ಮನೆಯಲ್ಲಿನ ಜಗಳದಿಂದ ಬೇಸತ್ತ ಯುವತಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಳು. ನದಿಯ ಮಧ್ಯಭಾಗದ ಮರವೊಂದರಲ್ಲಿ ಸಿಲುಕಿಕೊಂಡು ಪವಾಡಸದೃಶ ರೀತಿಯಲ್ಲಿ ಬದುಕುಳಿದಳು. ಸ್ಥಳೀಯರು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ರಕ್ಷಿಸಲ್ಪಟ್ಟಳು.
ಮಂಡ್ಯ (ಜು. 4): ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾಗಿರುವ ಯುವತಿಯೊಬ್ಬಳು ಮನೆಯಲ್ಲಿ ನಡೆಯುತ್ತಿದ್ದ ಜಗಳದಿಂದ ಬೇಸತ್ತು ಮಂಡ್ಯದಲ್ಲಿ ಹರಿಯುವ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ, ನದಿಯ ಮಧ್ಯಭಾಗದ ಮರವೊಂದರಲ್ಲಿ ಸಿಲುಕಿಕೊಂಡು ಜೀವ ಉಳಿಸಿಕೊಂಡಿದ್ದಾರೆ.
ಈ ಅಪರೂಪದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ ಬಳಿ ನಡೆದಿದ್ದು, ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿದೆ. ಇಡೀ ರಾತ್ರಿ ನದಿಯಲ್ಲಿನ ಮರವೊಂದರಲ್ಲಿಯೇ ಕುಳಿತು ಜೀವ ಭಯದಿಂದ ಪ್ರಾಣ ಉಳಿಸಿಕೊಂಡಿದ್ದು, ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ಸ್ಥಳೀಯರು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಯುವತಿಯನ್ನು ರಕ್ಷಿಸಲಾಗಿದೆ.
ಯುವತಿ ವಿವರ:
- ಹೆಸರು: ಪವಿತ್ರ (19)
- ನಿವಾಸ: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ
- ವಿದ್ಯಾಭ್ಯಾಸ: ಕಾನೂನು ವಿದ್ಯಾರ್ಥಿನಿ
- ಕಾರಣ: ಮನೆಯಲ್ಲಿನ ಜಗಳದಿಂದ ಬೇಸರ
ಮಂಡ್ಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪವಿತ್ರ ಮನೆಯಲ್ಲಿ ನಡೆಯುತ್ತಿದ್ದ ಜಗಳದಿಂದ ಮಾನಸಿಕ ಅಶಾಂತಿಗೆ ಒಳಗಾಗಿದ್ದಳು. ಗುರುವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿ ಹಂಗರಹಳ್ಳಿ ಬಳಿಯ ಕಾವೇರಿ ನದಿಗೆ ಹಾರಿ ಜೀವ ಬಿಡಲು ಹೊರಟಿದ್ದಳು. ಆದರೆ ನದಿಯ ಪ್ರವಾಹ ತೀವ್ರವಾಗಿದ್ದ ಕಾರಣ, ಸುಮಾರು 5 ಕಿ.ಮೀ ದೂರದವರೆಗೂ ಕೊಚ್ಚಿಕೊಂಡು ಹೋಗಿ, ಕೊನೆಗೆ ನದಿಯ ಮಧ್ಯಭಾಗದಲ್ಲಿ ಪೊದೆಯಂತೆ ಬೆಳದಿದ್ದ ಬೃಹತ್ ಗಾತ್ರದ ಮರವೊಂದಕ್ಕೆ ಸಿಲುಕಿಕೊಂಡಳು. ಇಡೀ ರಾತ್ರಿ ನದಿಯ ಮಧ್ಯದಲ್ಲಿ, ಮರದ ಮೇಲೆ ಕೂತು ಸಹಾಯಕ್ಕಾಗಿ ಕಾಯುತ್ತಿದ್ದಳು. ನದಿ ರಭಸವಾಗಿ ಹರಿವಿನ ನಡುವೆಯೇ ನಿಂತು ರಕ್ಷಣೆಗಾಗಿ ಕಿರುಚಿದ ಆಕೆಯ ಧ್ವನಿ ಬೆಳಗ್ಗೆ ಸ್ಥಳೀಯರ ಕಿವಿಗೆ ಬಿದ್ದಿದೆ.
ರಕ್ಷಣೆ ಕಾರ್ಯಾಚರಣೆ:
ಸ್ಥಳೀಯರು ತಕ್ಷಣವೇ ಪೋಲೀಸರಿಗೂ ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿದ್ದು, ಭಾರೀ ಪ್ರಯತ್ನದ ನಂತರ ಯುವತಿಯನ್ನು ಸುರಕ್ಷಿತವಾಗಿ ನದಿ ಮಧ್ಯದಿಂದ ಹೊರಗೆ ಕರೆತಂದಿದ್ದಾರೆ. ಅರಕೆರೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಹಾಗೂ ಸ್ಥಳೀಯರು ಸಂಗತಿಯಾಗಿ ಕಾರ್ಯ ನಿರ್ವಹಿಸಿದ ಈ ರಕ್ಷಣಾ ಕಾರ್ಯಾಚರಣೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾನ್ಯವಾಗಿ ನದಿಯಲ್ಲಿ ಪ್ರವಾಹ ಹೀಗೆ ಹರಿಯುತ್ತಿರುವ ಸಂದರ್ಭದಲ್ಲಿ ಯಾರಾದರೂ ಪಾರಾಗುವುದು ಅಪರೂಪ. ಪವಿತ್ರ ಜೀವ ಉಳಿಸಿಕೊಂಡದ್ದು ನಿಜಕ್ಕೂ ಪವಾಡ. ತಕ್ಷಣದ ಸಮಯದ ನಿರ್ಧಾರ, ಧೈರ್ಯ ಮತ್ತು ಸ್ಥಳೀಯರ ತ್ವರಿತ ಪ್ರತಿಕ್ರಿಯೆಯೇ ಈಕೆ ಜೀವ ಉಳಿಯಲು ಕಾರಣವೆಂಬುದರಲ್ಲಿ ಅನುಮಾನವಿಲ್ಲ. ಪವಿತ್ರ ಇದೀಗ ಚಿಕಿತ್ಸೆ ಪಡೆಯುತ್ತಿದ್ದು, ಮುಂದಿನ ಹಂತದಲ್ಲಿ ಕೌನ್ಸೆಲಿಂಗ್ ಮೂಲಕ ಪುನರ್ವಸತಿ ಕ್ರಮಗಳನ್ನು ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
