Bengaluru: ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ಸಾವು!
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನೀರು ಹಿಡಿಯುವಾಗ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರು (ಮಾ.13): ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ದಾರುಣ ಸಾವು ಕಂಡಿರುವ ಘಟನೆ ನಡೆದಿದೆ. ಚಾಮರಾಜಪೇಟೆಯ ಮಾರ್ಕೆಟ್ ರಸ್ತೆ ಆನಂದಪುರದಲ್ಲಿ ಘಟನೆ ನಡೆದಿದೆ, ಬೆಳಗ್ಗೆ 5.30ರ ವೇಳೆಗೆ ಮೋಟರ್ ಸ್ಟಾರ್ಟ್ ಮಾಡುವಾಗ ಕರೆಂಟ್ ತಗುಲಿ ಮಹಿಳೆ ಸಾವು ಕಂಡಿದ್ದಾಳೆ. ಸಾವು ಕಂಡ ಮಹಿಳೆಯನ್ನು 58 ವರ್ಷದ ಸೆಲ್ವಿ ಎಂದು ಗುರುತಿಸಲಾಗಿದೆ.ಮನೆ ಕೆಲಸ ಮಾಡಿ ಸೆಲ್ವಿ ಮನೆ ನಿವರ್ಹಿಸುತ್ತಿದ್ದಳು. ಸದ್ಯ ಮಹಿಳೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮನೆ ಕೆಲಸ ಮಾಡಿ ಸೆಲ್ವಿ 4 ಜನ ಮಕ್ಕಳನ್ನ ಸಾಕುತ್ತಿದ್ದಳು. 12 ವರ್ಷಗಳ ಹಿಂದೆ ಗಂಡನನ್ನು ಮಹಿಳೆ ಕಳೆದುಕೊಂಡಿದ್ದಳು. ಈಗ ತಂದೆ ಮತ್ತು ತಾಯಿಯನ್ನ ಕಳೆದುಕೊಂಡು 4 ಮಕ್ಕಳು ಅನಾಥರಾಗಿದ್ದಾರೆ. ತಾಯಿಯ ಶವದ ಎದುರು ಮಕ್ಕಳು ಕಣ್ಣೀರಿಡುತ್ತಿರುವ ದೃಶ್ಯ ಹೃದಯವಿದ್ರಾವಕವಾಗಿದೆ.
ಇದರ ಬೆನ್ನಲ್ಲೇ ಬಿಬಿಎಂಪಿ ವಿರುದ್ದ ರಸ್ತೆ ತಡೆ ನಡೆಸಿ ಜನರು ಪ್ರತಿಭಟನೆ ನಡೆಸಿದ್ದು, ಮಾರ್ಕೆಟ್ ರಸ್ತೆ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳ್ಳ ಬೆಳಗ್ಗೆ ಘಟನೆ ನಡೆದರೂ, ಪೊಲೀಸರು ಹಲವು ಗಂಟೆಗಳ ಬಳಿಕ ಆಗಮಿಸಿದ್ದಾರೆ.
ಇಲ್ಲಿರುವ ಯಾವ ಮನೆಗೂ ನೀರಿನ ಸಂಪರ್ಕ ಇಲ್ಲ. ದೊಡ್ಡ ಪೈಪ್ ನಲ್ಲಿ ಅಲ್ಲಲ್ಲಿ ಮೋಟರ್ ಕನೆಕ್ಷನ್ ನೀಡಲಾಗಿದೆ. 30 ವರ್ಷದಿಂದ ಇದೇ ಪರಿಸ್ಥಿತಿಯಲ್ಲಿ ಇದ್ದೇವೆ. ಬೆಳಿಗ್ಗೆ 3 ಗಂಟೆ ನೀರು ಬಿಟ್ಟು ಬೆಳಿಗ್ಗೆ 6 ಗಂಟೆಗೆ ನಿಲ್ಲಿಸುತ್ತಾರೆ ಎಂದು ಸ್ಥಳೀಯ ಜನರು ಆರೋಪ ಮಾಡಿದ್ದಾರೆ.
ಇದೇ ವೇಳೆ ರೋಡ್ ನಲ್ಲಿ ಪ್ರತಿಭಟನೆ ನಡೆಸದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ನ್ಯಾಯ ಸಿಗುವವರೆಗೆ ನಾವು ಇಲ್ಲಿಂದ ಕದಲಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಮಾರ್ಕೆಟ್ ರೋಡ್ ಕ್ಲೋಸ್ ಮಾಡಿ, ರಸ್ತೆಯಲ್ಲಿ ಕೂತು ನಿವಾಸಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.
