ಬೆಂಗಳೂರು[ನ.27]: ನಗರದಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಡಾ.ಮರಿಗೌಡ ರಸ್ತೆಯಲ್ಲಿ ಡೈರಿ ವೃತ್ತದಿಂದ ಹೊಸೂರು ರಸ್ತೆ ಜಂಕ್ಷನ್‌ ವರೆಗಿನ ಎಡಬದಿಯ 1.23 ಕಿ.ಮೀ. ರಸ್ತೆಯಲ್ಲಿ ಬಿಬಿಎಂಪಿ ಶೀಘ್ರ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭಿಸಲಿದ್ದು, ಸುಮಾರು 60 ದಿನಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌ ಆಗಲಿದೆ.

ಈ ಸಂಬಂಧ ಬಿಬಿಎಂಪಿ ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಡಾ.ಮರಿಗೌಡ ರಸ್ತೆಯ ಡೈರಿ ವೃತ್ತದಿಂದ ಹೊಸೂರು ರಸ್ತೆ ಜಂಕ್ಷನ್‌ ಕಡೆಗೆ ಹೋಗುವ ಮಾರ್ಗದಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭಿಸಲು ನಗರ ಸಂಚಾರ ಪೊಲೀಸರ ಅನುಮತಿ ದೊರೆತಿದೆ. 60 ದಿನಗಳಲ್ಲಿ ಕಾಮಗಾರಿ ಮುಗಿಸಲು ಪೊಲೀಸರು ಅನುಮತಿ ನೀಡಿದ್ದು ಶೀಘ್ರದಲ್ಲೇ ವೈಟ್‌ಟಾಪಿಂಗ್‌ ಕೆಲಸ ಆರಂಭಿಸಲಾಗುವುದು. ಈ ಕಾಮಗಾರಿ ಮುಗಿಯುವವರೆಗೆ ಆ ಭಾಗದ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌ ಮಾಡಿ ಪೊಲೀಸರು ಗುರುತಿಸಿರುವ ಪರಾರ‍ಯಯ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಮಾರ್ಗ ಬದಲಾವಣೆ: ಡೈರಿ ವೃತ್ತದಿಂದ ಹೊಸೂರು ರಸ್ತೆ ಜಂಕ್ಷನ್‌ ಕಡೆಗೆ ಸಾಗುವ ಎಡಭಾಗದ ಮಾರ್ಗ ಬಂದ್‌ ಆಗುರುವುದರಿಂದ ವಾಹನಗಳನ್ನು ಡೈರಿ ವೃತ್ತದ ಬಳಿಯೇ ಅದೇ ರಸ್ತೆಯ ಬಲಭಾಗದ ರಸ್ತೆಗೆ ಸಂಚಾರ ಬದಲಿಸಿ ಹೊಸೂರು ರಸ್ತೆ ಜಂಕ್ಷನ್‌ ಕಡೆಗೆ ಸಾಗಲು ಅವಕಾಶ ಮಾಡಿಕೊಡಲಾಗುತ್ತದೆ. ಹಾಗಾಗಿ ಹೊಸೂರು ರಸ್ತೆ ಜಂಕ್ಷನ್‌ನಿಂದ ಡೈರಿ ವೃತ್ತದ ಕಡೆಗೆ ಹೋಗುವ ವಾಹನಗಳು ಬದಲೀ ಮಾರ್ಗಗಳಲ್ಲಿ ಸಂಚರಿಸಬೇಕಾಗುತ್ತದೆ. ಈ ವಾಹನಗಳು ಹೊಸೂರು ರಸ್ತೆಯ ಸೆಂಟ್‌ಜಾನ್ಸ್‌ ಕ್ರಾಸ್‌ ರೋಡ್‌ ಜಂಕ್ಷನ್‌ ಮೂಲಕ ಸಂಚರಿಸಲು ಪೊಲೀಸರೊಂದಿಗೆ ಚರ್ಚಿಸಿ ಸೂಕ್ತ ಪರ್ಯಾಯ ಮಾಗದ ವ್ಯವಸ್ಥೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಅನುಮತಿ ಸಿಕ್ಕು 13 ದಿನ ಆಯ್ತು:

ಇನ್ನು, ಈ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಆರಂಭಿಸಲು ನ.13ರಂದೇ ನಗರದ ಸಂಚಾರಿ ಪೊಲೀಸರು ಅನುಮತಿ ನೀಡಿದ್ದಾರೆ. ಆದರೆ, ಬಿಬಿಎಂಪಿ ಇದುವರೆಗೂ ಕಾಮಗಾರಿ ಆರಂಭಿಸದೆ ತಡ ಮಾಡಿದೆ. ಇದರಿಂದ ಪೊಲೀಸ್‌ ಇಲಾಖೆ ನೀಡಿದ 60 ದಿನಗಳ ಅನುಮತಿಯಲ್ಲಿ 13 ದಿನಗಳು ಈಗಾಗಲೇ ಕಳೆದು ಹೋದಂತಾಗಿದೆ ಎನ್ನಲಾಗುತ್ತಿದೆ. ಈ ರಸ್ತೆಯ ಉಸ್ತುವಾರಿ ಹೊತ್ತ ಕಾರ್ಯಪಾಲಕ ಅಭಿಯಂತರ (ಯೋಜನೆ-ಕೇಂದ್ರ) ಹುದ್ದೆಗೆ ಕಳೆದ ಒಂದೂವರೆ ತಿಂಗಳಲ್ಲಿ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಘತ ಅಹಮದ್‌ ಎಂಬ ಕಾರ್ಯಪಾಲಕ ಅಭಿಯಂತರ ಈ ಹುದ್ದೆಯಲ್ಲಿದ್ದಾಗಲೇ ಪೊಲೀಸ್‌ ಇಲಾಖೆಯಿಂದ ಕಾಮಗಾರಿಗೆ ಅನುಮತಿ ಸಿಕ್ಕಿದೆ. ಆ ನಂತರ ಆ ಹುದ್ದೆಗೆ ಕೆಂಪೇಗೌಡ ಎಂಬ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಕೆಲ ದಿನಗಳ ಹಿಂದಷ್ಟೆರಾಧಾಕೃಷ್ಣ ಎಂಬ ಹೊಸ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಅಧಿಕಾರಿಗಳ ಬೇಕಾಬಿಟ್ಟಿವರ್ಗಾವಣೆಯಿಂದ ವೈಟ್‌ ಟಾಪಿಂಗ್‌ ಕಾಮಗಾರಿ ತಡವಾಗುತ್ತಿದೆ ಎಂಬ ಆರೋಪ ಬಿಬಿಎಂಪಿ ವಲಯದಲ್ಲೇ ಕೇಳಿಬರುತ್ತಿದೆ.