ವಾಣಿಜ್ಯ ಸಂಕೀರ್ಣ ಯೋಜನೆ ಕೈಗೆತ್ತಿಕೊಂಡವು. ಆದರೆ, ವಿಳಂಬ ಕಾಮಗಾರಿ ಈಗಲೂ ನಮ್ಮನ್ನು ತ್ರಿಶಂಕು ಸ್ಥಿತಿಯಲ್ಲಿ ಇಟ್ಟಿದೆ ಎಂಬ ದೂರು ವ್ಯಾಪಾರಿಗಳದ್ದು. ಬಿಡಿಎ ಅಭಿಯಂತರ ಸದಸ್ಯ ಡಾ.ಎಚ್‌.ಆರ್‌.ಶಾಂತರಾಜಣ್ಣ, ‘ಪ್ರಸ್ತುತ 2 ಹಾಗೂ 3ನೇ ಮಹಡಿಯ ಸ್ಲ್ಯಾಬ್‌ ಕಾಮಗಾರಿ ಪೂರ್ಣಗೊಂಡಿದೆ. 4 ಹಾಗೂ 5ನೇ ಸ್ಲ್ಯಾಬ್‌ ನಿರ್ಮಾಣ ಆಗಬೇಕಿದೆ. ಜತೆಗೆ ವಿದ್ಯುತ್‌ ಸಂಪರ್ಕ ಸೇರಿ ಒಳಾಂಗಣದಲ್ಲಿ ಸಾಕಷ್ಟುಕೆಲಸ ಆಗಬೇಕು. ಹೀಗಾಗಿ ಮೇವರೆಗೆ ಕಾಮಗಾರಿ ಅವಧಿ ವಿಸ್ತರಿಸಲಾಗಿದೆ’ ಎಂದರು.

ಟೆರೇಸ್‌ನಲ್ಲೂ ವಾಹನ ಪಾರ್ಕಿಂಗ್‌: ಕಟ್ಟಡದ ಎರಡು ನೆಲಮಹಡಿಗಳಲ್ಲಿ ಸಾರ್ವಜನಿಕರಿಗೆ ಪಾರ್ಕಿಂಗ್‌ ವ್ಯವಸ್ಥೆ ಇದೆ. ಮೊದಲ ಮಹಡಿಯಲ್ಲಿ ಹೂವು-ಹಣ್ಣು ವ್ಯಾಪಾರಿಗಳಿಗೆ 181 ಮಳಿಗೆ ಮತ್ತು 1ರಿಂದ 4ನೇ ಮಹಡಿವರೆಗೆ ವಾಣಿಜ್ಯ ಸಂಕೀರ್ಣ ಇರಲಿವೆ. ಇಷ್ಟುಕಾಮಗಾರಿಗೆ ಮೂಲ ವೆಚ್ಚ .132 ಕೋಟಿ ನಿಗದಿಸಲಾಗಿತ್ತು. ಕಳೆದ ವರ್ಷ 5ನೇ ಮಹಡಿ, ಟೆರೇಸ್‌ನಲ್ಲಿ ವಾಹನ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲು ನಿರ್ಧರಿಸಿ ರಾರ‍ಯಂಪ್‌ ನಿರ್ಮಾಣಕ್ಕೆ .15 ಕೋಟಿ ವೆಚ್ಚ ಮಾಡಲಾಗುತ್ತಿದೆ.

Bengaluru: ಮಲ್ಲೇಶ್ವರದಲ್ಲಿ ಮಿನಿ ಜಯದೇವ ಆಸ್ಪತ್ರೆ ಶುರು

ವಿಳಂಬದಿಂದಾಗಿ ತಾತ್ಕಾಲಿಕ ಮಾರುಕಟ್ಟೆಯಲ್ಲಿ 8 ವರ್ಷ ಕಳೆದಿದ್ದೇವೆ. ಶೌಚಾಲಯ, ಕುಡಿವ ನೀರು, ವಿದ್ಯುತ್‌ ಸಂಪರ್ಕ ಇಲ್ಲ. ಭದ್ರತೆ ಇಲ್ಲದೆ ಅಂಗಡಿ ಕಳುವು ಸಾಮಾನ್ಯ ಎನ್ನಿಸಿದೆ. ಆದಷ್ಟುಬೇಗ ಕಾಮಗಾರಿ ಪೂರ್ಣಗೊಳಿಸಿ ಮಳಿಗೆ ನೀಡಬೇಕು.
-ಸೂರ್ಯಕುಮಾರ್‌, ಹೂವಿನ ವ್ಯಾಪಾರಿ

ಗುತ್ತಿಗೆದಾರರಿಗೆ ಮೇ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದ್ದೇವೆ. ಎರಡು ಸ್ಲ್ಯಾಬ್‌ ಸೇರಿ ಒಳಾಂಗಣ ಕಾಮಗಾರಿ ನಡೆಯಬೇಕಿದೆ.
-ಡಾ.ಎಚ್‌.ಆರ್‌.ಶಾಂತರಾಜಣ್ಣ, ಬಿಡಿಎ ಅಭಿಯಂತರ ಸದಸ್ಯ