ಅನಂದಪುರ ಮಹಿಳೆಯ ಆಕ್ರೋಶ: ಮೂಲಭೂತ ಸೌಕರ್ಯ ನೀಡೋದರಲ್ಲೂ ಶಾಸಕ ಜಮೀರ್ ಅಹಮ್ಮದ್ ಖಾನ್ ತಾರತಮ್ಯ ಮಾಡುತ್ತಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ. ಇಲ್ಲಿ ಹೆಚ್ಚಾಗಿ ಹಿಂದೂ ಜನರು ವಾಸ ಮಾಡ್ತಿದ್ದಾರೆ. ಪಕ್ಕದಲ್ಲೇ ಇರುವ ಟಿಪ್ಪು ನಗರ ನೋಡಿ. ಅಲ್ಲಿ ಹೆಚ್ಚಾಗಿ ಮುಸ್ಲಿಂ ಜನರಿದ್ದಾರೆ. ಅವರಿಗೆ ಮನೆ ಮನೆಗೂ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕೇಳಿದ್ರೆ ಇದು ಸ್ಲಂ ಅಂತಾರೆ,ನಾವು ವೋಟ್ ಹಾಕಿಲ್ವಾ. ಇಲ್ಲಿ ನೀರು,ಚರಂಡಿ ವ್ಯವಸ್ಥೆ ಇಲ್ಲ ಎಂದು ಆಕ್ರೋಸ ವ್ಯಕ್ತಪಡಿಸಿದ್ದಾರೆ.
ಸಾವನ್ನ ಮಗ್ಗಲಲ್ಲೇ ಇಟ್ಟು ಆನಂದಪುರ ಜನ ಓಡಾಡುತ್ತಿದ್ದಾರೆ. ಪೈಪ್ ಲೈನ್ ಗೆ ಮೋಟರ್ ಅಳವಡಿಸಲು ವೈಯರ್ ಕನೆಕ್ಷನ್ ಇಡಲಾಗಿದೆ. ಅದನ್ನ ಹಾಗೇ ಇಟ್ಟು ಜನ ಓಡಾಡುತ್ತಿದ್ದಾರೆ. ಮಕ್ಕಳು ಶಾಲೆಗೆ ಓಡಾಡೋದು ಕೂಡ ಇದೇ ರಸ್ತೆಯಲ್ಲಿ . ಸ್ವಲ್ಪ ಯಾಮಾರಿದ್ರು ಸಾವಾಗೋದು ನಿಶ್ಚಿತ ಎನ್ನುವಂಥ ಪರಿಸ್ಥಿತಿ ಇದೆ.
ಚಾಮರಾಜಪೇಟೆ ಪಶು ಆಸ್ಪತ್ರೆ ಜಾಗ ವಾಪಸ್ ಪಡೆದ ಸರ್ಕಾರ
ಪೊಲೀಸರಿಂದ ಬೆದರಿಕೆ: ರಕ್ಷಣೆ ಕೊಡೊ ಪೊಲೀಸರಿಂದಲೇ ಪ್ರತಿಭಟನಾಕಾರಿಗೆ ಬೆದರಿಕೆ ಹಾಕಲಾಗಿದೆ. ರಸ್ತೆ ತಡೆ ನಡೆಸಿ ಆನಂದಪುರ ಜನ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಮುಂದುವರೆಸಿದರೆ ಎಫ್ಐಆರ್ ಮಾಡೋದಾಗಿ ಪೊಲೀಸರು ಬೆದರಿಕೆ ಹಾಕಿದ್ದಾರೆ. ಇನ್ನೊಂದೆಡೆ ನಮಗೆ ನ್ಯಾಯ ಬೇಕು ಎಂದು ಜನ ಪಟ್ಟು ಹಿಡಿದ್ದಾರೆ. ಎಷ್ಟೇ ಮನವಿ ಮಾಡಿದ್ರು ಯಾರು ಬಂದಿಲ್ಲ. ಇವತ್ತು ನಾವು ಪ್ರತಿಭಟನೆ ಮಾಡಿದ್ರೆ ಎಫ್ಐಆರ್ ಮಾಡ್ತಿವಿ ಅಂತಾರೆ ಎಂದು ಆರೋಪ ಮಾಡಿದ್ದಾರೆ. ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವ ಸ್ಥಳೀಯರನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದ್ದು, ಸ್ಥಳಕ್ಕೆ ಬಿಎಂಟಿಸಿ ಬಸ್ ಅನ್ನು ತರಿಸಿದ್ದಾರೆ.
ಬೆಂಗಳೂರಿನ ಟ್ರಾಫಿಕ್‌ನಲ್ಲಿ ಕಾಂಗ್ರೆಸ್ ನಾಯಕಿ ಅಕ್ಷತಾಗೆ ಮಿಡಲ್ ಫಿಂಗರ್ ತೋರಿಸಿದ ಯುವಕ!